ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಆಯ್ಕೆ ಅಸಿಂಧು : ಹೈಕೋರ್ಟ್‌ ಆದೇಶ

ಬೆಂಗಳೂರು : ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಪ್ರಜ್ವಲ್‌ ರೇವಣ್ಣ ಆಯ್ಕೆಯನ್ನು ಹೈಕೋರ್ಟ್‌ ಅಸಿಂಧುಗೊಳಿಸಿದೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಮೊಮ್ಮಗ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಶುಕ್ರವಾರ ಕರ್ನಾಟಕ ಹೈಕೋರ್ಟ್‌  ಆದೇಶ ಮಾಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಪ್ರಜ್ವಲ್‌ ರೇವಣ್ಣ ಈಗ ಅನರ್ಹತೆ ಭೀತಿಯಲ್ಲಿದ್ದಾರೆ. ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಆಯ್ಕೆ ಅಸಿಂಧುಗೊಳಿಸಿರುವುದು ಪ್ರಜ್ವಲ್‌ ರೇವಣ್ಣಗೆ ಭಾರೀ ಹಿನ್ನಡೆಯಾಗಿದೆ.
ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಹಾಲಿ ಜೆಡಿಎಸ್‌ ಶಾಸಕರಾಗಿರುವ ಎ ಮಂಜು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿದ್ದ ಜಿ ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ. ಪ್ರಜ್ವಲ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ತನ್ನನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಎ ಮಂಜು ಅವರ ಕೋರಿಕೆಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.

ಆದಾಯ ತೆರಿಗೆ ವಿವರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಅಂಕಿ ಅಂಶಗಳಿಂದ ಕೂಡಿದೆ ಎಂದು ದೂರುದಾರರು ಗಂಭೀರ ಆರೋಪ ಮಾಡಿದ್ದರು. ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನ್ಯಾಯಮೂರ್ತಿ ಕೆ.ನಟರಾಜನ್​ ಅವರಿದ್ದ ಪೀಠವು ಸಂಸತ್​ ಸದಸ್ಯತ್ವದಿಂದ ಪ್ರಜ್ವಲ್​ ರೇವಣ್ಣರನ್ನು ಅನರ್ಹಗೊಳಿಸಿ ತೀರ್ಪು ನೀಡಿದೆ.
ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿಸಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಪ್ರಜ್ವಲ್‌ ರೇವಣ್ಣ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಹಾಗಾಗಿ, ಈಗ ಪ್ರಜ್ವಲ್‌ ರೇವಣ್ಣ ಅವರು ಮೇಲ್ಮನವಿ ಸಲ್ಲಿಸಬೇಕಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement