ಅಧಿಕಾರಿಗಳು ನಮ್ಮ ಮಾತು ಕೇಳ್ತಿಲ್ಲ, ನೀವೇ ಬಂದು ಸಭೆ ಮಾಡಿ ; ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕಾಂಗ್ರೆಸ್‌ ಶಾಸಕ ಬಸವರಾಜ ರಾಯರೆಡ್ಡಿ

ಕೊಪ್ಪಳ : ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ‌ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತೆ ಪತ್ರ ಬರೆದಿದ್ದಾರೆ.
ಕಳೆದ ಬಾರಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಅವರು, ಈಗ ಅಧಿಕಾರಿಗಳ ಸಭೆ ಕರೆಯಲು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಪತ್ರ ಬರೆದಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಅವರು ಒತ್ತಾಯ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಫೋನ್‌ ಕರೆ ಸ್ವೀಕರಿಸುತ್ತಿಲ್ಲ. ನೀವೇ ಬಂದು ಜೆಸ್ಕಾಂ, ಕೆಪಿಟಿಸಿಎಲ್‌ ಅಧಿಕಾರಿಗಳ ಸಭೆ ಕರೆಯಲು ಸಿಎಂಗೆ ಆಗ್ರಹಿಸಿದ್ದಾರೆ.
ಅವರು ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಅವರು ಕೇಳುತ್ತಿಲ್ಲ. ಕಿರಿಯ ಅಧಿಕಾರಿಗಳು ಕೆಲಸಗಳು ಆಗದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ನನ್ನ ಸೂಚನೆಗೂ ಹಿರಿಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ ಎಂಬುದಾಗಿ ಶಾಸಕ ರಾಯರೆಡ್ಡಿ ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದಾರೆ.

ವಿದ್ಯುತ್‌ ಉಪಕರಣಗಳ ಪೂರೈಕೆ ಮತ್ತು ಸಮರ್ಪಕ ವಿದ್ಯುತ್‌ ಪೂರೈಸುವ ಕುರಿತು ಕೂಡಲೇ ಕಲಬುರಗಿ ವಿಭಾಗದ ಜೆಸ್ಕಾಂ (ಗು.ವಿ.ಸ.ಕಂ.) ಅಧಿಕಾರಿಗಳ ಸಭೆ ಕರೆಯಬೇಕು. ಕಲಬುರಗಿ ವಿಭಾಗದ ಕೊಪ್ಪಳ, ಕಲಬುರಗಿ, ಬೀದರ, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಜೆಸ್ಕಾಂನಿಂದ ರೈತರ ಜಮೀನಿಗೆ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದ್ದು, ಇದರಲ್ಲಿ ಗಂಗಾ ಕಲ್ಯಾಣ ಹಾಗೂ ರೈತರ ಪಂಪ್‌ಸೆಟ್‌ಗಳು ಒಳಗೊಂಡಿವೆ. ಆದರೆ, ಕಳೆದ ಎರಡು ತಿಂಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ವಿದ್ಯುತ್‌ ಪೂರೈಕೆ ಉಪಕರಣಗಳಾದ 25 ಕೆವಿಎ, 63 ಕೆವಿಎ, 100 ಕೆವಿಎ ಟ್ರಾನ್ಸ್‌ಫಾರ್ಮರ್‌ ಅಳವಡಿಕೆ ಹಾಗೂ ಬದಲಾವಣೆ ಮಾಡಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ಈ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದ ಅಲ್ಪಸ್ವಲ್ಪ ಬಿತ್ತಿದ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ಸದ್ಯಕ್ಕೆ ಇರುವ ಬೆಳೆಯನ್ನಾದರೂ ರಕ್ಷಿಸಲು ರೈತರು ಪಂಪ್‌ಸೆಟ್‌ಗಳ ಮೂಲಕ ಬೆಳೆಗೆ ನೀರುಣಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಜೆಸ್ಕಾಂ ವ್ಯಾಪ್ತಿಯಲ್ಲಿ ಟ್ರಾನ್ಸ್​ಫಾರ್ಮರ್ ಅವಳಡಿಕೆಯಾಗುತ್ತಿಲ್ಲ. ಯಲಬುರ್ಗಾ ಕ್ಷೇತ್ರವೊಂದಕ್ಕೆ 200 ಟ್ರಾನ್ಸ್​ಫಾರ್ಮರ್ ​ಗಳ ಅಗತ್ಯವಿದೆ. ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ, ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರ ಜಮೀನಿಗೆ ವಿದ್ಯುತ್ ನೀಡುವುದಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆದು ಚರ್ಚಿಸುವಂತೆ ಅವರು ಒತ್ತಾಯ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement