ಶಿಕ್ಷಕರದ್ದು ವೈವಿಧ್ಯಮಯ ಪಾತ್ರ….

(ಶಿಕ್ಷಕರ ದಿನಾಚರಣೆ ನಿಮಿತ್ತ ಲೇಖನ)
ಭಾರತದಲ್ಲಿ ಶಿಕ್ಷಣ ಪದ್ಧತಿಯು ಮಹಾಭಾರತದ ಕಾಲದಿಂದ ಆರಂಭಗೊಂಡಿದ್ದು ದ್ರೋಣಾಚಾರ‍್ಯ, ಸೌಂದೀಪಿನಿ ಮುನಿ, ವಶಿಷ್ಠ ಋಷಿ ಮುಂತಾದವರು ಆಚಾರ‍್ಯ ಗುರುಗಳಾಗಿ ಅನೇಕ ಶಿಷ್ಯರನ್ನು ನಾಡಿಗೆ ನೀಡಿದ್ದು, ಈ ಪರಂಪರೆ ಈಗಲೂ ಮುಂದುವರೆದಿದೆ. ಟ್ಯಾಗೋರ್ ಅವರು “ಶಿಕ್ಷಕ ಸ್ವತಃ ಕಲಿಕೆಯಲ್ಲಿ ತೊಡಗದೇ ಇದ್ದರೆ, ಇನ್ನಿತರರಿಗೆ ಪರಿಣಾಮಕಾರಿಯಾಗಿ ಬೋಧಿಸಲಾರ” ಎಂದು ಹೇಳಿದ್ದರು. ಇಂದು ಶಿಕ್ಷಕರು ನಿರಂತರ ಕಲಿಕೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶ್ರಮಿಸುತ್ತಿದ್ದಾರೆ.
ಯುವಸಮೂಹದ ಮೇಲೆ ಒಂದು ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಸಮರ್ಥ ಸ್ವಾಭಿಮಾನಿ, ಸ್ವಾವಲಂಬಿ, ಪ್ರಾಮಾಣಿಕ, ಸಮಯ ನಿಷ್ಠೆ-ಪರಿಸರ ಪ್ರಜ್ಞೆ ಹೊಂದಿದ ವಿದ್ಯಾರ್ಥಿಗಳನ್ನು ರೂಪಿಸುವ ಹೊಣೆ ಶಿಕ್ಷಕರದು. ವಿದ್ಯಾರ್ಥಿಗಳು ಹೇಗೆ ಮತ್ತು ಏನು ನಿರಂತರವಾಗಿ ಕಲಿಯುತ್ತಾನೆಂಬುದನ್ನು ಶಿಕ್ಷಕರು ಗಮನಿಸಬೇಕು. ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕ ಮತ್ತು ಪ್ರೋತ್ಸಾಹಕ ಪ್ರೇರಕನಾಗಿ ಶಿಕ್ಷಕ ಕಾರ್ಯನಿವಹಿಸಬೇಕಾಗಿದೆ. ಕಲಿಕೆಯ ಪರಿಸರವನ್ನು ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳಿಗೆ ಕಾಳಜಿ ಪೂರ್ವಕವಾಗಿ ವಿಚಾರಿಸಲು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲು ಮತ್ತು ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಆತ್ಮವಿಶ್ವಾಸವನ್ನು ಜಾಗ್ರತಗೊಳಿಸಬೇಕು. ಎದುರಾದ ಸಮಸ್ಯೆಗಳು ಅವುಗಳಿಗೆ ಕಂಡು ಕೊಂಡ ಪರಿಹಾರ ಸೂಚಿಸಲು ಅವಕಾಶ ಮಾಡಿಕೊಡಬೇಕು. ವಿದ್ಯಾರ್ಥಿಗಳ ಜ್ಞಾನದ ಪ್ರಗತಿಯ ಬಗ್ಗೆ ಸದಾ ನಿಗಾವಹಿಸಲು ಚಿಂತನೆ ಮಾಡಲು ಹಚ್ಚಬೇಕು ಹಾಗೂ ಗುರಿತಲುಪಲು ಮಾರ್ಗದರ್ಶನ ನೀಡಬೇಕು.
ಕಲಿಕೆಯ ಬದ್ಧತೆ, ಕರ್ತವ್ಯ, ಜವಾಬ್ದಾರಿ, ಆಸಕ್ತಿ ಕಲಿತ ಮತ್ತು ಕಲಿಯುವ ವಿದ್ಯಾರ್ಥಿಗಳ ಅನಿಸಿಕೆಗಳನ್ನು ಗೌರವಿಸಬೇಕು. ಶಿಕ್ಷಕರು ಶೈಕ್ಷಣಿಕವಲ್ಲದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೈಕ್ಷಣಿಕವಾಗಿ ಪಠ್ಯಕ್ರಮ ಸಿದ್ಧತೆ, ಸಾಧನ-ಸಾಮಗ್ರಿ ಸಲಕರಣೆಗಳ ಪಟ್ಟಿ ತಯಾರಿಕೆ ಮತ್ತು ಅಂದಾಜು ಬೆಲೆಪಟ್ಟಿ ತಯಾರಿಕೆ ಇತ್ಯಾದಿ. ಕೆಲವರು ವಿದ್ಯಾರ್ಥಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡರೆ ಕೆಲವರು ಸಂಶೋಧನೆ, ಬೋಧನೆ, ಆಡಳಿತದಲ್ಲಿ ನಿರತವಾಗಿದ್ದಾರೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಪ್ರಮುಖ ಸಂಪನ್ಮೂಲವಾಗಿದ್ದಾರೆ. ಮಾಹಿತಿ, ಜ್ಞಾನ ರವಾನೆ ಮತ್ತು ಪಠ್ಯಕ್ರಮವನ್ನು ಅನುಸರಿಸಿ ಕಲಿಸುವುದು. ಉಪನ್ಯಾಸವು ಮಾಹಿತಿ ಒದಗಿಸುವಲ್ಲಿ ಸಹಾಯಕವಾಗಿರುತ್ತದೆ. ಶಿಕ್ಷಕನು ವೃತ್ತಿಯಲ್ಲಿ ವರ್ಗಕೋಣೆಯಲ್ಲಿ ಮಾದರಿಯಾಗಿರಬೇಕು. ಕಲಿಸುವಲ್ಲಿ ಸಂಘಟನೆ, ಮಾರ್ಗದರ್ಶನ, ಸಹಾಯ-ಸಹಕಾರ ವರ್ತನೆಯಲ್ಲಿ ಮಾದರಿಯಾಗಿರಬೇಕು. ಸಹಾಯಕರಾಗಿ, ನಿಗಾವಹಿಸಿ ಯೋಗಕ್ಷೇಮ ನೋಡಿಕೊಳ್ಳುವವರಾಗಿಯೂ ಕಾರ್ಯನಿರ್ವಹಿಸಬೇಕು.
ಶಿಕ್ಷಕರಿಗೆ ವಿದ್ಯಾರ್ಥಿಗಳ ಸಾಧನೆಯನ್ನು ಮೌಲ್ಯಮಾಪನ ಮಾಡುವ ಗುರುತರವಾದ ಹೊಣೆಗಾರಿಕೆ ಇದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ವಿಶಿಷ್ಟವಾದ ಕಾರ್ಯ. ಕಲಿಕೆ ಮತ್ತು ಮೌಲ್ಯಮಾಪನ ಶಿಕ್ಷಕರ ಮೂಲಭೂತಕಾರ್ಯಗಳು ಪಠ್ಯಕ್ರಮವನ್ನು ಕೂಡ ಮೌಲ್ಯಮಾಪನ ಮಾಡುವ ಜವಾಬ್ದಾರಿ ಶಿಕ್ಷಕನಿಗಿರಬೇಕು. ವಿದ್ಯಾರ್ಥಿಗಳ ಸಾಧನೆ, ಕೋರ್ಸುಗಳ ಪ್ರಸ್ತುತತೆ, ತಮ್ಮನ್ನೇ ತಾವೇ ಮೌಲ್ಯಮಾಪನ ಪಠ್ಯಕ್ರಮ ಮತ್ತು ಕೋರ್ಸುಗಳ ಬಗ್ಗೆ ಯೋಜನೆ ತಯಾರಿಸುವಲ್ಲಿ ಮತ್ತು ಕಾರ್ಯರೂಪ ತರುವಲ್ಲಿ ಪ್ರಮುಖ ಪಾತ್ರವಹಿಸುವರು.
ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿಯೂ ಮಹತ್ವದ ಪಾಲು ಶಿಕ್ಷಕರದ್ದು. ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುತವರ್ಜಿ ವಹಿಸುತ್ತಾರೆ. ಶಿಕ್ಷಣದ ವ್ಯಾಪ್ತಿ, ಪರಿಣಾಮಕಾರಿ ಬೋಧನೆಗೆ ಕಲಿಕಾ ಸಾಮಗ್ರಿಗಳು ಪೂರಕವಾಗಿರುತ್ತವೆ. ವಿದ್ಯುನ್ಮಾನ ತಾಂತ್ರಿಕತೆಯನ್ನು ಬಳಸಿಕೊಂಡು ಅಭ್ಯಾಸಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಿಕ್ಷಕರ ವ್ಯಕ್ತಿತ್ವ, ವರ್ತನೆ, ವಿದ್ಯಾರ್ಥಿ ಶಿಕ್ಷಕ ಸಮುದಾಯ ಸಮಾನದೊಂದಿನ ಸಂಬಂಧಗಳು ಬೋಧನೆಯಲ್ಲಿ ಪ್ರಮುಖವಾಗುತ್ತವೆ. ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಬೇಕು-ಬೇಡಿಕೆಗಳಿಗೆ ಸ್ಪಂದಿಸಬೇಕು. ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಬೇಕು. ಸಮಸ್ಯೆಗಳಿಗೆ, ಪರಿಹಾರವನ್ನು ಸೂಚಿಸಬೇಕು. ಭಾವಿ ಜೀವನಕ್ಕೆ ಮಾರ್ಗದರ್ಶಕನಾಗಿ ದಾರಿದೀಪದಂತಿರಬೇಕು. ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಗೌರವಿಸಿ ಪಾಲಿಸಿಕೊಂಡು ಹೋಗಬೇಕು. ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳಬೇಕು. ಸಂತೋಷವನ್ನು ಹಂಚಿಕೊಳ್ಳಬೇಕು. ಸಂಯಮದಿಂದ ಸಮಸ್ಯೆಗಳನ್ನು ಆಲಿಸಬೇಕು. ಪ್ರೋತ್ಸಾಹದಾಯಕ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳನ್ನು ಸ್ವಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳಬಾರದು.
ಡೀನ್ ಪಾಟೆರನ್ ಅವರು, “ಉತ್ತಮ ಶಿಕ್ಷಕರು ಉತ್ಸಾಹಿಯೂ, ದಯಾಮಯಿಯೂ, ಹೊಂದಿಕೊಳ್ಳುವ ಗುಣವುಳ್ಳವನೂ, ಆಶಾವಾದಿಯೂ, ಪ್ರೋತ್ಸಾಹಿಸುವವು, ಚತುರನು ಸ್ಪಷ್ಠ ವಿಚಾರಿಯೂ, ವಿನಯಶೀಲನೂ, ಸಹಾನೂಭೂತಿಯುಳ್ಳವನೂ, ತನ್ನ ವಿಷಯವನ್ನು ತಿಳಿಸದವನು, ತನ್ನ ಜವಾಬ್ದಾರಿಯನ್ನು ಅರಿತವನು, ಸಮಯನಿಷ್ಠನು, ಪ್ರಾಮಾಣಿಕನೂ, ಧೈರ್ಯಶಾಲಿಯೂ ಆಗಿರಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಗುಣಲಕ್ಷಣಗಳನ್ನು ಶಿಕ್ಷಕರಾದವರು ಅಳವಡಿಸಿಕೊಂಡು ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಶ್ರಮಿಸುತ್ತಾ, ಶಿಕ್ಷಣ ಕ್ಷೇತ್ರವನ್ನು ಯಶಸ್ವಿಗೊಳಿಸುವದರೊಂದಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನವರ ಜೀವನ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
-ಡಾ.ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement