ʼಇಂಡಿಯಾʼವನ್ನು ʼಭಾರತʼ ಎಂದು ಮರುನಾಮಕರಣ ಮಾಡಲಿದೆಯೇ ಕೇಂದ್ರ ಸರ್ಕಾರ? ಭಾರೀ ಚರ್ಚೆಗೆ ಕಾರಣವಾದ ರಾಷ್ಟ್ರಪತಿ ಭವನದ ಆಹ್ವಾನ ಪತ್ರಿಕೆ

ನವದೆಹಲಿ : ಸೆಪ್ಟೆಂಬರ್ 18ರಿಂದ 22ರ ವರೆಗೆ ನಿಗದಿಯಾಗಿರುವ ಸಂಸತ್ತಿನ ಮುಂಬರುವ ವಿಶೇಷ ಅಧಿವೇಶನದಲ್ಲಿ ʼಇಂಡಿಯಾʼವನ್ನು ಭಾರತ ಎಂದು ಮರುನಾಮಕರಣ ಮಾಡುವ ನಿರ್ಣಯವನ್ನು ಸರ್ಕಾರವು ತರಬಹುದು. ಭಾರತದ ಸಂವಿಧಾನವು ಪ್ರಸ್ತುತ ದೇಶವನ್ನು “ಇಂಡಿಯಾ, ಅದು ಭಾರತ…(“India, that is Bharat) ” ಎಂದು ಉಲ್ಲೇಖಿಸುತ್ತದೆ, ಆದರೆ ಇದನ್ನು ಸರಳವಾಗಿ “ಭಾರತ” ಎಂದು ತಿದ್ದುಪಡಿ ಮಾಡುವ ಒತ್ತಾಯವೂ ಹೆಚ್ಚುತ್ತಿದೆ.
ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ʼಇಂಡಿಯಾʼವನ್ನು ʼಭಾರತʼ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆ ತೀವ್ರಗೊಂಡಿದ್ದು, ಭಾರತವನ್ನು ಮರುನಾಮಕರಣ ಮಾಡಲು ಕೇಂದ್ರವು ನಿರ್ಣಯವನ್ನು ತರಬಹುದು ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ವಾರಾಂತ್ಯದ G20 ಶೃಂಗಸಭೆಯಲ್ಲಿ ಭಾಗವಹಿಸುವ ರಾಷ್ಟ್ರಗಳ ಮುಖ್ಯಸ್ಥರಿಗೆ ಅಧಿಕೃತ ಆಹ್ವಾನದಲ್ಲಿ ಮೊದಲ ಬಾರಿಗೆ “ಪ್ರೆಸಿಡೆಂಟ್‌ ಆಫ್‌ ಭಾರತ” (President of Bharat) ಪದವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ (President of India)” ಬದಲಿಗೆ ಬಳಸಲಾಗಿದೆ. ದೇಶವು ಬೃಹತ್‌ ಶೃಂಗಸಭೆ ಆಯೋಜಿಸುವುದರಿಂದ ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾಮಕರಣದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 9 ರಂದು ಔತಣಕೂಟಕ್ಕೆ G20 ವಿದೇಶಿ ನಾಯಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ (President of India)” ಬದಲಿಗೆ “ಪ್ರೆಸಿಡೆಂಟ್‌ ಆಫ್‌ ಭಾರತ” (President of Bharat) ಎಂದು ಬಳಸಲಾಗಿದೆ. ಯಾವುದೇ ಅಧಿಕೃತ ಕಾರ್ಯಕ್ರಮಕ್ಕಾಗಿ ʼಭಾರತʼ ಎಂದು ನಾಮಕರಣದ ಮೊದಲ ಬದಲಾವಣೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

“ಭಾರತ” ಎಂಬ ಪದವು ಸಂವಿಧಾನದಲ್ಲಿಯೂ ಇದೆ ಎಂದು ಅಧಿಕಾರಿಗಳು ಗಮನಸೆಳೆದಿದ್ದಾರೆ. “ಇಂಡಿಯಾ, ಅದು ಭಾರತ (“India, that is Bharat) ರಾಜ್ಯಗಳ ಒಕ್ಕೂಟವಾಗಿರುತ್ತದೆ” ಎಂದು ಅದು ಸಂವಿಧಾನದ 1ನೇ ವಿಧಿ ಹೇಳುತ್ತದೆ.
ವಿದೇಶಿ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾದ G20 ಕಿರುಪುಸ್ತಕದಲ್ಲಿ “ಭಾರತ” ಎಂದು ಬಳಸಲಾಗಿದೆ. ಭಾರತದ G20 ಅಧ್ಯಕ್ಷತೆ ವೇಳೆ ಸಾವಿರಾರು ವರ್ಷಗಳಿಂದ ಭಾರತದ ಶ್ರೀಮಂತ ಪ್ರಜಾಸತ್ತಾತ್ಮಕ ನೀತಿಯನ್ನು ಎತ್ತಿ ಹಿಡಿಯಲು “Bharat, The Mother Of Democracy” ಎಂಬ ಶೀರ್ಷಿಕೆಯಡಿ ವಿದೇಶಿ ಪ್ರತಿನಿಧಿಗಳಿಗೆ ಹಸ್ತಾಂತರಿಸುವ G20 ಕಿರುಪುಸ್ತಕದಲ್ಲಿ “ಭಾರತ” ಎಂಬ ಪದವನ್ನು ಬಳಸಲಾಗಿದೆ.
“ಭಾರತ, ಅದು ಇಂಡಿಯಾ, ಆಡಳಿತದಲ್ಲಿ ಜನರ ಒಪ್ಪಿಗೆಯನ್ನು ತೆಗೆದುಕೊಳ್ಳುವುದು ಆರಂಭಿಕ ದಾಖಲಿತ ಇತಿಹಾಸದಿಂದಲೂ ಜೀವನದ ಭಾಗವಾಗಿದೆ” ಎಂದು ಕಿರುಪುಸ್ತಕದ ಆರಂಭಿಕ ಮಾತುಗಳು ಹೇಳುತ್ತವೆ.
ದೊಡ್ಡ ಬದಲಾವಣೆಗೆ ಉತ್ತೇಜನ ನೀಡಿದವರಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮೊದಲಿಗರು. “ರಿಪಬ್ಲಿಕ್ ಆಫ್ ಭಾರತ – ನಮ್ಮ ನಾಗರೀಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆಯಿದೆ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಷ್ಟ್ರಪತಿಗಳ ಆಹ್ವಾನಕ್ಕೆ ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದರೆ ಪ್ರತಿಪಕ್ಷಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಧಿಕೃತ ಜಿ 20 ಶೃಂಗಸಭೆಯ ಆಹ್ವಾನಗಳಲ್ಲಿ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ (President of India)” “ಪ್ರೆಸಿಡೆಂಟ್‌ ಆಫ್‌ ಭಾರತ” (President of Bharat) ಎಂದು ಉಲ್ಲೇಖಿಸಿರುವ ಬಿಜೆಪಿಯ ಇತ್ತೀಚಿನ ಕ್ರಮವು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಜಿ20 ಶೃಂಗಸಭೆಯ ಔತಣಕೂಟಕ್ಕೆ ಆಹ್ವಾನಿತರ ಮೇಲೆ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ (President of India)” ಬದಲಿಗೆ “ಪ್ರೆಸಿಡೆಂಟ್‌ ಆಫ್‌ ಭಾರತ” (President of Bharat) ಎಂದು ಬಳಸಲಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ ರಮೇಶ ಹೇಳಿದ್ದಾರೆ. ಸುದ್ದಿ ನಿಜವಾಗಿದೆ. ರಾಷ್ಟ್ರಪತಿ ಭವನವು ಸೆಪ್ಟಂಬರ್ 9 ರಂದು G20 ಔತಣಕೂಟಕ್ಕೆ ಸಾಮಾನ್ಯವಾಗಿ ಬಳಸುವ “ಪ್ರೆಸಿಡೆಂಟ್‌ ಆಫ್‌ ಇಂಡಿಯಾ (President of India)” ಬದಲಿಗೆ “ಪ್ರೆಸಿಡೆಂಟ್‌ ಆಫ್‌ ಭಾರತ” (President of Bharat) ಎಂಬ ಹೆಸರಿನಲ್ಲಿ ಆಹ್ವಾನವನ್ನು ಕಳುಹಿಸಿದೆ” ಎಂದು ಜೈರಾಮ್ ರಮೇಶ್ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ, “ಈಗ, ಸಂವಿಧಾನದಲ್ಲಿನ ಆರ್ಟಿಕಲ್ 1 ಅನ್ನು’ಭಾರತ, ಅದು ಇಂಡಿಯಾ ಆಗಿತ್ತು, ರಾಜ್ಯಗಳ ಒಕ್ಕೂಟವಾಗಿರುತ್ತದೆ ಎಂದು ಓದಬಹುದು. ಆದರೆ ಈಗ ಈ ‘ರಾಜ್ಯಗಳ ಒಕ್ಕೂಟದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

“ಇಂಡಿಯಾ ಮೈತ್ರಿಕೂಟವು ತನ್ನ ಹೆಸರನ್ನು ಭಾರತ ಎಂದು ಬದಲಾಯಿಸಿದರೆ ಬಿಜೆಪಿ ‘ಭಾರತʼವನ್ನು ಬೇರೆ ಯಾವುದದರೂ ಹೆಸರಿನಿಂದ ಬದಲಾಯಿಸುತ್ತದೆಯೇ?” ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಬಿಜೆಪಿಯು ‘ಇಂಡಿಯಾ(‘INDIA’)’ವನ್ನು ಹೇಗೆ ಹೊಡೆದು ಹಾಕುತ್ತದೆ? ದೇಶವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದಲ್ಲ, ಇದು 135 ಕೋಟಿ ಭಾರತೀಯರಿಗೆ ಸೇರಿದ್ದು. ನಮ್ಮ ರಾಷ್ಟ್ರೀಯ ಗುರುತು ಬಿಜೆಪಿಯ ವೈಯಕ್ತಿಕ ಆಸ್ತಿಯಲ್ಲ, ಅದು ಹುಚ್ಚಾಟಿಕೆ ಮತ್ತು ಕಲ್ಪನೆಗಳ ಮೇಲೆ ಮಾರ್ಪಡಿಸಬಹುದು” ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ (ಆರ್‌ಎಸ್‌ಎಸ್) ಇಂಡಿಯಾವನ್ನು ಭಾರತ ಎಂದು ಕರೆಯಬೇಕೆಂಬ ಸಲಹೆ ಬಂದಿತ್ತು.”ನಾವು ದೇಶಕ್ಕೆ ಇಂಡಿಯಾ ಎಂಬ ಪದವನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ಭಾರತವನ್ನು ಬಳಸಲು ಪ್ರಾರಂಭಿಸಬೇಕು. ಕೆಲವೊಮ್ಮೆ ನಾವು ಇಂಗ್ಲಿಷ್ ಮಾತನಾಡುವವರಿಗೆ ಅರ್ಥವಾಗುವಂತೆ ನಾವು ಇಂಡಿಯಾ ಎಂದು ಬಳಸುತ್ತೇವೆ. ಇದು ಹರಿವಿನಂತೆ ಬರುತ್ತದೆ. ಆದರೆ, ನಾವು ಇದನ್ನು ಬಳಸುವುದನ್ನು ನಿಲ್ಲಿಸಬೇಕು … ಭಾರತ ದೇಶದ ಹೆಸರು ಜಗತ್ತಿನಲ್ಲಿ ಎಲ್ಲಿಗೆ ಹೋದರೂ ಭಾರತವಾಗಿಯೇ ಉಳಿಯಬೇಕು. ಮಾತನಾಡುವ ಮತ್ತು ಬರಹದಲ್ಲಿಯೂ ಭಾರತ ಎಂದು ಹೇಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎರಡು ದಿನಗಳ ಹಿಂದೆ ಹೇಳಿದ್ದರು.
ಜುಲೈನಲ್ಲಿ ಪ್ರತಿಪಕ್ಷದ ಮೈತ್ರಿಯು ʼಇಂಡಿಯಾʼ – ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ – ಎಂಬ ಸಂಕ್ಷಿಪ್ತ ರೂಪವನ್ನು ಅಳವಡಿಸಿಕೊಂಡ ನಂತರ ಇಂಡಿಯಾ ವರ್ಸಸ್ ಭಾರತ ಶಬ್ದದ ಚರ್ಚೆ ತೀವ್ರಗೊಂಡಿತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement