ನವದೆಹಲಿ : ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಔತಣಕೂಟದ ಆಮಂತ್ರಣದಲ್ಲಿ ಸಾಂಪ್ರದಾಯಿಕ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಎಂಬ ಪದದ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ’ ಎಂಬ ಪದವನ್ನು ಬಳಸಿದ್ದು ಭಾರೀ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂಡಿಯಾಕ್ಕೆ ‘ಭಾರತ’ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂಬ ಚರ್ಚೆಗೆ ನಾಂದಿ ಹಾಡಿದ ಜಿ20 ಔತಣಕೂಟದ ಆಹ್ವಾನವು ಮಂಗಳವಾರ ‘ಪ್ರೆಸಿಡೆಂಟ್ ಆಫ್ ಭಾರತʼ ಎಂದು ಉಲ್ಲೇಖದ ನಂತರ ನರೇಂದ್ರ ಮೋದಿ ʼಪ್ರೈಮ್ ಮಿನಿಸ್ಟರ್ ಆಫ್ ಭಾರತ (Prime Minister of Bharat) ‘ ಎಂದು ಉಲ್ಲೇಖಿಸಿದ ಮತ್ತಷ್ಟು ದಾಖಲೆಗಳು ಬೆಳಕಿಗೆ ಬಂದಿದೆ.
ಆಗಸ್ಟ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು ಮತ್ತು ನಂತರ ಗ್ರೀಸ್ಗೆ ಭೇಟಿ ನೀಡಿದರು. ಆಗಸ್ಟ್ 22-25 ರವರೆಗೆ ಅವರ ಎರಡೂ ದೇಶಗಳ ಭೇಟಿಯ ಸರ್ಕಾರದ ಅಧಿಸೂಚನೆಯಲ್ಲಿ ಅವರನ್ನು ‘ಪ್ರೈಮ್ ಮಿನಿಸ್ಟರ್ ಆಫ್ ಭಾರತ’ ಎಂದು ಉಲ್ಲೇಖಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಜಿ 20 ನಾಯಕರ ಶೃಂಗಸಭೆಗೆ ಮುಂಚಿತವಾಗಿ, ಭಾರತೀಯ ಅಧಿಕಾರಿಗಳ ಗುರುತಿನ ಚೀಟಿಗಳಿಗೆ ಈಗ ʼಇಂಡಿಯನ್ ಆಫಿಶಿಯಲ್ಸ್ʼ ಬದಲಿಗೆ ʼಭಾರತ ಆಫಿಶಿಯಲ್ಸ್ʼ ಎಂದು ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6-7 ರಂದು 20 ನೇ ಆಸಿಯಾನ್ ಇಂಡಿಯಾ ಶೃಂಗಸಭೆ ಮತ್ತು 18 ನೇ ಪೂರ್ವ ಏಷ್ಯಾ ಶೃಂಗಸಭೆ (EAS) ಗಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಒಂದು ದಿನ ಮುಂಚಿತವಾಗಿ, ಅವರ ಭೇಟಿಯ ಕಾರ್ಯ ಟಿಪ್ಪಣಿಗಳಲ್ಲಿ ಅವರನ್ನು ”ಪ್ರೈಮ್ ಮಿನಿಸ್ಟರ್ ಆಫ್ ಭಾರತ” ಎಂದು ಉಲ್ಲೇಖಿಸಲಾಗಿದೆ. ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೋಡೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜಕಾರ್ತಾಕ್ಕೆ ತೆರಳಲಿದ್ದಾರೆ.
ಪ್ರಧಾನಿ ಇಂಡೋನೇಷ್ಯಾಕ್ಕೆ ಭೇಟಿ ನೀಡಲಿರುವ ಟಿಪ್ಪಣಿಯಲ್ಲಿ ʼಪ್ರೈಮ್ ಮಿನಿಸ್ಟರ್ ಆಫ್ ಭಾರತ (Prime Minister of Bharat) ಎಂಬ ಪದವನ್ನು ಬಳಸಲಾಗಿದೆ.ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಟ್ವಿಟರ್ನಲ್ಲಿ ಈ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಈ ಬಗ್ಗೆ ವಾಗ್ದಾಳಿ ನಡೆಸಿದ್ದು ಇದರಲ್ಲಿ ‘ಆಸಿಯಾನ್-ಇಂಡಿಯಾ ಸಮಿಟ್ ‘ ಮತ್ತು ʼಪ್ರೈಮಿನಿಸ್ಟರ್ ಆಫ್ ಭಾರತ (Prime Minister of Bharat) ಎರಡನ್ನೂ ಬಳಸಲಾಗಿದೆ ಎಂದು ಹೇಳಿದೆ.
“ಮೋದಿ ಸರ್ಕಾರ ಎಷ್ಟು ಗೊಂದಲದಲ್ಲಿದೆ ನೋಡಿ! 20 ನೇ ಆಸಿಯಾನ್-ಇಂಡಿಯಾ ಸಮಿಟ್ ನಲ್ಲಿ ʼಪ್ರೈಮಿನಿಸ್ಟರ್ ಆಫ್ ಭಾರತ (Prime Minister of Bharat) ಎಂದು ಬಳಸಲಾಗಿದೆ. ಪ್ರತಿಪಕ್ಷಗಳು ಒಟ್ಟಾಗಿ ತಮ್ಮ ಮೈತ್ರಿಕೂಟಕ್ಕೆ ʼಇಂಡಿಯಾʼ ಎಂದು ಕರೆದುಕೊಂಡಿದ್ದಕ್ಕಾಗಿ ಈ ಎಲ್ಲ ನಾಟಕ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿಗಳ G20 ಆಹ್ವಾನವು ದೇಶದ ಹೆಸರನ್ನು ಬದಲಾಯಿಸುವ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಸೆಪ್ಟೆಂಬರ್ 18ರಿಂದ 22 ರ ವರೆಗೆ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇದನ್ನು ಮಂಡಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ. ವಿಶೇಷ ಅಧಿವೇಶನಕ್ಕೆ ಸರ್ಕಾರ ಯಾವುದೇ ಅಜೆಂಡಾ ಪ್ರಕಟಿಸದಿರುವುದು ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಪ್ರತಿಪಕ್ಷವು ತನ್ನ 28 ಪಕ್ಷಗಳ ಮೈತ್ರಿಗೆ ತನ್ನನ್ನು ತಾನು ‘ಇಂಡಿಯಾ’ ಎಂದು ಕರೆದುಕೊಳ್ಳುವುದಕ್ಕೂ ಈ ಹೆಸರು ಬದಲಾವಣೆಯ ಸಂಭವನೀಯ ನಡೆಗೂ ಲಿಂಕ್ ಮಾಡಿದೆ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಮೈತ್ರಿಕೂಟಕ್ಕೆ ‘ಭಾರತ’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದರೆ ಕೇಂದ್ರ ಏನು ಮಾಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಸಂಸತ್ತಿನ ವಿಶೇಷ ಅಧಿವೇಶನ ಪ್ರಾರಂಭವಾಗಲಿದ್ದು, ಈ ಬದಲಾವಣೆಯನ್ನು ಜಾರಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿಯನ್ನು ಪರಿಚಯಿಸಬಹುದು ಎಂಬ ಊಹಾಪೋಹವಿದೆ.
ನಿಮ್ಮ ಕಾಮೆಂಟ್ ಬರೆಯಿರಿ