ʼಸಾಹಿತ್ಯ ಪ್ರಕಾಶನʼ ಸಂಸ್ಥೆಯನ್ನು ಸಾಹಿತ್ಯ ಪ್ರೇಮಿಗಳ ಮನೆ ಮಾತಾಗುವಂತೆ ಬೆಳೆಸಿದ ಎಂ.ಎ.ಸುಬ್ರಹ್ಮಣ್ಯ…

೧೯೩೪ ರಲ್ಲಿ ಕನ್ನಡ ಸಾಹಿತ್ಯದ ಕಂಪನ್ನು ಎಲ್ಲಡೆಗೆ ಪಸರಿಸುವ ನಿಟ್ಟಿನಿಂದ ಆರಂಭವಾದ ಸಾಹಿತ್ಯ ಭಂಡಾರ ಪ್ರಕಾಶನ ಸಂಸ್ಥೆ ಇಂದು ಬೃಹತ್ ಪುಸ್ತಕ ಪ್ರಕಾಶನ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಅದರಂತೆ ಸಾಹಿತ್ಯಕಾರ ಯಂಡಮೂರಿ ವಿರೇಂದ್ರನಾಥ ಅವರ ಕಾದಂಬರಿಯಾದ ʼಕರಿಗಂಬಳಿಯಲ್ಲಿ ಮಿಡಿನಾಗರ’ ವನ್ನು ೧೯೮೬ರಲ್ಲಿ ತಮ್ಮದೇ ಆದ ಪುಸ್ತಕ ಪ್ರಕಾಶನ ಸಂಸ್ಥೆ ʼಸಾಹಿತ್ಯ ಪ್ರಕಾಶನʼದ ಮೂಲಕ ಪ್ರಕಟಿಸಿ, ಬಿಡುಗಡೆ ಮಾಡುವ ಮೂಲಕ ಸ್ವತಂತ್ರವಾಗಿ ಪ್ರಕಾಶನ ಉದ್ಯಮದತ್ತ ಬಂದ ಎಂ.ಎ.ಸುಬ್ರಹಣ್ಯ ಅವರು ಮತ್ತೊಂದು ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಅಂದಿನಿಂದ ನಿರಂತರವಾಗಿ ಸಾವಿರಾರು ಪುಸ್ತಕಗಳನ್ನು ಪ್ರಕಾಶನ ಮಾಡಿ ಮುನ್ನಡೆಯುತ್ತಿದ್ದಾರೆ. ಕನ್ನಡ ಭಾಷೆಯ ಹಲವಾರು ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾರಸ್ವತ ಲೋಕದ ವ್ಯಾಪ್ತಿ ಎಲ್ಲೆಗಳನ್ನು ವಿಸ್ತರಿಸಿ, ಕನ್ನಡ ಭಾಷಾ ಸಂಸ್ಕೃತಿಯ ಬೆಳವಣಿಗೆಗೆ ಹೆಗಲು ನೀಡಿದ್ದಾರೆ, ಡಿವಿಜಿಯವರ ‘ಜೀವನ ಧರ್ಮ ಯೋಗ’ ಕೃತಿಯನ್ನು ಪ್ರಕಟಿಸುವ ಮೂಲಕ ನೂತನ ವಿಕ್ರಮವನ್ನು ಸ್ಥಾಪಿಸಿದ್ದಾರೆ.
ಸಾರಸ್ವತ ಲೋಕದ ಸುಪ್ರಸಿದ್ದ ಸಾಹಿತ್ಯಕಾರರ ಸಮಗ್ರ ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿರುವ ಕೀರ್ತಿ ಸಾಹಿತ್ಯ ಭಂಡಾರ ಮತ್ತು ಸಾಹಿತ್ಯ ಪ್ರಕಾಶನಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದ ದಿಗ್ಗಜರಾದ, ಡಿ.ವಿ. ಗುಂಡಪ್ಪ, ಎಸ್‌.ಎಲ್‌.ಭೈರಪ್ಪ, ಕೆ.ಎಸ್. ನಾರಾಯಣಾಚಾರ‍್ಯ, ಶತಾವಧಾನಿ ಆರ್. ಗಣೇಶ ಮುಂತಾದವರು ಹಾಗೂ ಖ್ಯಾತ ಕಾದಂಬರಿಕಾರರಾದ ಕೆ.ಟಿ. ಗಟ್ಟಿ, ಸುದರ್ಶನ ದೇಸಾಯಿ, ಬೀಚಿ ಅವರ ಕೃತಿಗಳ ಜೊತೆಗೆ, ಧರ್ಮ-ಸಂಸ್ಕೃತಿ ಭಾಷೆಗೆ ಸಂಬಂಧಿಸಿದಂತೆ ಪ್ರೊ. ಶ್ರೀನಿವಾಸ ತೊಫಖಾನೆ, ಶಂ. ಭಾ ಜೋಷಿ, ಡಾ. ವಿ.ಕೆ. ಗೋಕಾಕ, ಎನ್.ಕೆ. ಕುಲಕರ್ಣಿ, ಡಾ. ಗಿರಡ್ಡಿ ಗೋವಿಂದರಾಜ, ಡಾ.ಎಂ.ಎಂ. ಕಲಬುರ್ಗಿ ಮುಂತಾದವರ ಕೃತಿಗಳನ್ನು ಪ್ರಕಟಿಸಿದ್ದಾರೆ.
ಪ್ರಚಲಿತ ವಿದ್ಯಮಾನಗಳಿಗೆ ಕುರಿತಂತೆ ಪತ್ರಕರ್ತರಾದ ವಿಶ್ವೇಶ್ವರ ಭಟ್ಟ, ಪ್ರತಾಪಸಿಂಹ, ಡಿ. ತ್ಯಾಗರಾಜ ಮೊದಲದವರ ಕೃತಿಗಳನ್ನು ಮುದ್ರಿಸಿ, ರಾಜ್ಯದ ಮೂಲೆಮೂಲೆಗೆ ತಲುಪಿಸಿದ್ದಾರೆ. ಆರೋಗ್ಯ ಮತ್ತು ಆಯುರ್ವೇದ ಹಾಗೂ ವೈದ್ಯಕೀಯಕ್ಕೆ ಸಂಬಂಧಿಸದಂತೆ ಬಿ.ಎಸ್. ಶಂಕರ, ಡಾ. ಸ.ಜ. ನಾಗಲೋತಿಮಠ ಹಾಗೂ ಪ್ರಕಾಶ ಚಂದ ಜೈನ ಇವರ ಕೃತಿಗಳನ್ನು ಹೊರತಂದಿದ್ದಾರೆ, ವಿಜ್ಞಾನ ಓದುಗರಿಗಾಗಿ ರಾಜಶೇಖರ ಭೂಸನೂರಮಠ ಅವರ ವಿಜ್ಞಾನ ಕೃತಿಗಳನ್ನು ಪ್ರಕಟಿಸಿದ್ದಾರೆ..

ಯುವ ಓದುಗರನ್ನು ಗಮನದಲ್ಲಿಟ್ಟುಕೊಂಡು ನಾಡೋಜ ಚನ್ನವೀರ ಕಣವಿ, ಸಂಧ್ಯಾ ಪೈ, ಪಾರ್ವತಮ್ಮ ಮಹಾಲಿಂಗಶೆಟ್ಟಿ, ಗುರುರಾಜ ಬೆನಕಲ್, ಕೃಷ್ಣಾ ಭಟ್ಟ, ಬಿ.ಎ. ಸನದಿ ಅವರ ಕೃತಿಗಳು ಹಾಗೂ ಪ್ರಕೃತಿ ಪರಿಸರ ಹಾಗೂ ನೀರು ಕೊಯ್ಲು ಕುರಿತಾಗಿ ರಾಧಾಕೃಷ್ಣ ಬಡ್ತಿ ಹಾಗೂ ಶಿವಾನಂದ ಕಳವೆ ಮೊದಲಾದವರ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ ಭಂಡಾರ ಮತ್ತು ಸಾಹಿತ್ಯ ಪ್ರಕಾಶನ ಪ್ರಕಟಿಸುವ ಕೃತಿಗಳ ಬಿಡುಗಡೆ ಕಾರ್ಯಕ್ರಮಗಳು ಬಹಳ ವಿಭಿನ್ನವಾಗಿರುತ್ತವೆ. ಸಾಮಾನ್ಯ ಓದುಗನಿಗೆ ಪುಸ್ತಕ ತಲುಪಲಿ ಎಂಬ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿ, ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ. ಅವರಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ, ಕೇಂದ್ರ ಸಚಿವರಾಗಿದ್ದ ಅರುಣ ಜೆಟ್ಲಿ, ದಿ. ಅನಂತಕುಮಾರ, ಡಾ. ಸುಧಾಮೂರ್ತಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಹಾಗೂ (ದಿ). ಗಂಗೂಬಾಯಿ ಹಾನಗಲ್ಲ, ಎಸ್.ಎಲ್. ಭೈರಪ್ಪ ಮೊದಲಾದವರು ಪ್ರಮುಖರು ಆಗಮಿಸಿದ್ದಾರೆ. ತಂದೆ ಮ. ಅನಂತಮೂರ್ತಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನಾಡಿನ ೨೪ ಪ್ರಕಾಶಕರನ್ನು ಸನ್ಮಾನಿಸಿ, ಗೌರವಿಸಿದ್ದಾರೆ. ಈಗ ೨೫ನೆಯವರಾಗಿ ಸಾಗರದ ರವೀಂದ್ರ ಪ್ರಸ್ತಕಾಲಯದ ವೈ.ವಿ. ದಂತಿ ಅವರು ಸನ್ಮಾನಗೊಳ್ಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ; ಅಂಧ ದಂಪತಿ ಸಾವು

ಸಾಹಿತಿ ಎಸ್‌.ಎಲ್‌.ಭೈರಪ್ಪ ಅವರ ಆವರಣ ಕಾದಂಬರಿ-೫೫,೦೦೦ ಪ್ರತಿಗಳು, ಪ್ರೊ. ಕೆ.ಎಸ್. ನಾರಾಯಣಾಚಾರ‍್ಯ ಅವರ ಕಾದಂಬರಿ ‘ಆಚಾರ್ಯ ಚಾಣಕ್ಯ’ ೨೫ ಸಾವಿರ ಪ್ರತಿಗಳು, ಅಗಸ್ತ್ಯ ೧೮ ಸಾವಿರ, ಯಂಡಮೂರಿ ವಿರೇಂದ್ರನಾಥ ಅವರ ಯಶಸ್ವಿನ ರಹಸ್ಯಗಳು ೩೦,೦೦೦, ನಿಮ್ಮನ್ನು ನೀವು ಗೆಲ್ಲಬಲ್ಲಿರಿ ೨೦,೦೦೦, ಯಶಸ್ವಿನತ್ತ ಪಯಣ ೫೦,೦೦೦, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಬದುಕಲು ಬೇಕು ಬದುಕುವ ಮಾತು ೫೦,೦೦೦ ಪ್ರತಿಗಳುಮಾರಾಟವಾಗುವ ಮೂಲಕ ಈ ಸಂಸ್ಥೆ ಕನ್ನಡ ಪುಸ್ತಕೋದ್ಯಮದಲ್ಲಿ ಹೊಸ ದಾಖಲೆಯನ್ನು ಮಾಡಿದೆ. ನಾರಾಯಣಾಚಾರ‍್ಯ ಅವರ ೧೦೦ ಕೃತಿಗಳನ್ನು ಖರಿದಿಸಿದ ಗ್ರಾಹಕರಿಗೆ ಉಚಿತವಾದ ಕಪಾಟನ್ನು ನೀಡುವ ಪರಂಪರೆಯನ್ನು ಸಂಸ್ಥೆ ಆರಂಭಿಸಿದೆ.
ಸಾಹಿತ್ಯ ಪ್ರಕಾಶನ ಸಂಸ್ಥೆಯ ಎಂ.ಎ. ಸುಬ್ರಮಣ್ಯ ಅವರು ಹುಬ್ಬಳ್ಳಿ ರಾಮಕೃಷ್ಣ ಆಶ್ರಮದ ಟ್ರಸ್ಟಿಗಳು, ಬರಹಗಾರರು, ಚಿಂತಕರು, ಆಕಾಶವಾಣಿ ಮತ್ತು ಕೆ.ಎಲ್.ಇ. ಸಂಸ್ಥೆಯ ಮಾತುಗಾರರು, ಡಾ. ಡಿ. ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಪದಾಧಿಕಾರಿಯಾಗಿ ನಿರಂತರವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಸುತ್ತಿದ್ದಾರೆ ಹಾಗೂ ಕಾರ್ಯ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ. ಓದುಗರ ಅಭಿರುಚಿ ತಕ್ಕಂತೆ ಗ್ರಂಥಗಳನ್ನು ಪೂರೈಸುತ್ತಿರುವ ಅವರು ಯುವ ಬರಹಗಾರರಿಗೆ ತಮ್ಮ ವೇದಿಕೆಯ ಮೂಲಕ ಹಲವಾರು ಕಮ್ಮಟಗಳನ್ನು ಏರ್ಪಡಿಸಿ, ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಪ್ರಶಸ್ತಿಗಳು :
ಕನ್ನಡ ಸಾಹಿತ್ಯ ಹಾಗೂ ಪ್ರಕಾಶನದಲ್ಲಿ ಇವರ ಸಾಧನೆಯನ್ನು ಗಮನಿಸಿ ಬಹ್ರೇನ್‌ ದೇಶದ ಕನ್ನಡ ಸಂಘದಿಂದ ʼಸಾರ್ಥʼ ಪ್ರಶಸ್ತಿ, ಬೆಂಗಳೂರು ಪುಸ್ತಕ ಮೇಳದಲ್ಲಿ “ಉತ್ತಮ ಪ್ರಕಾಶಕ’ ಪ್ರಶಸ್ತಿಗಳು ಸಂದಿವೆ. ಶ್ರೀ ರಾಮಚಂದ್ರಾಪುರ ಮಠ, ಸ್ವರ್ಣವಲ್ಲಿ ಶ್ರೀ ಸಂಸ್ಥಾನಮಠ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಮಠ ಇವರ ಕಾರ್ಯಕ್ಷಮತೆಗೆ ಗೌರವ ಮತ್ತು ಪುರಸ್ಕಾರಗಳನ್ನು ನೀಡಿವೆ.
ಶೀಘ್ರದಲ್ಲಿಯೇ ದೊಡ್ಡಪ್ಪ ಮ. ಗೋವಿಂದರಾವ್ ಮತ್ತು ತಂದೆ ಮ. ಅನಂತಮೂರ್ತಿ ಅವರ ಹೆಸರಿನ ಅಂತಸ್ತುಗಳುಳ್ಳ ಕಟ್ಟಡ ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸದೊಂದಿಗೆ ಸದ್ಯದಲ್ಲಿಯೇ ಕೊಪ್ಪಿಕರ ರಸ್ತೆಯಲ್ಲಿ ಅಸ್ತಿತ್ವಕ್ಕೆ ಬರಲಿದೆ. ಪ್ರಕಾಶನ ಉದ್ಯಮ ಮತ್ತು ಯಶಸ್ಸು ಯಾವಾಗಲೂ ಜೊತೆಯಾಗಿರುವುದಿಲ್ಲ ಎಂಬ ಮಾತು ದಿಟವಾಗಿದ್ದರೂ ಕೂಡ, ತಮ್ಮ ಪ್ರಕಾಶನ ಸಂಸ್ಥೆಗಳ ಮೂಲಕವೇ ಕನ್ನಡದಲ್ಲಿ ೧೧೦೦ ಕ್ಕೂ ಹೆಚ್ಚಿನ ಪುಸ್ತಕವನ್ನು ಪ್ರಕಟಿಸಿದ ಹೆಗ್ಗಳಿಕೆ ಎಂ.ಎ ಸುಬ್ರಹ್ಮಣ್ಯ ಅವರದ್ದು.
ಹಿರಿಯರಾದ ಎನ್.ಬಿ. ರಾಮಾಪುರ, ದಿವಂಗತ ನಿರಂಜನ ವಾಲಿಶೆಟ್ಟರ, ದೊಡ್ಡಪ್ಪ ಮ. ಗೋವಿಂದರಾಯರು, ತಂದೆ ಮ. ಅನಂತಮೂರ್ತಿ, ತಾಯಿ ಪ್ರೇಮ, ಪತ್ನಿ ಶೈಲಜಾ, ಮಗ ಋತ್ವಿಕ, ಮಗಳು ರೋಹಿಣಿ, ಅಳಿಯ ಪ್ರಶಾಂತ, ಸೊಸೆ ಅಂಜು, ಮೊಮ್ಮಗಳು ಸ್ವಾತಿ, ಸಹೋದರರಾದ ಮಹೇಶ, ಅಶೋಕ, ಸಹೋದರಿಯರು, ಸ್ನೇಹಿತರು, ಬಂಧುಗಳು, ಹಿತೈಷಿಗಳು, ಕನ್ನಡ ಅಭಿಮಾನಿಗಳು, ಸಾಹಿತಿಗಳು ಮುಂತಾದವರ ಮಾರ್ಗದರ್ಶನ, ಪ್ರೋತ್ಸಾಹದಿಂದಾಗಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸುಬ್ರಮಣ್ಯ ಅವರು.
ಫೋನ್‌, ಇ-ಮೇಲ್, ವಾಟ್ಸಾಪ್ ಮೂಲಕ ಓದುಗರಿಗೆ ಪುಸ್ತಕಗಳನ್ನು ತಲುಪಿಸಲಾಗುತ್ತಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ನವರ ೧೧೬೨ ಬೃಹತ್ ಪುಟಗಳ “ಪಾಪು ಪ್ರಪಂಚ” ಪುಸ್ತಕವನ್ನು ಅವರು ಪ್ರಕಟಿಸಿದ್ದಾರೆ. ಹಲವಾರು ಕೃತಿಗಳು ಮರು ಮುದ್ರಣವಾಗಿದ್ದು, ಕನ್ನಡ ಪುಸ್ತಕಗಳು ಪ್ರಕಟಣೆ ಮತ್ತು ವ್ಯಾಪಾರದ ಸ್ಥಳವಾಗಿ, ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಸಂಸ್ಥೆಯಾಗಿ ಮುನ್ನಡೆಯುತ್ತಿದೆ.
ಸಾಹಿತ್ಯ ಭಂಡಾರದಲ್ಲಿಯೇ ಕುಳಿತು ಪುಸ್ತಕಗಳ ಪುಟಗಳ ಅವಲೋಕನ ಮಾಡಿ, ಪುಸ್ತಕಗಳನ್ನು ಖರೀದಿಸುವ ವ್ಯವಸ್ಥೆ ಇದೆಯಲ್ಲದೇ, ಲೇಖಕರು, ಪ್ರಕಾಶಕರು, ಕಥೆ, ಕಾದಂಬರಿ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮಿಕ ಮುಂತಾದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ. ಸಾಹಿತ್ಯಾಸಕ್ತರು ದಿನವೂ ಭೆಟ್ಟಿ ನೀಡಿ ಪುಸ್ತಕಗಳನ್ನು ಖರೀದಿಸುತ್ತಿದ್ದು, ಕನ್ನಡ ರಾಜ್ಯೋತ್ಸವದ ನಿಮಿತ್ತ ನವೆಂಬರ್‌ ತಿಂಗಳ ಖರೀದಿಗೆ ವಿಶೇಷ ರಿಯಾಯತಿಯನ್ನು ನೀಡಲಾಗುತ್ತಿದೆ.
-ಡಾ.ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

ಪ್ರಮುಖ ಸುದ್ದಿ :-   ಸುಗಾವಿ ಶಾಲೆಯ ʼಶತಮಾನೋತ್ಸವ ಸಂಭ್ರಮʼ ಕಾರ್ಯಕ್ರಮ ಭಾನುವಾರ ಉದ್ಘಾಟನೆ : ವಿವಿಧ ಕಾರ್ಯಕ್ರಮ ಆಯೋಜನೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement