ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ

ಹುಬ್ಬಳ್ಳಿ : ಗಣೇಶನ ಹಬ್ಬದ ನಿಮಿತ್ತ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಶುಕ್ರವಾರ ರಾತ್ರಿ ಈ ಕುರಿತು ಆದೇಶ ಮಾಡಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಎರಡು ದಿನದಿಂದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲದೇ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟನಾಕಾರರು ಧರಣಿ ಕುಳಿತಿದ್ದರು.
ಸೆಪ್ಟೆಂಬರ್‌ 19ರಿಂದ 21ರ ವರೆಗೆ 3 ದಿನಗಳ ಕಾಲ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿಗೆ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆ ಆಯುಕ್ತರು ಶರತ್ತುಬದ್ಧ ಅನುಮತಿ ನೀಡಿದ್ದಾರೆ. ಹಲವು ಷರತ್ತುಗಳನ್ನು ಹಾಕಿ ಅನುಮತಿ ನೀಡಲಾಗಿದ್ದು, ಕಡ್ಡಾಯವಾಗಿ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯಲು ಸೂಚಿಸಲಾಗಿದೆ.

ಸೆ.19 ರಂದು ಬೆಳಿಗ್ಗೆ 6 ಗಂಟೆಯಿಂದ 21 ರಂದು ಮಧ್ಯಾಹ್ನ 12 ಗಂಟೆಯವರೆಗೆ ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದ್ದು, 30*30 ಅಳತೆಯ ಪೆಂಡಾಲ ಹಾಕಲು ಮಾತ್ರ ಅವಕಾಶ ಮಾಡಲಾಗಿದೆ. ಮನರಂಜನಾ ಕಾರ್ಯಕ್ರಮ ನಿಷೇಧ ಮಾಡಲಾಗಿದ್ದು, ಗಣೇಶ ಉತ್ಸವದ ಹೊರತಾಗಿ ಯಾವುದೇ ಬಾವುಟ, ಭಿತ್ತಪತ್ರ, ವಿವಾದಿತ ಫೋಟೊಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ.
ಅನಾವಶ್ಯಕ ಗಲಭೆ, ಗಲಾಟೆಗಳಿಗೆ ಆಯೋಜಕರೇ ಹೊಣೆ ಎಂದು ಸೂಚಿಸಲಾಗಿದೆ. ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಿಲ್ಲ ಎಂದು ಸೂಚಿಸಲಾಗಿದೆ, ಪ್ರಚೋದನಕಾರಿ ಹೇಳಿಕೆ, ಭಾಷಣ ನಿಷೇಧ ಇತ್ಯಾದಿ ಸೇರಿದಂತೆ 18 ಷರತ್ತುಗಳನ್ನು ಪಾಲಿಕೆ ವಿಧಿಸಿದೆ.
ಶುಕ್ರವಾರ ಮಧ್ಯಾಹ್ನ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದ ಮಹಾನಗರ ಪಾಲಿಕೆಯ ನಿರ್ಧಾರವನ್ನು ಪ್ರಶ್ನಿಸಿ ಅಂಜುಮನ್ ಸಂಸ್ಥೆಯ ಸಲ್ಲಿಸಿದ್ದ ಮನವಿಯನ್ನು ಧಾರವಾಡದ ಹೈಕೋರ್ಟ್ ಪೀಠ ತಿರಸ್ಕರಿಸಿದ ಹಿನ್ನಲೆಯಲ್ಲಿ ಹಾದಿ ಸುಗಮವಾಗಿತ್ತು.
ಕಳೆದ ವರ್ಷ ಇದೇ ಮೈದಾನದಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಗಿತ್ತು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement