ಸೆ.23-24 ರಂದು ಸ್ವರ್ಣವಲ್ಲಿಯಲ್ಲಿ ಯಕ್ಷೋತ್ಸವ, ಮಕ್ಕಳ ತಾಳಮದ್ದಲೆ ಸ್ಪರ್ಧೆ : ಹೊಸ್ತೋಟ, ದಂಟ್ಕಲ್ ಪ್ರಶಸ್ತಿ ಪ್ರದಾನ

ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆ ಕಳೆದ ೧೯ ವರ್ಷದಿಂದ ನಡೆಸುತ್ತಿರುವ ಮಕ್ಕಳ ತಾಳಮದ್ದಲೆ ಸ್ಪರ್ಧೆ, ಹೊಸ್ತೋಟ ಮಂಜುನಾಥ ಭಾಗವತ ಹಾಗೂ ಎಂ.ಎ. ಹೆಗಡೆ ದಂಟ್ಕಲ್ ಪ್ರಶಸ್ತಿ ಪ್ರದಾನ, ತಾಳಮದ್ದಲೆ, ಯಕ್ಷೋತ್ಸವ ಸೆ.೨೩ ಹಾಗೂ ೨೪ ರಂದು ಸೋಂದಾದ ಸ್ವರ್ಣವಲ್ಲೀ ಮಠದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ತಿಳಿಸಿದ್ದಾರೆ.
ಭಾನುವಾರ ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷ ಶಾಲ್ಮಲಾ‌ ಸಂಸ್ಥೆ ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾಗಿದ್ದು, ೨೫ ವರ್ಷಗಳಿಂದ ಯಕ್ಷಗಾನದ ಉಳಿವು, ಶಾಸ್ತ್ರ ಬದ್ಧತೆ, ಬೆಳವಣಿಗೆ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷ ಶಾಲ್ಮಲಾದ‌ ಅಧ್ಯಕ್ಷರೂ ಆಗಿದ್ದ ದಿ.ಎಂ.ಎ.ಹೆಗಡೆ ನೆನಪಿನ ಪ್ರಶಸ್ತಿಯನ್ನು ಹಿರಿಯ ವಿದ್ವಾಂಸ ಅತ್ತಿಮುರಡು ವಿಶ್ವೇಶ್ವರ ಅವರಿಗೆ ಹಾಗೂ ಯಕ್ಷ ಶಾಲ್ಮಲಾದ ಸ್ಥಾಪಕ ಅಧ್ಯಕ್ಷರೂ ಆಗಿದ್ದ ಹೊಸ್ತೋಟ ಮಂಜುನಾಥ ಭಾಗವತ ಅವರ ನೆನಪಿನ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

ಎರಡೂ ದಿನ ಸಮಾರಂಭದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸೆಪ್ಟೆಂಬರ್‌ ೨೩ರ ಸಂಜೆ ೪: ೩೦ಕ್ಕೆ ನಡೆಯುವ‌ ಉದ್ಘಾಟನಾ ಸಮಾರಂಭದಲ್ಲಿ ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್, ತಾಳಮದ್ದಲೆ ಅರ್ಥದಾರಿ ಅಶೋಕ ಭಟ್ಟ ಉಜಿರೆ ಪಾಲ್ಗೊಳ್ಳುವರು. ಕಲಾವಿದ ಶ್ರೀಪಾದ ಭಟ್ಟ ಅವರಿಗೆ‌ ಹೊಸ್ತೋಟ ಪ್ರಶಸ್ತಿ ಪ್ರದಾನವಾಗಲಿದೆ. ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭ ಸೆಪ್ಟೆಂಬರ್‌ ೨೪ರ ಸಂಜೆ ೪:೩೦ ಕ್ಕೆ ನಡೆಯಲಿದ್ದು, ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ವಕೀಲ ಹಾಗೂ ಕಲಾವಿದ ನಾಗರಾಜ ನಾಯಕ ಕಾರವಾರ, ವಿನಾಯಕ ಹೆಗಡೆ ದಂಟ್ಕಲ್ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ದಂಟ್ಕಲ್ ಪ್ರಶಸ್ತಿ ಅತ್ತಿಮುರಡು ಅವರಿಗೆ ಪ್ರದಾನವಾಗಲಿದೆ ಎಂದು ತಿಳಿಸಿದರು.

ಮೊದಲ ದಿನ ಸಭಾ ಕಾರ್ಯಕ್ರಮದ ಬಳಿಕ ವೀರಮಣಿ ತಾಳಮದ್ದಲೆ ನಡೆಯಲಿದ್ದು, ಎರಡನೇ ದಿನ ಸಂಜೆ ಅತಿಥಿ ಕಲಾವಿದರಿಂದ ವೀರಮಣಿ ಯಕ್ಷಗಾನ ಕೂಡ ನಡೆಯಲಿದೆ ಎಂದರು.
ಕಾರ್ಯದರ್ಶಿ ನಾಗರಾಜ ಜೋಶಿ ಮಾತನಾಡಿ, ತಾಳಮದ್ದಲೆ ಸ್ಪರ್ಧೆಯಲ್ಲಿ ಈಗಾಗಲೇ ೧೫ ಪ್ರೌಢ ಶಾಲಾ ತಂಡದ ಮಕ್ಕಳು, ೧೨ ಪ್ರಾಥಮಿಕ ಶಾಲಾ ತಂಡಗಳು ತಾಳಮದ್ದಲೆಗೆ ಹೆಸರು ನೊಂದಾಯಿಸಿವೆ. ಈವರೆಗೆ ಇಷ್ಟೊಂದು ದಾಖಲಾಗಿದ್ದು ದಾಖಲೆಯಾಗಿದೆ. ಕಳೆದ ವರ್ಷ ೨೫ ತಂಡಗಳು ಭಾಗವಹಿಸಿದ್ದವು. ತಾಳಮದ್ದಲೆ ಸ್ಪರ್ಧೆ ಎರಡೂ‌ ದಿನ ಬೆಳಿಗ್ಗೆ ೧೦: ೩೦ರಿಂದ ನಡೆಯಲಿದೆ. ಮಕ್ಕಳ ತಂಡಗಳಿಗೆ ಹಿಮ್ಮೇಳದಲ್ಲಿ ಸತೀಶ ದಂಟ್ಕಲ್, ಶ್ರೀಪಾದ ಬಾಳೆಗದ್ದೆ, ಗಜಾನನ ತುಳಗೇರಿ, ಶ್ರೀಪತಿ ಕಂಚಿಮನೆ, ಕೃಷ್ಣ ಹೆಗಡೆ ಜೋಗದಮನೆ ಇತರರು ಭಾಗವಹಿಸಲಿದ್ದಾರೆ ಎಂದರು.
ಆಸಕ್ತ ವಿದ್ಯಾರ್ಥಿ ತಂಡಗಳು ಸೆಪ್ಟೆಂಬರ್‌ ೨೧ರ ಒಳಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಮಾಹಿತಿಗೆ ಹಾಗೂ ನೋಂದಾಣಿಗೆ ೯೪೪೮೭೫೬೨೭೩ಗೆ ಸಂಪರ್ಕ ಮಾಡಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಜಿ.ಹೆಗಡೆ ಕನೇನಳ್ಳಿ ಇದ್ದರು.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement