ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಸ್ಟಾಲಿನ್‌, ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ನವದೆಹಲಿ: ಸನಾತನ ಧರ್ಮದ ನಿರ್ಮೂಲನೆ ಕುರಿತು ವಿವಾದಿತ ಹೇಳಿಕೆ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್‌ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಸೆ.22) ನೋಟಿಸ್ ಜಾರಿಮಾಡಿದೆ.
ಸನಾತನ ಧರ್ಮದ ಹೇಳಿಕೆ ಕುರಿತು ಈ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮತ್ತು ಕೇಂದ್ರದ ಮಾಜಿ ಸಚಿವ ಎ ರಾಜಾ ನೀಡಿದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠವು ಅರ್ಜಿದಾರ ಬಿ ಜಗನ್ನಾಥ್ ಅವರನ್ನು ಹೈಕೋರ್ಟ್‌ ಅನ್ನು ಏಕೆ ಸಂಪರ್ಕಿಸಲಿಲ್ಲ ಎಂದು ಪ್ರಶ್ನಿಸಿತು.
ಇದು ಒಬ್ಬ ವ್ಯಕ್ತಿ ನಿರ್ದಿಷ್ಟ ಧರ್ಮದ ವಿರುದ್ಧ ಹರಿಹಾಯ್ದ ಪ್ರಕರಣವಲ್ಲ. ಇಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಮಂತ್ರಿ ಮತ್ತು ರಾಜ್ಯದ ವ್ಯವಸ್ಥೆಯು ಧರ್ಮದ ವಿರುದ್ಧ ಮಾತನಾಡುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ಆಗ ಪೀಠವು, “ನೀವು ನಮ್ಮನ್ನು ಪೊಲೀಸ್ ಆಗಿ ಪರಿವರ್ತಿಸುತ್ತಿದ್ದೀರಿ” ಎಂದು ಹೇಳಿತು. ಆದಾಗ್ಯೂ, ವಕೀಲರು ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಅರ್ಜಿಗಳನ್ನು ಸಲ್ಲಿಸಿದ ಕಾರಣ, ನ್ಯಾಯಾಲಯವು ಸರ್ಕಾರ ಹಾಗೂ ಸಚಿವರಿಗೆ ನೋಟಿಸ್ ಜಾರಿಗೊಳಿಸಿತು.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್‌, ಡಿಎಂಕೆ ನಾಯಕರಾದ ಪೀಟರ್ ಅಲ್ಫೋನ್ಸ್, ಎ ರಾಜಾ ಮತ್ತು ತೋಲ್ ತಿರುಮಾವಲವನ್ ಮತ್ತು ಅವರ ಅನುಯಾಯಿಗಳು ಸನಾತನ ಧರ್ಮ ಅಥವಾ ಹಿಂದೂ ಧರ್ಮದ ವಿರುದ್ಧ ಯಾವುದೇ ದ್ವೇಷದ ಭಾಷಣ ಮಾಡದಂತೆ ತಡೆಯಾಜ್ಞೆ ನೀಡುವಂತೆ ಜಗನ್ನಾಥ ಅವರು ತಮ್ಮ ಮನವಿಯಲ್ಲಿ ಕೋರಿದ್ದಾರೆ.
ಅಲ್ಲದೆ, ಅವರು ತಮ್ಮ ಮನವಿಯಲ್ಲಿ, 2023 ರ ಸೆಪ್ಟೆಂಬರ್ 2 ರಂದು ನಡೆದ ‘ಸನಾತನ ಧರ್ಮ ನಿರ್ಮೂಲನೆ’ ಸಮಾವೇಶದಲ್ಲಿ ರಾಜ್ಯ ಸಚಿವರು ಭಾಗವಹಿಸಿರುವುದು ಅಸಂವಿಧಾನಿಕ ಮತ್ತು ಸಂವಿಧಾನದ 25 ಮತ್ತು 26 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಘೋಷಿಸಲು ನ್ಯಾಯಾಲಯವನ್ನು ಕೋರಿದ್ದಾರೆ.

ಪ್ರಮುಖ ಸುದ್ದಿ :-   ಜನಾಂಗೀಯ ಕಾಮೆಂಟ್‌ ವಿವಾದದ ಬೆನ್ನಲ್ಲೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಯಾಮ್‌ ಪಿತ್ರೋಡಾ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement