ಸೆ. 26 ರಂದು ಬೆಂಗಳೂರು ಬಂದ್‌ : ಯಾವುದೆಲ್ಲ ಸ್ಥಗಿತವಾಗಲಿದೆ..?

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಸೆ.26ರಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೀಡಿರುವ ‘ಬೆಂಗಳೂರು ಬಂದ್‌’ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ರಾಜಧಾನಿ ಬಹುತೇಕ ಸ್ತಬ್ಧವಾಗುವ ಸಾಧ್ಯತೆಯಿದೆ.
ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, 100 ಕ್ಕೂ ಹೆಚ್ಚು ಸಂಘಟನೆಗಳು, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಸಂಘ, ಓಲಾ, ಉಬರ್‌ ಚಾಲಕರು ಮತ್ತು ಮಾಲೀಕರ ಸಂಘ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ದಾಸನಪುರ ಮಾರುಕಟ್ಟೆ ಆಡಳಿತ ಮಂಡಳಿ ಮೊದಲಾದ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.
ಖಾಸಗಿ ಶಾಲೆಗಳ ಒಕ್ಕೂಟ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದು, ರಜೆ ಘೋಷಿಸುವ ವಿಚಾರವನ್ನು ಆಯಾ ಶಾಲೆಗಳಿಗೆ ಬಿಟ್ಟಿದೆ. ಅಲ್ಲದೆ, ಹೋಟೆಲ್‌ ಮಾಲೀಕರ ಸಂಘ ಖಾಸಗಿ ಸಾರಿಗೆ ಸಂಘಟನೆಗಳು, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಶನ್‌ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಮಂಗಳವಾರ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್‌, ಆಟೊ, ಕ್ಯಾಬ್‌, ಮಾರುಕಟ್ಟೆ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೆಲ ಸಂಘಟನೆಗಳು ಸೆ.26ರಂದು ಬೆಂಗಳೂರು ಬಂದ್‌ ಕೈಬಿಟ್ಟು, ಸೆ.29ರಂದು ಎಲ್ಲಾ ಸಂಘಟನೆಗಳು ಒಟ್ಟಾಗಿ ‘ಕರ್ನಾಟಕ ಬಂದ್‌’ ಮಾಡೋಣ ಎಂದಿವೆ. ಸರಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿಎಲ್ಲಾ ಸಂಘಟನೆಗಳು ಒಟ್ಟಾಗಿ ‘ಕರ್ನಾಟಕ ಬಂದ್‌’ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ. ಹೀಗಾಗಿ, ಬೆಂಗಳೂರು ಬಂದ್‌ ಹಿಂಪಡೆಯಲು ಕರವೇ ಮನವಿ ಮಾಡಿದೆ. ಆದರೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಕುರುಬೂರು ಶಾಂತಕುಮಾರ, ‘ಮಂಗಳವಾರ ಬೆಂಗಳೂರು ಬಂದ್‌,’ ಖಚಿತ ಎಂದು ಹೇಳಿದ್ದಾರೆ.
ಚಿತ್ರೋದ್ಯಮವೂ ಬಂದ್‌ಗೆ ಕೈಜೋಡಿಸಿರುವುದರಿಂದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಮುಚ್ಚಲಿವೆ ಎಂದು ಹೇಳಲಾಗಿದೆ. ಆದರೆ ಆಸ್ಪತ್ರೆಗಳು, ಔಷಧದ ಅಂಗಡಿಗಳು, ಆ್ಯಂಬುಲೆನ್ಸ್‌ ಮುಂತಾದ ತುರ್ತು ಸೇವೆಗಳು ಅಬಾಧಿತವಾಗಿ ಇರಲಿದೆ.
ಯಾವುದೆಲ್ಲ ಬಂದ್‌ ಆಗುವ ಸಾಧ್ಯತೆಯಿದೆ..?
ಅಂಗಡಿ-ಮುಂಗಟ್ಟುಗಳು, ಕೈಗಾರಿಕೆಗಳು, ಆ್ಯಪ್‌ ಆಧರಿತ ಟ್ಯಾಕ್ಸಿ ಮತ್ತು ಬೈಕ್‌ ಸೇವೆ, ಆಟೋರಿಕ್ಷಾ, ಹೋಟೆಲ್‌ ಮತ್ತು ರೆಸ್ಟೊರೆಂಟ್‌, ಚಿತ್ರಮಂದಿರ, ಮಾಲ್‌ ಮತ್ತು ಮಲ್ಟಿಪ್ಲೆಕ್ಸ್‌ಗಳು, ಗೂಡ್ಸ್‌ ವಾಹನ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.
ಯಾವುದು ಬಂದ್‌ ಇಲ್ಲ?
ಸರಕಾರಿ ಮತ್ತು ಖಾಸಗಿ ಕಚೇರಿಗಳು, ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಆಂಬ್ಯುಲೆನ್ಸ್‌ ಮತ್ತು ಇತರೆ ತುರ್ತುಸೇವೆ.

ಪ್ರಮುಖ ಸುದ್ದಿ :-   ಗಡಿ ಉಸ್ತುವಾರಿ ಸಚಿವರಾಗಿ ಹೆಚ್‌.ಕೆ ಪಾಟೀಲ ನೇಮಕ

 

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement