ತಮಿಳುನಾಡು: ಕಾವೇರಿ ನೀರು ಬಿಡುವಂತೆ ಒತ್ತಾಯಿಸಿ ತಿರುಚ್ಚಿ ರೈತರಿಂದ ಬಾಯಿಯಲ್ಲಿ ಸತ್ತ ಇಲಿಗಳನ್ನು ಹಿಡಿದುಕೊಂಡು ಪ್ರತಿಭಟನೆ | ವೀಡಿಯೊ

ತಿರುಚಿರಾಪಳ್ಳಿ: ಕಾವೇರಿ ನೀರು ಬಿಡುವಂತೆ ಒತ್ತಾಯಿಸಿ ತಮಿಳುನಾಡು ರೈತರ ಗುಂಪೊಂದು ತಿರುಚಿರಾಪಳ್ಳಿಯಲ್ಲಿ ಸತ್ತ ಇಲಿಗಳನ್ನು ಬಾಯಿಯಲ್ಲಿ ಹಿಡಿದುಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ.
ರಾಷ್ಟ್ರೀಯ ದಕ್ಷಿಣ ಭಾರತ ನದಿ ಜೋಡಣೆ ಕೃಷಿಕರ ಸಂಘದ (ದೇಸಿಯ ತೆನ್ನಿಂತಿಯ ನಾತಿಗಳ ಇನೈಪ್ಪು ವಿವಸಾಯಿಗಳ ಸಂಗಮ) ಆಶ್ರಯದಲ್ಲಿ ಕಾವೇರಿ ನದಿ ಮುಖಜ ಭೂಮಿಗೆ ಸೇರಿದ ರೈತ ಅಯ್ಯಕಣ್ಣು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದೇ ರೈತರ ಗುಂಪು ಸೋಮವಾರ ಕರ್ನಾಟಕದಿಂದ ಕಾವೇರಿ ನೀರಿನ ಬೇಡಿಕೆಯ ಬಗ್ಗೆ ಗಮನ ಸೆಳೆಯಲು ‘ಭಿಕ್ಷಾಟನೆʼ ಮೂಲಕ ಮತ್ತು ತಲೆಬುರುಡೆ ಹಿಡಿದು ಪ್ರತಿಭಟನೆ ನಡೆಸಿತು.

ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡದೆ ರೈತರನ್ನು ವಂಚಿಸುತ್ತಿದೆ. ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುತ್ತಿಲ್ಲ. ನೀರಿನ ಕೊರತೆಯಿಂದ ಕೃಷಿ ಮಾಡಲು ಸಾಧ್ಯವಾಗದೆ ಆಹಾರದ ಕೊರತೆ ಎದುರಾಗಿದೆ. ಇದನ್ನು ಸಾಂಕೇತಿಕವಾಗಿ ಭಿಕ್ಷಾಟನೆ ಪ್ರತಿಭಟನೆಯಲ್ಲಿ ತೊಡಗಿದ್ದೇವೆ ಎಂದು ಪ್ರತಿಭಟನೆಯ ಸಂಘಟಕ ಬಿ ಅಯ್ಯಕಣ್ಣು ಮಾಧ್ಯಮಗಳಿಗೆ ತಿಳಿಸಿದರು.

ತಿರುಚ್ಚಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಕುರುವಾಯಿ ಬೆಳೆಯ ಮೇಲೆ ಕೇಂದ್ರೀಕೃತವಾಗಿದೆ, ಇದು ನೀರಾವರಿಗಾಗಿ ಕಾವೇರಿ ನದಿಯ ನೀರನ್ನು ಅವಲಂಬಿಸಿದೆ. ಕರ್ನಾಟಕ ತನ್ನ ಪಾಲಿನ ನೀರು ಬಿಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇದರಿಂದಾಗಿ ತಮಿಳುನಾಡಿನ ಕಾವೇರಿ ಡೆಲ್ಟಾ ಪ್ರದೇಶದ ಹಲವೆಡೆ ನೀರಿನ ತೀವ್ರ ಕೊರತೆಯಿಂದ ಬೆಳೆದು ನಿಂತಿದ್ದ ಬೆಳೆಗಳು ಒಣಗುತ್ತಿವೆ ಎಂಬುದು ತಮಿಳುನಾಡು ರೈತರ ಆರೋಪವಾಗಿದೆ.
ಈ ಮಧ್ಯೆ, ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಇಂದು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ಬಹುತೇಕ ಬೆಂಗಳೂರು ಸ್ತಬ್ದವಾಗಿದೆ. ಕರ್ನಾಟಕದ ವಿವಿಧೆಡೆ ಆಂದೋಲನಗಳೂ ಮುಂದುವರಿದಿವೆ.

ಪ್ರಮುಖ ಸುದ್ದಿ :-   ಹಿಂದಿ ರಾಜ್ಯಗಳಿಗೆ ʼಗೋ ಮೂತ್ರʼ ರಾಜ್ಯಗಳೆಂದು ಟೀಕಿಸಿದ ಡಿಎಂಕೆ ಸಂಸದ : ಹೇಳಿಕೆಗೆ ಪಕ್ಷಾತೀತವಾಗಿ ಖಂಡನೆ ನಂತರ ಸೆಂಥಿಲ್ ಕುಮಾರ ಕ್ಷಮೆಯಾಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement