ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿವಾಸ ನವೀಕರಣ ಪ್ರಕರಣ : ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ನವೀಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಕೇಂದ್ರ ಗೃಹ ಸಚಿವಾಲಯ ಸಿಬಿಐ ತನಿಖೆಗೆ ಆದೇಶಿಸಿದೆ. ಸಿಬಿಐ ಬುಧವಾರ ಈ ವಿಷಯದಲ್ಲಿ ಪ್ರಾಥಮಿಕ ವಿಚಾರಣೆಯನ್ನು (ಪಿಇ) ದಾಖಲಿಸಿದೆ.
ಅಕ್ಟೋಬರ್ 3ರೊಳಗೆ ಎಲ್ಲ ದಾಖಲೆಗಳನ್ನು ನೀಡುವಂತೆ ದೆಹಲಿ ಸರ್ಕಾರದ ಅಧೀನದಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸಿಬಿಐ ನಿರ್ದೇಶನ ನೀಡಿದೆ.
ದೆಹಲಿಯ ಮುಖ್ಯ ಕಾರ್ಯದರ್ಶಿ ನಡೆಸಿದ ತನಿಖೆಯ ನಂತರ ಬೆಳಕಿಗೆ ಬಂದಿರುವ ಆರೋಪಿತ ಅಕ್ರಮಗಳ ಎಲ್ಲಾ ಅಂಶಗಳನ್ನು ಕೇಂದ್ರ ತನಿಖಾ ಸಂಸ್ಥೆಯು ವಿಚಾರಣೆ ನಡೆಸಲಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಿಬಿಐ ನಿರ್ದೇಶಕರಿಗೆ ಮೇ ತಿಂಗಳಲ್ಲಿ ಬರೆದ ಐದು ಪುಟಗಳ ಪತ್ರವನ್ನು ಆಧರಿಸಿ ತನಿಖೆಗೆ ಆದೇಶಿಸಲಾಗಿದೆ.
ಈ ವಿಚಾರದಲ್ಲಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವಿಶೇಷ ಲೆಕ್ಕ ಪರಿಶೋಧನೆಗೂ ಗೃಹ ಸಚಿವಾಲಯ ಆದೇಶಿಸಿದೆ.

ಈ ವರ್ಷದ ಆರಂಭದಲ್ಲಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಅವರ ಅಧಿಕೃತ ನಿವಾಸದ “ಸುಂದರೀಕರಣ” ಕ್ಕೆ ಸುಮಾರು 45 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ ನಂತರ ವಿವಾದ ಭುಗಿಲೆದ್ದಿತು. ಆರೋಪಗಳ ನಂತರ, ಎಲ್-ಜಿ ಸಕ್ಸೇನಾ ಅವರು ಈ ವಿಷಯದ ಬಗ್ಗೆ ವರದಿಯನ್ನು ಸಲ್ಲಿಸಲು ಮತ್ತು ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತೆಗೆದಿಟ್ಟುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.
ನವೀಕರಣದಲ್ಲಿ ಪ್ರಾಥಮಿಕ ಅವ್ಯವಹಾರ ನಡೆದಿದೆ ಎಂದು ಮುಖ್ಯ ಕಾರ್ಯದರ್ಶಿಗಳ ವರದಿಯಲ್ಲಿ ತಿಳಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಆಗಿರುವ ಲೋಪದೋಷ/ಉಲ್ಲಂಘನೆಗಳನ್ನು ಉಲ್ಲೇಖಿಸಲಾಗಿದೆ. ಈ ವರದಿಯ ಆಧಾರದ ಮೇಲೆ, ಮೇ ತಿಂಗಳಲ್ಲಿ ಸಕ್ಸೇನಾ, ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ಸಿಬಿಐಗೆ ಪತ್ರ ಬರೆದಿದ್ದರು.

ಪ್ರಮುಖ ಸುದ್ದಿ :-   ಮೈಚಾಂಗ್ ಚಂಡಮಾರುತ ತೀವ್ರ : ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ತೀವ್ರ ಮುನ್ನೆಚ್ಚರಿಕೆ

ಇಂಟೀರಿಯರ್ ಡೆಕೊರೇಶನ್ ಗೆ 11.30 ಕೋಟಿ ರೂ., ಸ್ಟೋನ್ ಮತ್ತು ಮಾರ್ಬಲ್ ಫ್ಲೋರಿಂಗ್ ಗೆ 6.02 ಕೋಟಿ ರೂ., ಇಂಟೀರಿಯರ್ ಕನ್ಸಲ್ಟೆನ್ಸಿಗೆ ಒಂದು ಕೋಟಿ ರೂ., ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ಅಪ್ಲೈಯನ್ಸ್ ಗೆ 2.58 ಕೋಟಿ ರೂ., ಅಗ್ನಿಶಾಮಕ ವ್ಯವಸ್ಥೆಗೆ 2.85 ಕೋಟಿ ರೂ., 1.41 ಕೋಟಿ ರೂ.ಗಳ ವಾರ್ಡ್ ರೋಬ್ ಮತ್ತು ಆಕ್ಸೆಸರೀಸ್ ಫಿಟ್ಟಿಂಗ್ ಮೇಲೆ ಮತ್ತು ಅಡುಗೆ ಸಲಕರಣೆಗಳ ಮೇಲೆ 1.1 ಕೋಟಿ ರೂ. ವೆಚ್ಚವಾಗಿದೆ.
ಅಲ್ಲದೆ ಮಂಜೂರಾದ 9.99 ಕೋಟಿ ರೂ.ಗಳಲ್ಲಿ ಪ್ರತ್ಯೇಕವಾಗಿ 8.11 ಕೋಟಿ ರೂ.ಗಳನ್ನು ಸಹ ಮುಖ್ಯಮಂತ್ರಿಗಳ ಕ್ಯಾಂಪ್ ಕಚೇರಿಗೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement