ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರದಂತೆ ರಾಜ್ಯಾದ್ಯಂತ 200 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಲ್ಲಿ ವ್ಯಾಪಾರ ವಹಿವಾಟು ಸ್ತಬ್ದಗೊಂಡಿದೆ. ಬಸ್ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಕರ್ನಾಟಕ-ತಮಿಳುನಾಡು ಗಡಿ ಭಾಗವಾದ ಅತ್ತಿಬೆಲೆಯಲ್ಲಿ ಗಡಿ ಬಂದ್ ಮಾಡಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಅತ್ತಿಬೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.
ಶುಕ್ರವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡ್ ಆಗಬೇಕಿದ್ದ 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇವುಗಳಲ್ಲಿ 22 ಒಳಬರುವ ಮತ್ತು 22 ಹೊರಹೋಗುವ ವಿಮಾನಗಳು ಸೇರಿವೆ. ವಿಮಾನ ನಿಲ್ದಾಣದ ಅಧಿಕಾರಿಗಳು ಕಾರ್ಯಾಚರಣೆಯ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದೆ ಮತ್ತು ಪ್ರಯಾಣಿಕರಿಗೆ ಸಮಯಕ್ಕೆ ತಿಳಿಸಲಾಯಿತು ಎಂದು ಹೇಳಿದ್ದಾರೆ. ಆದಾಗ್ಯೂ, ಕರ್ನಾಟಕ ಬಂದ್‌ನಿಂದಾಗಿ ಅನೇಕ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದರಿಂದ ರದ್ದತಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಟೌನ್‌ಹಾಲ್‌ನಲ್ಲಿ ಪ್ರತಿಭಟನೆಗೆ ಜಮಾಯಿಸಿದ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಇತರ ಸಂಘಟನೆಗಳನ್ನು ಪೊಲೀಸರು ಬಂಧಿಸಿ ಫ್ರೀಡಂ ಪಾರ್ಕ್‌ಗೆ ಕಳುಹಿಸಿದರು. ಬೆಂಗಳೂರಿನಲ್ಲಿ ಬಂದೋಬಸ್ತ್‌ಗಾಗಿ ಒಟ್ಟು 100 ತುಕಡಿಗಳನ್ನು ನಿಯೋಜಿಸಲಾಗಿದೆ.
ಕರ್ನಾಟಕದಲ್ಲಿ ನೀರಿನ ಕೊರತೆಯ ನಡುವೆಯೇ ತಮಿಳುನಾಡಿಗೆ ಕಾವೇರಿ ನೀರು ಬಿಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕನ್ನಡ ಒಕ್ಕೂಟ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಇಂದು, ಶುಕ್ರವಾರ ಟೌನ್‌ಹಾಲ್‌ನಲ್ಲಿ ಸಮಾವೇಶಗೊಳ್ಳಲಿದೆ. ಟೌನ್‌ಹಾಲ್‌ನಲ್ಲಿಯೇ 20 ಕೇಂದ್ರ ಮೀಸಲು ಪೊಲೀಸ್ ಸದಸ್ಯರು, ಕೆಎಸ್‌ಆರ್‌ಪಿಯ ನಾಲ್ಕು ತುಕಡಿಗಳು ಮತ್ತು 100 ನಗರ ಸಶಸ್ತ್ರ ಮೀಸಲು ಪಡೆ ಸೇರಿದಂತೆ 200 ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ.
ವಿಮಾನ ನಿಲ್ದಾಣಕ್ಕೆ ಮುತ್ತಿಗೆ…
ಕರವೇ ಕಾರ್ಯಕರ್ತರು, ಬೆಂಗಳೂರು ಏರ್ಪೋರ್ಟ್ಗೆ ಮುತ್ತಿಗೆ ಹಾಕಿ, ಕಾವೇರಿ ನೀರು ಬಿಡದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣದ ಅರೈವಲ್ ಗೇಟ್ ಬಳಿ ಕನ್ನಡದ ಬಾವುಟಗಳನ್ನು ಕೈಯಲ್ಲಿಡಿದು ಕರವೇ ಕಾರ್ಯಕರ್ತರು ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ಬಸ್ ನಿಲ್ದಾಣಗಳಲ್ಲಿ ಜನರೇ ಇಲ್ಲ…
ಬೆಂಗಳೂರಿನಲ್ಲಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಮೆಜೆಸ್ಟಿಕ್ ನಲ್ಲಿ ಜನರೇ ಇಲ್ಲ. ಸ್ಯಾಟಲೈಟ್ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸುಗಳಿದ್ದರೂ ಜನರೇ ಇಲ್ಲ. ಜನರು ಬಹುತೇಕ ಮನೆಯಲ್ಲಿಯೇ ಉಳಿಯುವ ನಿರ್ಧಾರ ಮಾಡಿದ್ದಾರೆ. ಅಗತ್ಯಸೇವೆಗಳನ್ನು ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಕೋಲಾರದ ಕೆಜಿಎಫ್ ನಲ್ಲಿ ಮುಂಜಾನೆಯಿಂದಲೇ ಬಂದ್ ನಡೆಸಲಾಗಿದೆ. ಬಸ್ಸುಗಳು, ಆಟೋಗಳು ಅಥವಾ ಯಾವುದೇ ಖಾಸಗಿ ವಾಣಿಜ್ಯ ವಾಹನಗಳ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಮುಂಜಾನೆಯಿಂದಲೇ ಕನ್ನಡ ಪರ ಸಂಘಟನೆಗಳಿಂದ ಹಲವಾರು ಕಡೆಗಳಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪ್ರವೀಣ್ ಶೆಟ್ಟಿ ವಶಕ್ಕೆ
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ಖಾಸಗಿ ಹೋಟೆಲ್ ಮುಂದೆ ಬಿಎಂಟಿಸಿ ಬಸ್ ನಲ್ಲಿ ಪ್ರವೀಣ್ ಶೆಟ್ಟಿ ಮತ್ತಿತರರನ್ನು ಪೊಲೀಸರು ತುಂಬಿಸಿಕೊಂಡು ಹೋಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ