ಬೆಂಗಳೂರು : ಕಾವೇರಿ ಸೇರಿದಂತೆ ರಾಜ್ಯದ ಎಲ್ಲಾ ನದಿ ವಿವಾದಗಳಿಗೆ ಸಂಬಂಧಿಸಿದಂತೆ ಕಾನೂನು ಸಲಹಾ ಸಮಿತಿ ರಚಿಸುವಂತೆ ರಾಜ್ಯದ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ ಕೆ ಶಿವಕುಮಾರ ಪಾಲ್ಗೊಂಡಿದ್ದ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಮೂರು ಮಹತ್ವದ ಸಲಹೆಗಳನ್ನು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರು ಸರ್ಕಾರಕ್ಕೆ ನೀಡಿದ್ದಾರೆ.
ತಮಿಳುನಾಡಿಗೆ ನಿತ್ಯ ೩೦೦೦ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಎಂಎ) ಮಾಡಿರುವ ಆದೇಶ ಪ್ರಶ್ನಿಸಿ ಸಿಡಬ್ಲುಎಂಎ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಕ್ಷಣ ಆದೇಶ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ಮೇಕೆದಾಟು ಯೋಜನೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಮರ್ಥವಾಗಿ ಕಾನೂನು ಹೋರಾಟ ನಡೆಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯದ ಎಲ್ಲ ಜಲ ವಿವಾದಗಳಿಗೆ ಸಂಬಂಧಿಸಿದಂತೆ ತಜ್ಞರ ಸಲಹಾ ಸಮಿತಿ ರಚಿಸಬೇಕು. ಅಂತಾರಾಜ್ಯ ಜಲವಿವಾದಗಳ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆ ಹಾಗೂ ಕಾನೂನು ತಂಡಕ್ಕೆ ಮಾಹಿತಿ ನೀಡಲು ಸಮಿತಿ ಅಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.
ನೀರು ಹರಿಸದಿರುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ನ್ಯಾಯಾಂಗ ನಿಂದನೆ ಅರ್ಜಿ ಹಾಕಬಹುದು ಎಂಬುದರ ಕುರಿತು ಸಹ ಚರ್ಚೆಯಾಗಿದೆ. ನೀರಿಲ್ಲದಿರುವುದರಿಂದ ಆದೇಶ ಪಾಲನೆ ಮಾಡಲಾಗಿಲ್ಲ. ಹೀಗಾಗಿ, ಉದ್ದೇಶಪೂರ್ವಕವಾಗಿ ಆದೇಶ ಉಲ್ಲಂಘಿಸುತ್ತಿಲ್ಲ. ಆದ್ದರಿಂದ ನ್ಯಾಯಾಂಗ ನಿಂದನೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೆಲವರು ಹೇಳಿದ್ದಾರೆ.
ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಶಿವರಾಜ ಪಾಟೀಲ, ವಿ ಗೋಪಾಲಗೌಡ, ಆರ್ ವಿ ರವೀಂದ್ರನ್, ನಿವೃತ್ತ ಲೋಕಾಯುಕ್ತರಾದ ಪಿ ವಿಶ್ವನಾಥ ಶೆಟ್ಟಿ, ಕಾನೂನು ಸಚಿವರಾದ ಸಚಿವ ಎಚ್ ಕೆ ಪಾಟೀಲ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಮಾಜಿ ಅಡ್ವೊಕೇಟ್ ಜನರಲ್‌ಗಳಾದ ಬಿ ವಿ ಆಚಾರ್ಯ, ಮಧುಸೂದನ್ ನಾಯಕ, ಉದಯ್ ಹೊಳ್ಳ, ಪ್ರೊ ರವಿವರ್ಮಕುಮಾರ, ಪ್ರಭುಲಿಂಗ ನಾವದಗಿ ಮೊದಲಾದವರು ಬಾಗವಹಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ