ಬೆಂಗಳೂರು : ಕನ್ನಡ ನಟ ನಾಗಭೂಷಣ ಅವರ ಕಾರು ಬೆಂಗಳೂರಿನಲ್ಲಿ ಪಾದಚಾರಿ ದಂಪತಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವಿಗೀಡಾಗಿದ್ದಾರೆ ಹಾಗೂ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೆಪ್ಟೆಂಬರ್ 30ರಂದು ಕೋಣನಕುಂಟೆ ಕ್ರಾಸ್ ಬಳಿ ನಟ ನಾಗಭೂಷಣ ಅವರ ಕಾರ್ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ಪ್ರೇಮಾ ಹಾಗೂ ಕೃಷ್ಣ ದಂಪತಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಪ್ರೇಮಾ ಮೃತಪಟ್ಟಿದ್ದಾರೆ. ಪ್ರೇಮಾ ಅವರಿಗೆ 48 ವರ್ಷ ವಯಸ್ಸಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಪ್ರೇಮಾ ಅವರು ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಪತಿ ಕೃಷ್ಣ (58) ಅವರ ಎರಡೂ ಕಾಲುಗಳು, ತಲೆ ಮತ್ತು ಹೊಟ್ಟೆಗೆ ಗಾಯಗಳಾಗಿವೆ. ಶನಿವಾರ ರಾತ್ರಿ 9:45ರ ಸುಮಾರಿಗೆ ಈ ಘಟನೆ ನಡೆದಿದೆ. ನಟನ ಕಾರು ಮೊದಲು ದಂಪತಿಗೆ ಡಿಕ್ಕಿ ಹೊಡೆದಿದೆ, ನಂತರ, ನೇರವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ನಾಗಭೂಷಣ ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ನಾಗಭೂಷಣ ಅವರು ಖಾಸಗಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮರಳಿ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. ಈ ಕುರಿತು ಬೆಂಗಳೂರಿನ ಕುಮಾರಸ್ವಾಮಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಪೊಲೀಸರು ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಎಂದು ಉಲ್ಲೇಖಿಸಿದ್ದಾರೆ.
ಸಂಕಷ್ಟಕರ ಗಣಪತಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಾಗಭೂಷಣ ಅವರು, ‘ಒಂದಲ್ಲ ಎರಡಲ್ಲ’, ‘ಫ್ರೆಂಚ್ ಬಿರಿಯಾನಿ’, ‘ಲಕ್ಕಿ ಮ್ಯಾನ್’, ‘ಹನಿಮೂನ್’ ಮುಂತಾದ ಸಿನಿಮಾಗಳಲ್ಲಿ ನಾಗಭೂಷಣ ನಟಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ