ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆಯಾಗಿ ಕಲ್ಲು ತೂರಾಟ ಮಾಡಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡದಲ್ಲಿ ನಡೆದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ನಿರ್ದಿಷ್ಟ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ ವಿಚಾರವಾಗಿ ಗೊಂದಲ ಸೃಷ್ಟಿಯಾಗಿತ್ತು. ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಾಗುವ ವೇಳೆ ಘರ್ಷಣೆ ಕಲ್ಲು ತೂರಾಟದ ಘಟನೆ ನಡೆದಿದ್ದು, ಮೆರವಣಿಗೆ ಸಾಗುತ್ತಿದ್ದ ಜನರು ದಿಕ್ಕಾ ಪಾಲಾಗಿ ಓಡಿದ್ದಾರೆ. ಈ ವೇಳೆ ಎರಡು ಕಡೆಯ ಗುಂಪಿನಿಂದ ಕಲ್ಲುತೂರಾಟ ನಡೆದಿದೆ ಎನ್ನಲಾಗಿದ್ದು, ಕಲ್ಲುತೂರಾಟದಿಂದ ಕಾರು, ಬೈಕು, ಮನೆಗಳ ಕಿಟಕಿ ಗಾಜುಗಳು ಜಖಂ ಆಗಿವೆ. ಹಲವರಿಗೆ ಗಾಯಗಳೂ ಆಗಿವೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದ್ದಾರೆ. ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಗಿಗುಡ್ಡ- ಶಾಂತಿನಗರ ಪ್ರದೇಶದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ