ಶಾಲಾ ವಿದ್ಯಾರ್ಥಿಗಳಿಂದ ನಮಾಜ್ ಮಾಡಿಸಿದ ಶಾಲೆ : ಪ್ರತಿಭಟನೆಗಳ ನಂತರ ತನಿಖೆಗೆ ಆದೇಶ

ಅಹಮದಾಬಾದ್: ಅಹಮದಾಬಾದ್‌ನ ಖಾಸಗಿ ಶಾಲೆಯೊಂದು ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಿಂದೂ ಧರ್ಮದ ವಿದ್ಯಾರ್ಥಿಗಳನ್ನು ತನ್ನ ಆವರಣದಲ್ಲಿ ನಮಾಜ್ ಮಾಡಲು ಹೇಳಿರುವುದು ಪ್ರತಿಭಟನೆಗೆ ಕಾರಣವಾಗಿದೆ. ಸೆಪ್ಟೆಂಬರ್ 29 ರಂದು ನಡೆದ ಘಟನೆಯ ಕುರಿತು ಘಟ್ಲೋಡಿಯಾ ಪ್ರದೇಶದಲ್ಲಿ ನೆಲೆಗೊಂಡಿರುವ ಕಲೋರೆಕ್ಸ್ ಫ್ಯೂಚರ್ ಸ್ಕೂಲ್ ಎಂಬ ಶಾಲೆಯ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಶಾಲಾ ಆಡಳಿತ ಮಂಡಳಿಯು ಕ್ಷಮೆಯಾಚಿಸಿದ್ದು, ವಿವಿಧ ಧರ್ಮಗಳ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದು ತಿಳಿಸಿದೆ. ಇಸ್ಲಾಮಿಕ್ ಪ್ರಾರ್ಥನೆಯನ್ನು ಮಾಡಲು ಯಾವುದೇ ವಿದ್ಯಾರ್ಥಿಯನ್ನು ಬಲವಂತಪಡಿಸಿಲ್ಲ ಎಂದು ಅದು ಹೇಳಿದೆ.
ಕಾರ್ಯಕ್ರಮದ ವೀಡಿಯೊವನ್ನು ಶಾಲೆಯ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು ಮತ್ತು ನಂತರ ತೆಗೆದುಹಾಕಲಾಗಿದೆ. ಶಾಲೆಯ ಪ್ರಾಥಮಿಕ ವಿಭಾಗದ ಕೆಲವು ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದನ್ನು ಅದು ತೋರಿಸಿದೆ.

ಶಾಲಾ ಮುಖ್ಯೋಪಾಧ್ಯಾಯಿನಿ ನೀರಲಿ ದಗಲಿ ಅವರು, ಹಬ್ಬ ಹರಿದಿನಗಳಿಗೂ ಮುನ್ನ ವಿದ್ಯಾರ್ಥಿಗಳಿಗೆ ವಿವಿಧ ಧರ್ಮ, ಧಾರ್ಮಿಕ ಆಚರಣೆಗಳ ಬಗ್ಗೆ ಅರಿವು ಮೂಡಿಸುವುದು ಶಾಲೆಯ ಸಂಪ್ರದಾಯ. ಈದ್ ಹಿನ್ನೆಲೆಯಲ್ಲಿ, ನಾವು ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ ಹಬ್ಬದ ಬಗ್ಗೆ ಮಾಹಿತಿ ನೀಡಲು ಈ ಚಟುವಟಿಕೆಯನ್ನು ಆಯೋಜಿಸಿದ್ದೆವು. ನಾವು ಸಂವತ್ಸರಿ ಮತ್ತು ಗಣೇಶ ಚತುರ್ಥಿ ಸೇರಿದಂತೆ ಎಲ್ಲಾ ಧರ್ಮಗಳ ಹಬ್ಬಗಳಿಗೆ ಮುಂಚಿತವಾಗಿ ಇಂತಹ ಚಟುವಟಿಕೆಗಳನ್ನು ನಡೆಸುತ್ತೇವೆ. ಯಾವುದೇ ವಿದ್ಯಾರ್ಥಿಯನ್ನು ನಮಾಜ್ ಮಾಡಲು ಒತ್ತಾಯಿಸಲಾಗಿಲ್ಲ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಬಜರಂಗದಳ ಸೇರಿದಂತೆ ವಿವಿಧ ಗುಂಪುಗಳು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರಿಂದ, ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿತು. ಪ್ರತಿಭಟನೆಯ ವೀಡಿಯೊಗಳು ಶಿಕ್ಷಕನನ್ನು ಥಳಿಸುತ್ತಿರುವುದನ್ನು ತೋರಿಸಿದೆ.
ಇಂತಹ ಕಾರ್ಯಕ್ರಮ ಆಯೋಜನೆಯ ಹಿಂದಿನ ಮನಸ್ಥಿತಿ ಮತ್ತು ಉದ್ದೇಶವನ್ನು ಪತ್ತೆ ಹಚ್ಚಲು ತನಿಖೆ ನಡೆಸಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ತಪ್ಪು ಮಾಡಿದ್ದು ಕಂಡುಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ರಾಜ್ಯ ಪ್ರಾಥಮಿಕ, ಪ್ರೌಢ ಹಾಗೂ ವಯಸ್ಕ ಶಿಕ್ಷಣ ಸಚಿವ ಪ್ರಫುಲ್ ಪನ್ಶೇರಿಯಾ ಹೇಳಿದ್ದಾರೆ. .

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement