ಇರಾನಿನ ನರ್ಗೆಸ್ ಮೊಹಮ್ಮದಿ ಅವರಂತೆಯೇ ಇವರಿಗೂ ಜೈಲಿನಲ್ಲಿದ್ದಾಗಲೇ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿತ್ತು

ತುಳಿತಕ್ಕೊಳಗಾದ ಮಹಿಳೆಯರ ಪರವಾಗಿ ಹೋರಾಡಿದ ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರಿಗೆ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಅವಿರತ ಹೋರಾಟ ಮಾಡಿರುವ ಅವರಿ ಈಗ ಇರಾನಿನ ಜೈಲಿನಲ್ಲಿದ್ದಾರೆ.
ಇರಾನ್ ಸರ್ಕಾರವು ನರ್ಗೆಸ್ ಮೊಹಮ್ಮದಿಯನ್ನು 13 ಬಾರಿ ಬಂಧಿಸಿದೆ. ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಒಟ್ಟು 31 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅಲ್ಲದೆ, 154 ಛಡಿ ಏಟಿನ ಶಿಕ್ಷೆಯನ್ನೂ ವಿಧಿಸಿದೆ. ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುವಾಗಲೂ ಅವರು ಇರಾನಿನ ಜೈಲಿನಲ್ಲಿಯೇ ಇದ್ದಾರೆ.
ಜೈಲಿನಲ್ಲಿರುವಾಗಲೇ ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾದವರು ಇವರೊಬ್ಬರೇ ಅಲ್ಲ, ಇವರಂತೆ ನಾಲ್ವರು ಮಾನವ ಹಕ್ಕು ಹೋರಾಟಗಾರರು ಜೈಲಿನಲ್ಲಿದ್ದುಕೊಂಡೇ ನೊಬೆಲ್‌ ಶಾಂತಿ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.
ಕಾರ್ಲ್ ವಾನ್ ಒಸಿಟ್ಜ್ಕಿ-ಜರ್ಮನಿ
ಪತ್ರಕರ್ತ ಕಾರ್ಲ್ ವಾನ್ ಒಸಿಟ್ಜ್ಕಿ ಅವರಿಗೆ 1935ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ಅವರನ್ನು ಹಿಟ್ಲರನ ನಾಜಿ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಬಂಧಿಸಿ ಇಡಲಾಗಿತ್ತು. ಹೀಗಾಗಿ ನೊಬೆಲ್‌ ಪ್ರಶಸ್ತಿಯನ್ನು ಸ್ವೀಕರಿಸುವುದು ಅವರಿಗೆ ಸಾಧ್ಯವಾಗಲಿಲ್ಲ.
ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಆಡಳಿತದ ಕಟುಟೀಕಾಕಾರರಾಗಿದ್ದ ವಾನ್ ಒಸಿಟ್ಜ್ಕಿ ಅವರನ್ನು ನಾಜಿ ಸೈನ್ಯ ಬಂಧಿಸಿ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ. ಈ ಸಮಯದಲ್ಲಿಯೇ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾಗಿತ್ತು.
ನೊಬೆಲ್ ಸಮಿತಿಯ ನಿರ್ಧಾರಕ್ಕೆ ಆಕ್ರೋಶಗೊಂಡ ಅಡಾಲ್ಫ್ ಹಿಟ್ಲರ್ ಜರ್ಮನಿ ನಾಗರಿಕರು ನೊಬೆಲ್‌ ಪ್ರಶಸ್ತಿ ಸ್ವೀಕರಿಸುವಂತಿಲ್ಲ ಎಂದು ನಿಷೇಧವನ್ನು ಹೇರಿದ್ದ. ನಂತರ ಒಸ್ಸೆಟ್ಜ್ಕಿ ಅವರು 1938 ರಲ್ಲಿ ಬಂಧನದಲ್ಲಿದ್ದಾಗಲೇ ನಿಧನರಾದರು.

ಆಂಗ್ ಸಾನ್ ಸೂ ಕಿ, ಮ್ಯಾನ್ಮಾರ್
ಮ್ಯಾನ್ಮಾರ್‌(ಬರ್ಮಾ)ನ ಪದಚ್ಯುತ ಅಧ್ಯಕ್ಷೆ ಆಂಗ್ ಸಾನ್ ಸೂ ಕಿ ಅವರಿಗೆ ಜೈಲಿನಲ್ಲಿದ್ದಾಗಲೇ 1991ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿತ್ತು. ಅವರು ದೇಶದ ಮಿಲಿಟರಿ ನಾಯಕತ್ವದ ವಿರುದ್ಧ ಶಾಂತಿಯುತ ಹೋರಾಟದ ನೇತೃತ್ವ ವಹಿಸಿದ್ದರು. ಅವರನ್ನು ಮಿಲಿಟರಿ ಆಡಳಿತ ಜೈಲಿನಲ್ಲಿಟ್ಟಿತ್ತು.
ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಪರ ಅಹಿಂಸಾತ್ಮಕವಾಗಿ ಸುದೀರ್ಘ ಹೋರಾಟ ಮಾಡಿದ ಸೂ ಕಿ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರ ಘೋಷಣೆಯಾದ ನಂತರ ಅವರು ನೊಬೆಲ್‌ ಪುರಸ್ಕಾರ ಸ್ವೀಕರಿಸಲು ಓಸ್ಲೋಕ್ಕೆ ಹೋದರೆ ಅವರಿಗೆ ಮರಳಿ ಮ್ಯಾನ್ಮಾರ್‌ಗೆ ಹಿಂತಿರುಗಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಿಲಿಟರಿ ಆಡಳಿತ ಕಟ್ಟೆಚ್ಚರ ನೀಡಿತ್ತು.
ಹೀಗಾಗಿ ಅವರ ಬದಲು 991 ರ ನೊಬೆಲ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಇಬ್ಬರು ಪುತ್ರರು ಮತ್ತು ಅವರ ಪತಿ ಭಾಗವಹಿಸಿ ಸೂ ಕಿ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಅವರು 2010 ರಲ್ಲಿ ಬಿಡುಗಡೆಯಾದರು. ಆ ನಂತರ ದೇಶದ ಚುನಾವಣೆಯಲ್ಲಿ ಅಧಿಕಾರಕ್ಕೇರಿ ದೇಶದ ಮುಖ್ಯಸ್ಥರಾಗಿ ಆಯ್ಕೆಯಾದರು. ಆದರೆ ಫೆಬ್ರವರಿ 2021ರಲ್ಲಿ ಮತ್ತೆ ನಡೆದ ಮಿಲಿಟರಿ ದಂಗೆಯಯಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿ ಅವರನ್ನು ಮತ್ತೆ ಬಂಧಿಸಲಾಯಿತು.
ಲಿಯು ಕ್ಸಿಯಾಬೊ, ಚೀನಾ
ಚೀನಾದ ಭಿನ್ನಮತೀಯ ನಾಯಕ ಲಿಯು ಕ್ಸಿಯಾಬೊ ಅವರು ಜೈಲಿನಲ್ಲಿರುವಾಗಲೇ 2010 ರ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದರು. ಆಗ ಅವರು ವಿಧ್ವಂಸಕ ಕೃತ್ಯ ನಡೆಸಿದ ಆರೋಪದ ಮೇಲೆ ಅವರು ಚೀನಾದ ಜೈಲಿನಲ್ಲಿ 11 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ಚೀನಾದಲ್ಲಿ ಮೂಲಭೂತ ಮಾನವ ಹಕ್ಕುಗಳಿಗಾಗಿ ಅಹಿಂಸಾತ್ಮಕ ಹೋರಾಟ ಕೈಗೊಂಡಿದ್ದಕ್ಕಾಗಿ ಅವರಿಗೆ ನೊಬೆಲ್‌ ಶಾಂತಿ ಪುರಸ್ಕಾರವನ್ನು ಘೋಷಸಲಾಗಿತ್ತು. ನೊಬೆಲ್‌ ಪುರಸ್ಕಾರ ಘೋಷಣೆಯಾದ ನಂತರ ನಂತರ ಅವರ ಪತ್ನಿ ಲಿಯು ಕ್ಸಿಯಾ ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು. ಅವರ ಮೂವರು ಸಹೋದರರಿಗೆ ಚೀನಾ ತೊರೆಯದಂತೆ ನಿರ್ಬಂಧ ಹೇರಲಾಯಿತು. ಅವರ ಪರವಾಗಿ ಯಾರೂ ಪ್ರಶಸ್ತಿ ಸ್ವೀಕರಿಸಲೇ ಇಲ್ಲ. ಲಿಯು ಕ್ಸಿಯಾಬೊ ಅವರು ಜುಲೈ 2017 ರಲ್ಲಿ ಚೀನೀ ಆಸ್ಪತ್ರೆಯಲ್ಲಿ 61 ನೇ ವಯಸ್ಸಿನಲ್ಲಿ ಯಕೃತ್ತಿನ ಕ್ಯಾನ್ಸರ್‌ನಿಂದ ನಿಧನರಾದರು.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಅಲೆಸ್ ಬಿಲಿಯಾಟ್ಸ್ಕಿ, ಬೆಲರೂಸ್‌
ಬೆಲರೂಸಿಯನ್ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸ್ಕಿ ಅವರು ಜುಲೈ 2021 ರಲ್ಲಿ ಜೈಲಿನಲ್ಲಿ ಇರುವಾಗಲೇ ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾದರು.
ಅಲೆಸ್ ಬಿಲಿಯಾಟ್ಸ್ಕಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ವಯಾಸ್ನಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಅಲೆಕ್ಸಾಂಡರ್ ಲುಕಾಶೆಂಕೊ ಆಡಳಿತದ ಅಧಿಕಾರ ದುರುಪಯೋಗದ ವಿರುದ್ಧ ಅವರು ಹೋರಾಟ ನಡೆಸಿದ್ದಾರೆ. ತೆರಿಗೆ ವಂಚನೆಯ ಆರೋಪವನ್ನು ಎದುರಿಸುತ್ತಿದ್ದ ಲುಕಾಶೆಂಕೊ ಅವರ ಆಡಳಿತದ ವಿರುದ್ಧ ಸುದೀರ್ಘ ಹೋರಾಟ ಮಾಡಿದ್ದಾರೆ. ಲುಕಾಶೆಂಕೊ ಸರ್ಕಾರ ಅವರನ್ನು ಬಂಧಿಸಿ ಜೈಲಿನಲ್ಲಿರಿಸಿದೆ.
ನರ್ಗೆಸ್ ಮೊಹಮ್ಮದಿ, ಇರಾನ್‌…
ಇರಾನಿನ ಮಾನವ ಹಕ್ಕುಗಳ ಹೋರಾಟಗಾರ್ತಿ ನರ್ಗೆಸ್ ಮೊಹಮ್ಮದಿ ಅವರು ಪ್ರಶಸ್ತಿ ಘೋಷಿಸಿದಾಗ ಟೆಹ್ರಾನ್‌ನ ಎವಿನ್ ಜೈಲಿನಲ್ಲಿ 31 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರ ಹೋರಾಟವು “ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಹಕ್ಕಿಗೆ” ಸಂಬಂಧಿಸಿದೆ, ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ನಿಗ್ರಹಿಸುವ ನಿಯಮಗಳಿಗೆ ಅವರು ಸವಾಲು ಹಾಕಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement