ನವದೆಹಲಿ: ಯುದ್ಧ ಪೀಡಿತ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ʼಆಪರೇಷನ್ ಅಜಯʼವನ್ನು ಪ್ರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಬುಧವಾರ ಪ್ರಕಟಿಸಿದ್ದಾರೆ. “ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಇಸ್ರೇಲ್ನಿಂದ ಹಿಂದಿರುಗಲು ಬಯಸುವ ನಮ್ಮ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ʼಆಪರೇಷನ್ ಅಜಯʼ ಪ್ರಾರಂಭಿಸಲಾಗುತ್ತಿದೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ವಿದೇಶದಲ್ಲಿರುವ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿರುವ ಇಸ್ರೇಲ್ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು ಇಸ್ರೇಲಿನಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಸ್ತುತ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಗುಂಪು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರ ನಿಖರವಾದ ಸಂಖ್ಯೆ ತನಗೆ ತಿಳಿದಿಲ್ಲ ಎಂದು ಶೋಶಾನಿ ಹೇಳಿದರು.
ಮಂಗಳವಾರ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜೈಶಂಕರ ಅವರಿಗೆ ಪತ್ರ ಬರೆದು ರಾಜ್ಯದ ಸುಮಾರು 7,000 ಜನರು ಇಸ್ರೇಲ್ನಲ್ಲಿದ್ದಾರೆ ಮತ್ತು ಅವರ ಸುರಕ್ಷತೆಗಾಗಿ ಮಧ್ಯಪ್ರವೇಶಿಸಲು ಕೋರಿದ್ದಾರೆ.
ಇಸ್ರೇಲ್ನಲ್ಲಿ ಸಿಲುಕಿರುವ ರಾಜ್ಯದ 84 ಮಂದಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ ತಮಿಳುನಾಡು ಸರ್ಕಾರವೂ ಹೇಳಿಕೆ ನೀಡಿದೆ. ಸಿಕ್ಕಿಬಿದ್ದ ಭಾರತೀಯರು ಹೆಚ್ಚಿನ ಅಧ್ಯಯನ, ವ್ಯಾಪಾರ ಅಥವಾ ಪ್ರವಾಸಿಗರಾಗಿ ಇಸ್ರೇಲ್ಗೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ದೆಹಲಿಯಲ್ಲಿ ೨೪*೭ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಮತ್ತು ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಮತ್ತು ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ಟೆಲ್ ಅವಿವ್ ಮತ್ತು ರಾಮಲ್ಲಾದಲ್ಲಿ ಪ್ರತ್ಯೇಕ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಬುಧವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಉಭಯ ಪಕ್ಷಗಳು ಪರಸ್ಪರ ನಿರಂತರ ದಾಳಿಯಲ್ಲಿ ತೊಡಗಿದ್ದರಿಂದ, ಹೊಸ ಪಕ್ಷಗಳು ಸಂಘರ್ಷಕ್ಕೆ ಪ್ರವೇಶಿಸಿದವು.
ನಿಮ್ಮ ಕಾಮೆಂಟ್ ಬರೆಯಿರಿ