ಕರ್ನಾಟಕ ಶಿಕ್ಷಣ ನೀತಿ ರಚನೆಗೆ ಸಮಿತಿ ರಚನೆ ಮಾಡಿ ಸರ್ಕಾರದ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ನೀತಿ ರಚಿಸಿ ಬುಧವಾರ ಆದೇಶ ಹೊರಡಿಸಿದೆ. ಪ್ರೊ. ಸುಖದೇವ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ಕರಡು ಸಿದ್ಧಪಡಿಸಲು ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ ಥೋರಟ್ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. 2024ರ ಫೆಬ್ರುವರಿ 28ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ. ಸಮಿತಿಗೆ ಒಟ್ಟು 15 ಸದಸ್ಯರನ್ನು ನೇಮಕ ಮಾಡಲಾಗಿದೆ.
ಈ ಸಮಿತಿಯು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ಬೆಳೆಸುವ ಮತ್ತು ಮಕ್ಕಳ ಮನೋವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಲು ಸೂಕ್ತ ಶಿಫಾರಸುಗಳನ್ನು ನೀಡಲಿದೆ ಎಂಬ ಭರವಸೆಯಿದೆ. ಕರ್ನಾಟಕ ರಾಜ್ಯ ಶಿಕ್ಷಣ ನೀತಿಯು ದೇಶಕ್ಕೆ ಮಾದರಿ ಶಿಕ್ಷಣ ನೀತಿಯಾಗಿ ಹೊರಹೊಮ್ಮಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರಚನೆ ಮಾಡುವುದಾಗಿ ಪ್ರಕಟಿಸಿತ್ತು. ಅದರಂತೆ ಬುಧವಾರ ಸಮಿತಿ ಅಧ್ಯಕ್ಷರು, 15 ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. 8 ವಿಷಯ ತಜ್ಞರು, ಪ್ರಮುಖ ಸಾಹಿತಿಗಳಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.
ಕೇಂದ್ರ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸಂಜಯ ಕೌಲ್, ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್. ಜಫೇಟ್, ಪ್ರೊ.ಜೋಗನ್ ಶಂಕರ್, ನ್ಯಾಷನಲ್ ಲಾ ಸ್ಕೂಲ್ ಆಫ್‌ ಇಂಡಿಯನ್ ಯೂನಿವರ್ಸಿಟಿ ಕುಲಪತಿ ಡಾ. ಸುಧೀರ ಕೃಷ್ಣಸ್ವಾಮಿ, ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಚೆನ್ನಿ, ಡಾ. ಶರತ್ ಅನಂತಮೂರ್ತಿ, ಪ್ರೊ. ಪ್ರಣತಿ ಪಂಡ, ಡಾ. ಫಾರುಕ್ ಖಮರ್, ಎ. ನಾರಾಯಣ, ಡಾ. ಸಂತೋಷ್ ನಾಯ್ಕ, ವಿನಯಾ ಒಕ್ಕುಂದ, ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ನಟರಾಜ ಬುಡಲು, ಡಾ. ಎಂ.ಎಸ್. ತಳವಾರ್ ಸೇರಿದಂತೆ 15 ಸದಸ್ಯರನ್ನು ನೇಮಿಸಲಾಗಿದೆ.

ವಿಷಯ ತಜ್ಞರ ನೇಮಕ:
ಪ್ರೊ. ಯೋಗೇಂದ್ರ ಯಾದವ್, ಪ್ರೊ. ರಹಮತ್ ತರಿಕೆರೆ, ಪ್ರೊ. ಜಾನಕಿ ನಾಯರ್, ಡಾ. ಎಸ್. ಚಂದ್ರಶೇಖರ ಶೆಟ್ಟಿ, ಸೋನಂ ವಾಂಗ್‌ಚುಕ್, ಪ್ರೊ. ವಲೇರಿಯನ್ ರೋಡ್ರಿಗೌಸ್, ಪ್ರೊ. ಸಬುನಾ ಭೂಮಿಕಾ ಗೌಡ ಅವರು ವಿಷಯ ತಜ್ಞರಾಗಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಡಾ. ಭಾಗ್ಯವಾನ್ ಸಭೆಯ ನಡವಳಿ ರಚಿಸುವ ಕೆಲಸಕ್ಕೆ ನಿಯೋಜಿಸಿದೆ.
ಎಸ್‌ಇಪಿ ಸಮಿತಿ ರಚಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ತಜ್ಞರ ಪಟ್ಟಿ ರಚಿಸಿತ್ತು. ಆದರೆ, ಪ್ರಾಥಮಿಕ ಶಿಕ್ಷಣ ಇಲಾಖೆಯು ತಜ್ಞರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ತಡವಾಗಿತ್ತು. ಅಂತಿಮವಾಗಿ ಬುಧವಾರ ಸಮಿತಿ ಪ್ರಕಟಿಸಲಾಗಿದೆ.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ: ಶಾಸಕ ಎಚ್. ಡಿ. ರೇವಣ್ಣ ಮೇ 8ರ ವರೆಗೆ ಎಸ್ ಐಟಿ ವಶಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement