ಪ್ಯಾಲೆಸ್ತೀನ್ ಅಧ್ಯಕ್ಷರಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ : ಭಾರತದಿಂದ ಮಾನವೀಯ ನೆರವಿನ ಭರವಸೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಹಾಗೂ ಗಾಜಾ ಆಸ್ಪತ್ರೆಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವ ನಾಗರಿಕರ ಬಗ್ಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ನಡೆಯುತ್ತಿರುವ ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ, ಪ್ಯಾಲೆಸ್ತೀನ್ ಜನರಿಗೆ ಭಾರತವು ಮಾನವೀಯ ನೆರವು ಕಳುಹಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ನಮ್ಮ ತೀವ್ರವಾದ ಕಳವಳವನ್ನು ಹಂಚಿಕೊಂಡರು. ಇಸ್ರೇಲ್-ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ದೀರ್ಘಕಾಲೀನ ತಾತ್ವಿಕ ನಿಲುವನ್ನು ಪುನರುಚ್ಚರಿಸಿದರು ಎಂದು ಪ್ಯಾಲೆಸ್ತೀನ್   ಅಧ್ಯಕ್ಷರೊಂದಿಗೆ ಮಾತನಾಡಿದ ನಂತರ ಪ್ರಧಾನಿ ಮೋದಿ ಹೇಳಿದರು.
ಹಮಾಸ್‌ ಗುಂಪು ಅಕ್ಟೋಬರ್ 7 ರಂದು ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಉಲ್ಬಣಗೊಳ್ಳುತ್ತಲೇ ಇದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಹಮಾಸ್ ವಿರುದ್ಧ ಯುದ್ಧವನ್ನು ಘೋಷಿಸಿತು ಮತ್ತು ಪ್ರತೀಕಾರದ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು, ಹಮಾಸ್ ಕಾರ್ಯಕರ್ತರು ಮತ್ತು ಗಾಜಾ ಪಟ್ಟಿಯಲ್ಲಿರುವ ಅದರ ನೆಲೆಗಳನ್ನು ಗುರಿಯಾಗಿಸಿಕೊಂಡಿತು.
ಏತನ್ಮಧ್ಯೆ, ಗಾಜಾದ ಆಸ್ಪತ್ರೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ನೂರಾರು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ, ಇದು ವಿಶ್ವ ನಾಯಕರಿಂದ ತೀವ್ರ ಖಂಡನೆಗೆ ಒಳಗಾಗಿದೆ. ಇಸ್ರೇಲಿ ವೈಮಾನಿಕ ದಾಳಿಯು ದುರಂತ ಸ್ಫೋಟಕ್ಕೆ ಕಾರಣವಾಯಿತು ಎಂದು ಹಮಾಸ್ ಆರೋಪಿಸಿದರೆ, ಇಸ್ರೇಲಿ ಮಿಲಿಟರಿ ಘಟನೆಯಲ್ಲಿ ಕೈವಾಡವನ್ನು ನಿರಾಕರಿಸಿತು. ಹಾಗೂ ಇಸ್ಲಾಮಿಸ್ಟ್‌ ಜಿಹಾದಿ ಗುಂಪು ಹಾರಿಸಿದ ರಾಕೆಟ್‌ ಮಿಸ್‌ ಪೈರ್‌ ಆಗಿ ಆಸ್ಪತ್ರೆ ಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೊ ಸಾಕ್ಷ್ಯ ಬಿಡುಗಡೆ ಮಾಡಿದೆ.
ಗಾಜಾ ಆಸ್ಪತ್ರೆಯ ಮೇಲಿನ ದಾಳಿಯಲ್ಲಿ ಸಂಭವಿಸಿದ ದುರಂತದ ಜೀವಹಾನಿಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಸಾಗುತ್ತಿರುವ ಸಂಘರ್ಷದಲ್ಲಿ ನಾಗರಿಕ ಸಾವುನೋವುಗಳು ಗಂಭೀರ ಮತ್ತು ನಿರಂತರ ಕಳವಳಕಾರಿ ವಿಷಯವಾಗಿದೆ. ಇದರಲ್ಲಿ ಭಾಗಿಯಾಗಿರುವವರು ಹೊಣೆಗಾರರಾಗಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement