ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಡಿ.ಕೆ. ಶಿವಕುಮಾರಗೆ ಮತ್ತೆ ಸಂಕಷ್ಟದ ಭೀತಿ : ಸಿಬಿಐ ತನಿಖೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

ಬೆಂಗಳೂರು : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಸಂಕಷ್ಟ ಎದುರಾಗಿದ್ದು, ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ಶಿವಕುಮಾರ ಹೈಕೋರ್ಟ್‌ಗೆ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅದಲ್ಲದೇ ಸಿಬಿಐ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಅಲ್ಲದೆ, ಮೂರು ತಿಂಗಳೊಳಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಅಥವಾ ಅಂತಿಮ ವರದಿ ಸಲ್ಲಿಸಬೇಕು ಎಂದು ಸಿಬಿಐಗೆ ಗಡುವು ವಿಧಿಸಿದೆ.
2023ರ ಜುಲೈ 31ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ (ಅಕ್ಟೋಬರ್‌ ೧೯) ಪ್ರಕಟಿಸಿತು.
“ಎಫ್‌ಐಆರ್‌ ವಜಾ ಮಾಡುವಂತೆ ಕೋರಿ ಶಿವಕುಮಾರ ಅವರು ತಡವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಹುತೇಕ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದ್ದು, ಶಿವಕುಮಾರ ಅವರು ತಮ್ಮ ವಿವರಣೆ ಹಾಗೂ ಹಲವು ದಾಖಲೆಗಳನ್ನು ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಇದನ್ನು ತನಿಖಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳದೇ ದಾಖಲೆ ಮತ್ತು ಸಾಕ್ಷಿಗಳನ್ನು ನ್ಯಾಯಾಲಯ ಪರಿಶೀಲಿಸಲು ಆಗುವುದಿಲ್ಲ. ಅಂತಿಮ ವರದಿ ಸಲ್ಲಿಸುವುದಕ್ಕೂ ಮುನ್ನ ಅದನ್ನು ಪರಿಶೀಲಿಸುವುದು ಮಿನಿ ವಿಚಾರಣೆಗೆ ಸಮನಾಗುತ್ತದೆ” ಎಂದು ಆದೇಶದಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ತಾಯಂದಿರ ದಿನದಂದು ಚುನಾವಣಾ ಸಮಾವೇಶದಲ್ಲಿ ಇಬ್ಬರಿಂದ ಅನಿರೀಕ್ಷಿತ ಉಡುಗೊರೆ ಪಡೆದ ಪ್ರಧಾನಿ ಮೋದಿ..| ವೀಕ್ಷಿಸಿ

“ಸಿಬಿಐ ತನಿಖೆ ಮಾಡುವುದು ತಡವಾಗುತ್ತಿದೆ ಎಂದಾದರೆ ತನಿಖೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಗೊಳಿಸಬಹುದು. ಎಲ್ಲ ದಾಖಲೆಗಳನ್ನು ಪರಿಗಣಿಸಿ ತನಿಖಾಧಿಕಾರಿಯು ʼಬಿʼ ವರದಿ ಅಥವಾ ಆರೋಪ ಪಟ್ಟಿಯನ್ನು ಸಲ್ಲಿಸಬಹುದಾಗಿದೆ. ತನಿಖಾಧಿಕಾರಿಯು ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅದರಿಂದ ಆರೋಪಮುಕ್ತಗೊಳ್ಳಲು ಅಥವಾ ಆರೋಪ ಪಟ್ಟಿಯನ್ನು ವಜಾ ಮಾಡಲು ಕೋರಿ ಅರ್ಜಿ ಸಲ್ಲಿಸುವ ಸ್ವಾತಂತ್ರ್ಯ ಡಿ ಕೆ ಶಿವಕುಮಾರ ಅವರಿಗೆ ಇರಲಿದೆ. ಈ ಹಿನ್ನೆಲೆಯಲ್ಲಿ ಅವರ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಆದೇಶ ಪ್ರಕಟವಾದ ಮೂರು ತಿಂಗಳ ಒಳಗೆ ಸಿಬಿಐ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಿಬಿಐ ತನಿಖೆಗೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು?
2017ರಲ್ಲಿ ಡಿಕೆ ಶಿವಕುಮಾರ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅದಾದ ಬಳಿಕ ಜಾರಿ ನಿರ್ದೇಶನಾಲಯ ಕೂಡ ಶಿವಕುಮಾರ ವಿರುದ್ಧ ತನಿಖೆ ನಡೆಸಿತ್ತು. ಸಿಬಿಐ 2019ರಲ್ಲಿ ತನಿಖೆ ನಡೆಸಿತ್ತು. ಅದಾದ ಬಳಿಕ ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ಅಂದಿನ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು.

ಪ್ರಮುಖ ಸುದ್ದಿ :-   ಗರ್ಭಧಾರಣೆ ಕುರಿತ ಪುಸ್ತಕದಲ್ಲಿ 'ಬೈಬಲ್' ಪದ ಬಳಕೆ: ನಟಿ ಕರೀನಾ ಕಪೂರಗೆ ಮಧ್ಯಪ್ರದೇಶ ಹೈಕೋರ್ಟ್ ನೋಟಿಸ್

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement