ಸುವರ್ಣ ಕರ್ನಾಟಕ…. ಒಂದು ಚಿಂತನೆ

(ಅಕ್ಟೋಬರ್ ೨೦ ರಂದು ಸುವರ್ಣ ಕರ್ನಾಟಕ ಮಹೋತ್ಸವ ಇದ್ದು, ವರ್ಷದುದ್ದಕ್ಕೂ ಕನ್ನಡ ನಾಡು, ನುಡಿ, ಸಂಸ್ಕೃತಿ, ಅಭಿವೃದ್ಧಿ ಕುರಿತು ಕಾರ್ಯಕ್ರಮಗಳು ನಡೆಯುತ್ತವೆ)
ಕನ್ನಡ ಭಾಷೆ ಮಾತನಾಡುವ ಪ್ರದೇಶಗಳ ಒಗ್ಗೂಡಿಸುವಿಕೆ ಹಾಗೂ ಏಕೀಕರಣಗೊಂಡುದುದರ ಬಗ್ಗೆ ಒಂದು ಬಹುಕಾಲಿನ ಇತಿಹಾಸ ಇರುವಂತೆಯೇ, ಕರ್ನಾಟಕವೆಂಬ ಹೆಸರಿನ ನಾಮಕರಣಕ್ಕೂ ಕೂಡ ಒಂದು ಚರಿತ್ರೆ ಇದೆ. ಪ್ರಾಚೀನ ಕಾಲದಿಂದಲೂ ಕನ್ನಡಿಗರಿಗೆ ಸಾಂಸ್ಕೃತಿಕವಾಗಿ ಲಭಿಸಿದ್ಧ “ಕರ್ನಾಟಕ”ವೆಂಬ ಹೆಸರು ಕಾಲಾಂತರದಲ್ಲಿ ಏಕೀಕೃತ ಭೂ ಪ್ರದೇಶಕ್ಕೆ ಲಭಿಸದೇ ಹೋದದ್ದು, ಅನೇಕರ ಆತಂಕಕ್ಕೆ ಕಾರಣವಾಗಿತ್ತು.
ಅಂದಿನ ನಾಡ ಪ್ರಭುಗಳಿಗೆ ಕರ್ನಾಟಕವೆಂಬ ಹೆಸರಿನ ಪ್ರಾಚೀನತೆಯ ಕುರಿತು, ಸ್ಪಷ್ಟ ಅರಿವಿದ್ದರೂ ಕೂಡ ಈ ನಾಡಿಗೆ ಮೈಸೂರು ರಾಜ್ಯ ಎಂದು ಕರೆದಿದ್ದು, ಅವರ ಸಂಕುಚಿತತೆಯ ಧೋರಣೆಯನ್ನು ಅನಾವರಣಗೊಳಿಸಿತು. ಜೊತೆಗೆ ಮೈಸೂರು ಪ್ರಾಂತ್ಯದ ಕೆಲ ಸಂಸ್ಥಾನಿಕರಲ್ಲಿ ಸಾಹಿತಿ, ಕಲಾವಿದರೂ, ರಾಜಕಾರಣಿಗಳಿಗೂ ಕೂಡ ಕರ್ನಾಟಕ ಎಂಬ ಹೆಸರಿನ ಬಯಕೆ ಈಡೇರದೇ ಇದ್ದದ್ದೂ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಅಸಮಾಧಾನವನ್ನು ಹೋಗಲಿಡಿಸಲು ಹಾಗೂ ಈ ರಾಜ್ಯಕ್ಕೆ ಮತ್ತೆ ಕರ್ನಾಟಕವೆಂದು ನಾಮಕರಣ ಮಾಡಲು ಹದಿನೇಳು ವರ್ಷಗಳ ಕಾಲ ಹೆಣಗಾಡಬೇಕಾಯಿತು. ಈ ನಿಟ್ಟಿನಲ್ಲಿ ಹಲವಾರು ಕನ್ನಡ ಸಂಘಟನೆಗಳು, ವ್ಯಕ್ತಿಗಳು ಅವಿರತವಾಗಿ ಶ್ರಮಿಸಿದರು. ಅವರಲ್ಲಿ ಹಳೇ ಮೈಸೂರು ಭಾಗದ ಕೆಲ ಧುರೀಣವನ್ನು ಹೊರತು ಪಡಿಸಿದರೇ ಮಿಕ್ಕವರೆಲ್ಲ ಮೈಸೂರೇತರ ಭಾಗದವರಾಗಿದ್ದಾರೆ ಎಂದು ಹೇಳಿದಲ್ಲಿ ತಪ್ಪಾಗಲಾರದು.
೧೯೫೬ರಿಂದಲೂ ಈ ಕನ್ನಡನಾಡು ನೂತನ ಹೆಸರು ಪಡೆಯುವವರೆಗೆ ಅಂದರೇ ೧೯೭೩ರ ವರೆಗೆ ಸದನಗಳಲ್ಲಿ ಅನೇಕ ಚರ್ಚೆಗಳಾದರೂ ಸರಿಯಾದ ಕಾರ್ಯಗಳಾಗಿರಲಿಲ್ಲ. ಕರ್ನಾಟಕ ಹೆಸರನ್ನು ಚರ್ಚಿಸಲೆಂದೇ ಈ ಕುರಿತು ಸದನದಲ್ಲಿ ಚರ್ಚಿಸಲು ಅಂದಾನಪ್ಪ ದೊಡ್ಡಮೇಟಿಯವರು ಸದನದಲ್ಲಿ ಪ್ರಸ್ತಾಪವೊಂದನ್ನು ಮಂಡಿಸಿದ್ದರೂ ಕೂಡ, ನಾಮಕರಣದ ವಿಚಾರದಲ್ಲಿ ಧನಾತ್ಮಕ ಫಲ ಅಥವಾ ಬೆಂಬಲ ಲಭಿಸಲಿಲ್ಲ. ಆದರೂ ಕೂಡ ಮೈಸೂರೇತರ ಪ್ರದೇಶಗಳಿಂದ ಚುನಾಯಿತರಾದವರಲ್ಲಿ ಲಿಂಗಸೂರಿನ ಬಸವನಗೌಡ, ಆರ್. ಎಸ್. ಪಾಟೀಲ ಮೊದಲಾದವರು ಈ ಕುರಿತು ಸದನದಲ್ಲಿ ಚರ್ಚೆಗೆ ಮುಂದಾದಾಗ, ಮುಂದೂಡಿಕೆಯ ಪ್ರಸಂಗಗಳೇ ಸಾಮಾನ್ಯವಾಗಿ ತೊಡಗಿದವು. ಇದು ಸುಮಾರು ೧೯೬೬ರ ವರೆಗೂ ಮುಂದುವರೆದು ಕೊಂಡು ಬಂತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಂದಾನಪ್ಪ ದೊಡಮೇಟಿಯವರ ಅವಿರತ ಪ್ರಯತ್ನ ಮುಂದುವರೆಯಿತು. ಅವರಿಗೆ ಶಕ್ತಿಯಾಗಿ ನಿಂತವರು ಅನೇಕ ಸಾಹಿತಿಗಳು, ಪತ್ರಿಕೆಗಳು, ನಾಗರಿಕರು ಹಾಗೂ ಸಂಘ-ಸಂಸ್ಥೆಗಳು ಹಾಗೂ ಕನ್ನಡ ಭಾಷೇತರ ನೈಜ ಮನಸ್ಸು ಹೊಂದಿದವರು.
ಸದನಗಳಲ್ಲಿ ನಾಮಕರಣದ ವಿಚಾರವನ್ನು ಮತ್ತೆ ಮತ್ತೆ ಮುಂಡಿಸಿದರೂ ಕೂಡ ಪ್ರಗತಿ ಕಾಣಲಿಲ್ಲ. ಈ ಪ್ರಸ್ತಾಪವನ್ನು ಕೆಲ ಕಾಣದ ಕೈಗಳು ಮುಂದೂಡುತ್ತ ಹೋದವು.

ನಮ್ಮ ನಾಡಿಗೆ “ಮೈಸೂರು ರಾಜ್ಯ” ಎಂಬ ಹೆಸರು ಸರಿ ಹೊಂದುವುದಿಲ್ಲವೆಂಬ ಅರಿವು ಪ್ರತಿಯೊಬ್ಬ ಕನ್ನಡಿಗರಲ್ಲಿತ್ತು. ಯಾಕೆಂದರೆ ಯಾವುದೆ ರಾಜ್ಯಕ್ಕೆ ನಗರದ ಹೆಸರನ್ನು ಇಟ್ಟಿರುವ ಉದಹರಣೆಗಳು ಇಲ್ಲ. ಈ ಕುರಿತು ಮಾನಸಿಕ ಹಾಗೂ ಭಾವನಾತ್ಮಕ ನೆಲೆಗಟ್ಟಿನಲ್ಲಿ ಅನೇಕ ಸಂಸ್ಥೆಗಳು, ಸಾಹಿತಿ-ಕಲಾವಿದರು ತಮ್ಮ ಕಾರ್ಯಚಟುವಟಿಕೆಗಳ ಮೂಲಕ ರುಜುವಾತು ಪಡಿಸುತ್ತಾ, ಕರ್ನಾಟಕ ಶಬ್ದಕ್ಕೆ ಹೆಚ್ಚಿನ ಮಹತ್ವ ನೀಡಿದರು. ಈ ನಿಟ್ಟಿನಲ್ಲಿ, ಬಿ.ಎಂ.ಶ್ರೀ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಟಿ.ಎಸ್. ವೆಂಕಣ್ಣಯ್ಯ, ಅ.ನ. ಕೃಷ್ಣರಾವ್, ತಿ.ತಾ.ಶರ್ಮ, ಆಲೂರು ವೆಂಕಟರಾವ್, ನಾಡೋಜ ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವಾರು ಸಾಹಿತಿಗಳು ಹಾಗೂ ಬುದ್ಧಿ ಜೀವಿಗಳು, ಅನೇಕ ಶಾಲಾ-ಕಾಲೇಜುಗಳಲ್ಲಿ ಕರ್ನಾಟಕ ಸಂಘಗಳನ್ನು ಹುಟ್ಟು ಹಾಕಿದ್ದರು. ಜೊತೆಗೆ ಸಮಾಜದಲ್ಲಿ, ಸಾರ್ವಜನಿಕವಾಗಿ, ಕರ್ನಾಟಕತ್ವವನ್ನು ಸಾರುವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘ, ಕರ್ನಾಟಕ ಇತಿಹಾಸ ಮಂಡಲ, ಕರ್ನಾಟಕ ಕಾಲೇಜು, ಕರ್ನಾಟಕ ಗಾಂಧಿ ಸೇವಾ ಸಂಘ, ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಮಕ್ಕಳ ಕೂಟ, ಕರ್ನಾಟಕ ವಿಶ್ವವಿದ್ಯಾಲಯ, ಸೇರಿದಂತೆ ನೂರಾರು ಸಂಘ-ಸಂಸ್ಥೆಗಳು ಕಾರ‍್ಯ ನಿರ್ವಹಿಸುತ್ತಿದ್ದರೂ ಕೂಡ, ಈ ಏಕೀಕೃತ ರಾಜ್ಯಕ್ಕೆ ಮಾತ್ರ ಮೈಸೂರು ಎಂದು ಕರೆಯುತ್ತಿದ್ದುದು ಮುಜುಗು ತರುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಸ್ತಿತ್ವದ ಪ್ರಶ್ನೆ ಪ್ರಬಲವಾಗತೊಡಗಿತು. ಈ ನಿಟ್ಟಿನಲ್ಲಿ ೧೯೬೦ರ ದಶಕದ ಕೊನೆಯ ವೇಳೆಗೆ ಅನೇಕ ಕನ್ನಡ ಚಳವಳಿಗಾರರು ಸ್ವಾಭಿಮಾನದ ಸಂಕೇತವಾಗಿ ತೆಗೆದುಕೊಂಡು ಅಂದೋಲನವನ್ನೇ ಮಾಡಿದರೂ ಕೂಡ ಯಾವುದೇ ಫಲ ಕಾಣಲಿಲ್ಲ.
ಕನ್ನಡ ಪ್ರದೇಶಗಳು ೧೯೫೬ರಲ್ಲಿ ಒಂದು ಗೂಡಿ ವಿಶಾಲ ಮೈಸೂರು ರಾಜ್ಯವೆಂದು ಕರೆಸಿಕೊಂಡ ತರುವಾಯ ಎಸ್ ನಿಜಲಿಂಗಪ್ಪ ಮುಖ್ಯ ಮಂತ್ರಿಯಾದರು. ಕೆಂಗಲ್ ಹನುಮಂತಯ್ಯನವರು ಕರ್ನಾಟಕ ಹೆಸರಿನ ಕುರಿತು ಉತ್ಸುಕರಾಗಿದ್ದರೂ ಕೂಡ ಅವರಿಗೆ ಏನನ್ನೂ ಮಾಡಲು ಆಗಿರಲಿಲ್ಲ, ಆದರೂ ಕೂಡ ಈ ಕುರಿತ ಅವರ ಕ್ರಮ ಹಾಗೂ ಕಾಳಜಿ ದೊಡ್ಡದಾಗಿತ್ತು.

ಪ್ರಮುಖ ಸುದ್ದಿ :-   ಮಂಗನ ಕಾಯಿಲೆಗೆ ಉತ್ತರ ಕನ್ನಡದಲ್ಲಿ ಮತ್ತೊಬ್ಬ ಮಹಿಳೆ ಸಾವು

ಕೆಂಗಲ್ಲ ಹನುಮಂತಯ್ಯನವರ ತರುವಾಯ ಕಡಿದಾಳ ಮಂಜಪ್ಪ, ಬಿ.ಡಿ. ಜತ್ತಿ, ಎಸ್. ಆರ್. ಕಂಠಿ ಮುಖ್ಯ ಮಂತ್ರಿಗಳಾದರೂ ಕೂಡ ಯಾರೊಬ್ಬರಿಗೂ ಈ ನಾಡಿನ ಹೆಸರನ್ನು ಕರ್ನಾಟಕವೆಂದು ಬದಲಿಸಲಾಗಲಿಲ್ಲ.
ಡಿ. ದೇವರಾಜ ಅರಸರು ೧೮-೦೭-೧೯೭೨ ರಂದು ರಾಜ್ಯ ಸಚಿವ ಸಂಪುಟದಲ್ಲಿ ಈ ಬಗೆಗೆ ದಿಟ್ಟ ನಿರ್ಣಯನವನ್ನು ತೆಗೆದುಕೊಂಡರು. ನಾಡಿನ ಅಧಿಕೃತ ನಾಮಕರಣದ ಠರಾವು ೨೭-೦೭-೧೯೭೨ ರಂದು ವಿಧಾನ ಸಭೆಯ ಒಪ್ಪಿಗೆಯನ್ನು ಮತ್ತು ೩೧-೦೭-೧೯೭೨ ರಂದು ವಿಧಾನ ಪರಿಷತ್ತಿನ ಒಪ್ಪಿಗೆಯನ್ನು ಪಡೆಯಿತು. ೧೬ನೇ ಕನ್ನಡ ರಾಜ್ಯೋತ್ಸವ ದಿನ ಅಂದರೆ ೧-೧೧-೧೯೭೨ ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿ ಹೆಚ್ಚಿನ ಮಹತ್ವ ಪಡೆಯಿತು. ಈ ದಿನದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ. ದೇವರಾಜ ಅರಸು ಅವರು “ನಾವಿಂದು ೧೬ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಮದ ಆಚರಿಸುತ್ತಿದ್ದು, ಈ ಹಿಂದಿನ ಉತ್ಸವಗಳ ರೀತಿ-ನೀತಿಗೂ ಇಂದು ನೆಯುತ್ತಿರುವ ಉತ್ಸವದಲ್ಲಿ ಒಂದು ವ್ಯತ್ಯಾಸವಿದ್ದು, ಅದು ನಮಗೆಲ್ಲರಿಗೂ ಆನಂದ ಕೊಡಲಿದೆ. ನಮ್ಮ ರಾಜ್ಯದ ಹೆಸರನ್ನು “ಕರ್ನಾಟಕ” ವೆಂದು ಕರೆಯಲು ನಾವು ತೀರ್ಮಾನ ಮಾಡಿರುವುದಾಗಿದೆ. ಇನ್ನೂ ಅಖೈರಾಗಿ ಮತ್ತು ಸಾಂಪ್ರದಾಯಿಕವಾಗಿ ಈ ಹೆಸರನ್ನು ಬದಲಾವಣೆ ಮಾಡತಕ್ಕಂತಹ ಕಾರ್ಯ ಮುಂದಿನ ಒಂದೆರಡು ತಿಂಗಳಲ್ಲಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಅಲ್ಲದೆ, ಈ ಠರಾವು ವಿಧಾನ ಸಭೆ ಹಾಗೂ ವಿಧಾನ ಮಂಡಲದ ಒಪ್ಪಿಗೆ ಪಡೆದ ನಂತರ ೩೦-೦೭-೧೯೭೩ ರಂದು ಲೋಕಸಭೆಯ ಹಾಗೂ ೮-೦೮-೧೯೭೩ ರಂದು ರಾಜ್ಯ ಸಭೆಯ ಒಪ್ಪಿಗೆ ಪಡೆದು ಅಂತಿಮವಾಗಿ ಅಂದಿನ ರಾಷ್ಟಾಧ್ಯಕ್ಷರಾಗಿದ್ದ ವಿ.ವಿ. ಗಿರಿ ಅವರು ದಿನಾಂಕ ೦೮-೧೦-೧೯೭೩ ರಂದು ತಮ್ಮ ಅಧಿಕೃತ ಒಪ್ಪಿಗೆ ನೀಡುವ ಮೂಲಕ ಹಿಂದಿನ ಮೈಸೂರು ರಾಜ್ಯವು ʼಕರ್ನಾಟಕʼ ಎಂಬ ಹೆಸರನ್ನು ಪಡೆಯಿತು. ಈ ದೃಢ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ ಅವರ ಪಾತ್ರ ಅಪಾರವಾಗಿದೆ. ಈ ಸನ್ನಿವೇಶದಲ್ಲಿ ಮೋಹನಲಾಲ್ ಸುಖಾಡಿಯಾ ಅವರು ಕರ್ನಾಟಕದ ರಾಜ್ಯಪಾಲರಾಗಿದ್ದರು. ಅಕ್ಟೋಬರ್ ೨೦ ರಂದು ʼಕರ್ನಾಟಕʼ ಎಂದು ಘೋಷಣೆಯಾಯಿತು.

ಪ್ರಮುಖ ಸುದ್ದಿ :-   ಸಿಎಂ ನಿಂದನೆ : ಅನಂತಕುಮಾರ​ ಹೆಗಡೆ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು

ನೂತನ ಕರ್ನಾಟಕದ ಕನ್ನಡಿಗರನ್ನು ಉದ್ದೇಶಿಸಿ ಅಂದಿನ ಪ್ರಧಾನಿಗಳಾದ ಇಂದಿರಾಗಾಂಧಿ ಅವರು “ಕರ್ನಾಟಕ ಎಂಬ ಹೆಸರಿಗೆ ಪುರಾತನ ಇತಿಹಾಸವಿದೆ. ಈ ಹೆಸರಿನ ಹಿಂದೆ ಪುರಾತನ ಸಂಸ್ಕೃತಿ ಮತ್ತು ಸಂಪ್ರದಾಯವಿದೆ. ಪುರಾಣಗಳು ಮತ್ತು ವಾಸ್ತು ಶಿಲ್ಪಗಳಲ್ಲಿ ಈ ಹೆಸರಿನ ಉಲ್ಲೇಖವಿದೆ. ಇದು ಅನೇಕ ಆಶೋತ್ತರಗಳನ್ನು ಪ್ರತಿಬಿಂಬಿಸುವ ಹೆಸರು. ಈ ಆಶೋತ್ತರಗಳ ಈಡೇರಿಕೆಗಾಗಿ ಕರ್ನಾಟಕದ ಜನತೆ ಸಿದ್ಧರಾಗಬೇಕು ಎಂದು ಆಶಿಸಿದರು.
೧-೧೧-೧೯೭೩ರ ರಾಜ್ಯೋತ್ಸವವನ್ನು ʼಕರ್ನಾಟಕ ರಾಜ್ಯೋತ್ಸವʼ ಹೆಸರಿನಿಂದ ಆಚರಿಸಲು ಪ್ರಾರಂಭಿಸಲಾಯಿತು. ಇತ್ತ ಹಂಪಿಯಲ್ಲಿ ನಡೆದ ನಾಮಕರಣೋತ್ಸವದಲ್ಲಿ ಮೈಸೂರಿನ ದೊರೆಗಳಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಮತ್ತು ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ ಅವರನ್ನು ಕೆ.ಎಚ್. ಪಾಟೀಲರ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಇದು ಕೂಡ ಕರ್ನಾಟಕ ಚರಿತ್ರೆಯ ಒಂದು ಭಾಗವಾಗಿದೆ.
ಒಟ್ಟಿನಲ್ಲಿ ಶತ-ಶತಮಾನಗಳಿಂದ ಕರುನಾಡಿಗೆ ಸಾಂಸ್ಕೃತಿಕವಾಗಿ ಇದ್ದ ಹೆಸರು ಕರ್ನಾಟಕ, ಆದರೆ ವಸಾಹತು ಶಾಹಿ ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಈ ನಾಡು ಛಿದ್ರಗೊಂಡು ವಿಭಿನ್ನ ಆಡಳಿತಗಳಲ್ಲಿ ಹಂಚಿಹೋಗಿತ್ತು. ಹೀಗೆ ಹರಿದು ಹಂಚಿಹೊಗಿದ್ದ ಕನ್ನಡಿಗರು ಒಂದಾಗಲು ಏಕೀಕರಣದ ಚಳುವಳಿ ಮಾಡಬೇಕಾಯಿತು. ಈ ಚಳುವಳಿಯಿಂದ ೧೯೫೬ ನವೆಂಬರ್‌ ೧ ರಂದು ಅಸ್ತಿತ್ವಕ್ಕೆ ಬಂದಿದ್ದು ವಿಶಾಲ ಮೈಸೂರು ರಾಜ್ಯ. ಹೀಗಾಗಿ ಒಂದು ಗೂಡಿದ ಕರ್ನಾಟಕದ ಪರಿಸರದವರಿಗೆ ತಮ್ಮನ್ನು ಮೈಸೂರು ರಾಜ್ಯದವರೆಂದು ಕರೆಸಿಕೊಳ್ಳಲು ಇಷ್ಟಪಡಲಿಲ್ಲ. ಇದು ಕನ್ನಡಿಗರ ಮನದಾಳದ ಕಿಚ್ಚಾಗಿ ಮತ್ತೊಮ್ಮೆ ಈ ನಾಡಿಗೆ ʼಕರ್ನಾಟಕʼ ಎಂಬ ಹೆಸರನ್ನಿಡಲು ಹೋರಾಟಕ್ಕಿಳಿಯಬೇಕಾಯಿತು. ಹಲವು ಹೋರಾಟಗಳ ನಂತರ ಈ ರಾಜ್ಯ ಪುನಃ ʼಕರ್ನಾಟಕʼವೆಂದು ನಾಮಕರಣಗೊಂಡು ೫೦ ವರ್ಷವನ್ನು ಪೂರೈಸಿದೆ. ಈಗ ನಾಮಕರಣದ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದೇವೆ. ಅಂದಿನಿಂದ ಈವರೆಗಿನ ಕಾಲಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ರಾಜ್ಯವು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಯನ್ನು ಕಂಡು, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ, ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗುವ ಮೂಲಕ ವಿಶ್ವಮಾನ್ಯತೆಯನ್ನು ಗಳಿಸುತ್ತಿದೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement