ಬೆಂಗಳೂರು: ರೈತರ ಜಮೀನಿಗೆ ತೆರಳುವ ದಾರಿಗೆ ಅನ್ಯಭೂಮಾಲೀಕರು ಇನ್ನುಮುಂದೆ ಅಡ್ಡಿಪಡಿಸುವಂತಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದ್ದು, ರೈತರು ಖಾಸಗಿ ಜಮೀನುಗಳಲ್ಲಿ ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಕಾಲುದಾರಿ, ಬಂಡಿದಾರಿ ಅಥವಾ ಓಡಾಟ ಸೌಲಭ್ಯ ನೀಡಲು ಸರ್ಕಾರ ಸೂಚನೆ ನೀಡಿದೆ. ರಾಜ್ಯಾದ್ಯಂತ ರೈತರಿಂದ ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ನಕಾಶೆಯಲ್ಲಿ ಕಂಡು ಬರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಕೃಷಿ ಬಳಕೆದಾರರು ತಿರುಗಾಡಲು ಅಡ್ಡಿಪಡಿಸುವಂತಹ ಅಥವಾ ದಾರಿಗಳನ್ನು ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿ ಸುತ್ತೊಲೆ ಹೊರಡಿಸಿದೆ.
ರಾಜ್ಯದಲ್ಲಿ ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಭೂಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿಯ ಸಮಸ್ಯೆ ಇದೆ. ರೈತರಿಗೆ ತೊಂದರೆಗಳಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿದ್ದವು.
ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸಲು ದಾರಿ ಸಮಸ್ಯೆಗಳಿದ್ದು, ರೈತರಿಗೆ ಇದರಿಂದ ತೊಂದರೆಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಮಸ್ಯೆ ಬಹುಕಾಲದಿಂದಲೂ ಇದೆ. ರೈತರು ಕೆಲವು ಖಾಸಗಿ ಜಮೀನುಗಳನ್ನು ದಾಟಿಕೊಂಡು ಕೃಷಿ ಪೂರಕ ಚಟುವಟಿಕೆಗಳನ್ನು ಜರುಗಿಸಲು ಹಾಗೂ ಬೆಳೆದ ಫಸಲನ್ನು ಹೊರತರಲಾಗದೆ ನಷ್ಟ ಹೊಂದುತ್ತಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಸಾರ್ವಜನಿಕರಿಂದ ಮನವಿ/ದೂರುಗಳು ಸ್ವೀಕೃತವಾಗಿವೆ. ಗ್ರಾಮ ನಕಾಶೆಯಲ್ಲಿರುವ ದಾರಿಗಳಲ್ಲಿ ರೈತರು ತಿರುಗಾಡಲು ಅವಕಾಶವಿದ್ಯಾಗ್ಯೂ ಅಡ್ಡಿಯಾಗಿರುವುದು ಕಂಡು ಬಂದಿದೆ.
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 89ರಲ್ಲಿ ದಾರಿಯ ಹಕ್ಕುಗಳು ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟರ್ನಲ್ಲಿ ನಮೂದು ಮಾಡಲು ಅವಕಾಶವಿದೆ.
ದಿ ಇಂಡಿಯನ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ 1882 ರಂತೆ 1882 ರಂತೆ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದು, ಇದಕ್ಕೆ ಅನ್ಯಭೂಮಾಲೀಕರು ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ.ಅಗತ್ಯ ಬಿದ್ದಲ್ಲಿ ಈ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಕೂಡ ಅವಕಾಶವಿದೆ. ಅಲ್ಲದೆ, ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗದ ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ರೀತಿಯಲ್ಲಿ ತಹಸೀಲ್ದಾರರು ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮವಹಿಸುವ ಅಧಿಕಾರ ಹೊಂದಿರುತ್ತಾರೆ.
ಈ ಹಿನ್ನೆಲೆಯಲ್ಲಿ ತಹಸೀಲ್ದಾರರು ನಕಾಶೆಯಲ್ಲಿರುವ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಕೃಷಿ ಬಳಕೆದಾರರು ತಿರುಗಾಡಲು ಅಡ್ಡಿಪಡಿಸುವಂತಹ ಅಥವ ಬಳಕೆಗೆ ಮುಚ್ಚಿರುವಂತಹ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಿ ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಕ್ರಮವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ