ಚುನಾವಣೆಯಲ್ಲಿ ಶಾಸಕ ಹೆಬ್ಬಾರ ವಿರುದ್ಧ ಕೆಲಸ ಮಾಡಿದವರನ್ನ ಬಿಜೆಪಿ ಪದಾಧಿಕಾರಿಗಳಾಗಿ ಮರುನಿಯೋಜನೆ : ಹೆಬ್ಬಾರ ಅಭಿಮಾನಿ ಬಳಗ ತೀವ್ರ ವಿರೋಧ

ಯಲ್ಲಾಪುರ : ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ವಿರುದ್ಧದ ಕೆಲಸ ಮಾಡಿದವರಿಗೆ ಬಿಜೆಪಿಯಲ್ಲಿ ಈಗ ಮೊದಲಿದ್ದ ಅವರ ಹುದ್ದೆಗೆ
ಮತ್ತೆ ಮರುನಿಯೋಜನೆ ಮಾಡಿರುವುದಕ್ಕೆ ಶಿವರಾಂ ಹೆಬ್ಬಾರ ಅಭಿಮಾನ ಬಳಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪಕ್ಷದ ನಾಯಕರ ಈ ನಡೆಯಿಂದ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ತೀವ್ರ ನೋವಾಗಿದೆ ಎಂದು ಮಾಜಿ ಪಟ್ಟಣ ಪಂಚಾಯತ ಸದಸ್ಯ ಹಾಗೂ ಶಿವರಾಮ ಅಭಿಮಾನಿ ಬಳಗದ ಪ್ರಮುಖ ಸತೀಶ ನಾಯ್ಕ ಹೇಳಿದ್ದಾರೆ.
ಅವರು ಹೆಬ್ಬಾರ ಅಭಿಮಾನಿ ಬಳಗ ಹೆಸರಿನಲ್ಲಿ ಏಳು ಜನ ಪಟ್ಟಣ ಪಂಚಾಯತ ಸದಸ್ಯರು ಮಂಗಳವಾರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸಂಕಲ್ಪದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಕ್ಷದ ಈ ನಡೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಭೆಯಲ್ಲಿಯೂ ಸಹ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಸತೀಶ ನಾಯ್ಕ ಆರೋಪಿಸಿದ್ದಾರೆ.
ಶಾಸಕರು ಈ ಕುರಿತು ಮೌನ ವಹಿಸಿದ್ದಾರೆ. ಆದರೆ ನಾವೆಲ್ಲ ಇದನ್ನು ಖಂಡಿಸುತ್ತೇವೆ. ಹಿಂದುತ್ವದ ಹೆಸರಿನಲ್ಲಿ ಹಿಂದೂಗಳನ್ನು ತುಳಿಯುತ್ತ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾವು ೧೪ ಪ.ಪಂ. ಸದಸ್ಯರೂ ಶಾಸಕರೊಂದಿಗೆ ಇದ್ದೇವೆ. ಅವರೊಂದಿಗೆ ಪಕ್ಷ ಸೇರಿದ್ದೇವೆ. ಅವರೊಂದಿಗೇ ಮುಂದೆಯೂ ಇರುತ್ತೇವೆ. ನಮ್ಮನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

ಶಾಸಕ ಹೆಬ್ಬಾರ ಅವರೇ ತಮ್ಮ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿರುವುದರ ಬಗ್ಗೆ ಮನವಿ ಪತ್ರ ನೀಡಿ ತಿಳಿಸಿದ್ದರು. ಆದರೆ ಆಗಲೂ ಪಕ್ಷದಿಂದ ಅವರನ್ನು ಉಚ್ಚಾಟಿಸದೆ ಹುದ್ದೆಯನ್ನು ಮಾತ್ರ ಕಡಿಮೆ ಮಾಡಲಾಗಿತ್ತು. ಆದರೆ ಈಗ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮತ್ತೆ ಅದೇ ಹುದ್ದೆ ನೀಡಿ ಜಿಲ್ಲಾಧ್ಯಕ್ಷರು ಆದೇಶ ಮಾಡಿದ್ದಾರೆ. ಹೀಗಾಗಿ ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ನಾಯಕರ ಕ್ರಮವನ್ನು ಪ್ರಶ್ನಿಸುತ್ತಿದ್ದೇವೆ. ಈಗ ಅವರ ಸೇರ್ಪಡೆಯಿಂದ ಶಾಸಕರಿಗೆ ಅವಮಾನವಾಗಿದೆ. ಇದನ್ನು ಹೆಬ್ಬಾರ ಅಭಿಮಾನಿ ಬಳಗ ತೀವ್ರವಾಗಿ ವಿರೋಧಿಸುತ್ತದೆ ಎಂದ ಅವರು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ಈ ಬಿಜೆಪಿ ನಾಯಕರು ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಹೆಬ್ಬಾರರ ಗಮನಕ್ಕೂ ತಾರದೇ ಅವರನ್ನು ಪುನಃ ಮರುನಿಯೋಜನೆ ಮಾಡಿರುವ ಕ್ರಮ ಸರಿಯಲ್ಲ. ಶಿರಸಿಯ ಕಾಗೇರಿಯವರ ಕ್ಷೇತ್ರದಲ್ಲಿ ಇಂತಹದ್ದೇ ಪ್ರಕರಣದಲ್ಲಿ ಯಾರನ್ನೂ ಮರುನಿಯೋಜನೆ ಮಾಡಿಲ್ಲ. ಆದರೆ ಹೆಬ್ಬಾರ ಅವರ ಕ್ಷೇತ್ರದಲ್ಲಿ ಮಾತ್ರ ಮರುನಿಯೋಜನೆ ಮಾಡಲಾಗಿದೆ. ಕಾಗೇರಿಯವರಿಗೊಂದು ನ್ಯಾಯ, ಹೆಬ್ಬಾರರಿಗೊಂದು ನ್ಯಾಯವೇ ಎಂದು ಅವರು ಪ್ರಶ್ನಿಸಿದರು. ಪಕ್ಷದ ಈ ನಿರ್ಧಾರದಿಂದ ಮುಂದಿನ ಚುನಾವಣೆಯಲ್ಲಿ ಇದೇ ವ್ಯಕ್ತಿಗಳು ಮತ್ತೆ ಪಕ್ಷವಿರೋಧಿ ಚಟುವಟಿಕೆ ಮಾಡಲು ಈ ಮೂಲಕ ಆಸ್ಪದ ನೀಡಿದಂತಾಗಿದೆ. ಹೆಬ್ಬಾರ ಅವರ ಗಮನಕ್ಕೆ ತಾರದೇ ರಾಜ್ಯ ನಾಯಕರು, ಶಿಸ್ತು ಸಮಿತಿಯವರು ಅನುಸರಿಸಿದ ಕ್ರಮವನ್ನು ನಾವು ಒಪ್ಪುವುದಿಲ್ಲ ಎಂದರು.

ಪಟ್ಟಣ ಪಂಚಾಯಯತ ಮಾಜಿ ಅಧಕ್ಷೆ ಸುನಂದಾ ದಾಸ್ ಮಾತನಾಡಿ, ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಹೊರಟ ಪಕ್ಷ ದ್ರೋಹಿಗಳಿಗೆ ಮತ್ತೆ ಅದೇ ಸ್ಥಾನಗಳಿಗೆ ಮರು ಸೇರ್ಪಡೆ ಮಾಡುತ್ತಿರುವ ಸುದ್ದಿ ನಿಷ್ಠಾವಂತ ಹೆಬ್ಬಾರ ಅಭಿಮಾನಿಗಳಾದ ನಮ್ಮಂತಹ ಸಹಸ್ರಾರು ಮಂದಿಗೆ ಅತೀವ ಬೇಸರವಾಗಿದೆ. ಈ ನಡೆಯನ್ನು ಅತ್ಯಂತ ಗಂಭೀರವಾಗಿ ಖಂಡಿಸುತ್ತೇವೆ. ಪ್ರಮುಖವಾಗಿ ನನ್ನನ್ನು ಸಹ ಹೆಸರಿಗೆ ಮಾತ್ರ ಶಕ್ತಿ ಕೇಂದ್ರದ ಅಧ್ಯಕ್ಷೆಯನ್ನಾಗಿಸಿ ಫೋನ್ ಕರೆ ಮಾಡುವ ಕೆಲಸಕ್ಕೆ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಿದ ಧೋರಣೆ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾರ ಅಭಿಮಾನಿ ಬಳಗದ ಪ್ರಮುಖರಾದ  ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಅಮಿತ್ ಅಂಗಡಿ, ಸದಸ್ಯರಾದ ಪ್ರಶಾಂತ ತಳವಾರ, ಅಬ್ದುಲ್ ಅಲಿ, ಹಲೀಮ ಕಕ್ಕೇರಿ, ಗೀತಾ ದೇಶ ಭಂಡಾರಿ, ನಾಗರಾಜ್ ಅಂಕೋಲೆಕರ ಇದ್ದರು.

ಪ್ರಮುಖ ಸುದ್ದಿ :-   ಎಚ್.ಡಿ ರೇವಣ್ಣ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement