ಕನ್ನಡ ಎನೆ ಕುಣಿದಾಡುವುದೆನ್ನೆದೆ…..

(ನವಂಬರ್‌ ೧ರಂದು ೬೮ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ)
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯದೊಂದಿಗೆ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ರಾಜ್ಯದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಉದಯವಾಗಿ (ನವಂಬರ್ ೧) ೬೮ ವರ್ಷವಾಯಿತು. ಕರ್ನಾಟಕದ ಹೆಸರನ್ನು ಸಾಹಿತಿ ಚದುರಂಗ ಅವರು ಸೂಚಿಸಿದ್ದನ್ನು ಕನ್ನಡಿಗರು ಸದಾ ಸ್ಮರೀಸಬೇಕು. ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ರಾಜ್ಯೋತ್ಸವ ಮತ್ತು ಕರುನಾಡಿನ ಏಕೀಕರಣದ ಕಥೆ ಭಾರೀ ರೋಚಕವಾಗಿದೆ. ನಮ್ಮ ರಾಜ್ಯ ಸ್ವಾತಂತ್ರ್ಯ ಪೂರ್ವದ ಹಿಂದೆ ಕನ್ನಡನಾಡು ೨೨ ವಿವಿಧ ಆಡಳಿತಕ್ಕೆ ಹರಿದು ಹಂಚಿ ಹೋಗಿತ್ತು. ನಮ್ಮ ಅಸ್ತಿತ್ವ ಮತ್ತು ಸ್ವಂತಿಕೆ ಎನ್ನುವುದು ದೂರದ ಮಾತಾಗಿತ್ತು. ಏಕೆಂದರೆ, ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಈ ಕರುನಾಡು ಬ್ರಿಟೀಷರ ಒಡೆದಾಳುವ ನೀತಿಯಿಂದ ಅನೇಕ ಪ್ರಾಂತ್ಯಗಳಲ್ಲಿ ಹರಿದುಹಂಚಿ ಹೋಗಿತ್ತು.
ಕನ್ನಡ ಭಾಷಿಕರಿಗೆ ನಮ್ಮ ನೆಲ, ಮತ್ತು ಪ್ರದೇಶ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತು ಪಡಿಸಿದರೆ ಯಾವುದೇ ನಿರ್ದಿಷ್ಟವಾದ ಪ್ರದೇಶ ಇಲ್ಲವಾಗಿತ್ತು. ಮಿಕ್ಕ ಪ್ರಾಂತ್ಯಗಳಲ್ಲಿ ಕನ್ನಡಿಗರಿಗೆ ಮತ್ತು ಅವರ ಭಾಷೆಗೆ ಪ್ರಾಧಾನ್ಯತೆ ಇರಲಿಲ್ಲ. ಜೊತೆಗೆ ಪ್ರಾದೇಶಿಕ ಪ್ರಗತಿಯಲ್ಲಿಯೂ ಅಸಮಾನತೆ ಭುಗಿಲೆದ್ದಿತ್ತು. ಇದರಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರು ಪರಕೀಯರಂತೆ ಅಸಹನೀಯ ಬದುಕು ನಡೆಸುವ ಪರಿಸ್ಥಿತಿ ಇತ್ತು. ಇಂತಹ ಪರಿಸ್ಥಿತಿಯಲ್ಲಿ ಹರಿದು ಹೋದ ನಾಡನ್ನು ಒಂದು ಗೂಡಿಸಲು ಸಂಕಲ್ಪತೊಟ್ಟು ಅಂದಿನ ನಾಯಕರು ಆಂದೋಲನವನ್ನು ಆರಂಭಿಸಿದರು.
ಆಂದೋಲನದ ಶ್ರೀಕಾರ ಉತ್ತರ ಕರ್ನಾಟಕದಲ್ಲಿ ಆಯಿತು. ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಅಂದಾನಪ್ಪ ದೊಡ್ಡಮೇಟಿ, ಅದರಗುಂಚಿ ಶಂಕರಗೌಡ ಪಾಟೀಲ, ರಂಜಾನ್‌ಸಾಬ್ ಪಿಂಜಾರ, ಉತ್ತಂಗಿ ಚನ್ನಪ್ಪ, ಎಸ್. ಆರ್ . ಕಂಠಿ, ಗಳಗನಾಥ, ಡಿ.ಪಿ. ಕರ್ಮರಕರ್, ಗುದ್ಲೆಪ್ಪ ಹಳ್ಳಿಕೇರಿ, ಗದಿಗೆಯ್ಯ ಹೊನ್ನಾಪುರಮಠ, ಕೇರೂರ ವಾಸುದೇವಾಚಾರ್ಯ, ಬಿ.ಡಿ. ಜತ್ತಿ, ಜಯದೇವಿತಾಯಿ ಲಿಗಾಡೆ, ಎಸ್.ಸಿ. ನಂದಿಮಠ, ಡಾ. ಪಾಟೀಲ ಪುಟ್ಟಪ್ಪ, ಶಿ.ಶಿ. ಬಸವನಾಳ ಮುಂತಾದ ಮಹನೀಯರು ಹೋರಾಟದಲ್ಲಿ ಭಾಗವಹಿಸಿ, ಅನೇಕ ಕಷ್ಟಗಳನ್ನು ಅನುಭವಿಸಿ ಕನ್ನಡನಾಡನ್ನು ಒಗ್ಗೂಡಿಸಲು ತಮ್ಮ ಕೊಡುಗೆಗಳನ್ನು ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು.

೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರ ಮೈಸೂರು ಸಂಸ್ಥಾನದ ದೊರೆಗಳು ಭಾರತದ ಭಾಗವಾಗಿ ವಿಲೀನಗೊಳ್ಳಲು ಸಮ್ಮತಿಸಿದರು. ೧೯೫೦ರಲ್ಲಿ ಮೈಸೂರು ಸ್ವತಂತ್ರ ಭಾರತದ ರಾಜ್ಯವಾಗಿ ಉದಯಿಸಿತು. ಹಾಗೂ ಅಂದಿನ ಮೈಸೂರು ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಮೈಸೂರು ರಾಜ್ಯದ ರಾಜ್ಯಪಾಲರಾದರು. ಆದಾಗ್ಯೂ ಕನ್ನಡನಾಡು ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಂದು ಹರಿದು ಹಂಚಿಹೋಗಿದ್ದ ಈ ಕಾಲಘಟ್ಟದಲ್ಲಿ ಉಲ್ಲೇಖಿತ ಮಹನೀಯರ ಸಾಂಗತ್ಯದಲ್ಲಿ ಏಕೀಕರಣದ ಚಳುವಳಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಅಂದರೇ ೨ನೇ ಭಾಗದಲ್ಲಿ ಪ್ರಾರಂಭವಾಯಿತು. ೧೯೫೬ರ ರಾಜ್ಯ ಪುನರ್ ಸಂಘಟಿತ ಕಾಯಿದೆಯಿಂದ ಮೈಸೂರು ರಾಜ್ಯದಿಂದ ಹೊರಗೆ ಹಂಚಿಹೋಗಿದ್ದ ಕನ್ನಡದ ಪ್ರದೇಶಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಿ ೧೯೫೬ರ ನವಂಬರ್ ೧ರಂದು ರಾಜ್ಯವನ್ನು ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. ೧೯೭೩ರ ನವಂಬರ್‌ ೧ರಂದು ʼಕರ್ನಾಟಕʼ ಎಂದು ಮರು ನಾಮಕರಣ ಮಾಡಲಾಯಿತು. ಅಂದಿನಿಂದ ನವಂಬರ್‌ ೧ರ ದಿನವನ್ನು ʼಕರ್ನಾಟಕ ರಾಜ್ಯೋತ್ಸವʼ ದಿನವನ್ನಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ರೂಪುಗೊಂಡಾಗ ೧೯ ಜಿಲ್ಲೆಗಳನ್ನು ಹೊಂದಿತ್ತು. ಈಗ ಕರ್ನಾಟಕ ೩೧ ಜಿಲ್ಲೆಗಳನ್ನು ಹೊಂದಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ ಕಂದಾಯ ವಿಭಾಗಗಳಾಗಿವೆ.

ಪ್ರಮುಖ ಸುದ್ದಿ :-   ವಂಚನೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಿಂದ ಚೈತ್ರಾ ಬಿಡುಗಡೆ

ಕರ್ನಾಟಕ ಹೆಸರು …
ಪ್ರಾಚೀನ ಕಾಲದ ಮಹಾಭಾರತ, ರಾಮಾಯಣ, ಮೃಚ್ಛಟಿಕಾ ಗ್ರಂಥಗಳಲ್ಲಿ ಕರ್ನಾಟಕ ಎಂಬ ಹೆಸರು ಉಲ್ಲೇಖಗೊಂಡಿದೆ. ಕರ್ನಾಟಕ ಎಂಬ ಪದದ ಮೂಲದ ಬಗ್ಗೆ ಅನೇಕ ಅಭಿಪ್ರಾಯಗಳಿದ್ದರೂ ಕೂಡ ಸಾಮಾನ್ಯವಾಗಿ “ಕರು ಮತ್ತು ನಾಡು” ಎಂಬ ಪದಗಳು ಸೇರಿ ಕರುನಾಡು ಎಂಬ ಪದವಾಗಿದೆ. ಕರುನಾಡು ಎಂದರೆ “ಎತ್ತರದ ಭೂಮಿ” ಕಪ್ಪು ಮಣ್ಣಿನ ನಾಡು ಎಂದೂ ಹೇಳಲಾಗುತ್ತದೆ. ನಮ್ಮ ರಾಜ್ಯದ ಬಾವುಟ ಹಳದಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಭುವನೇಶ್ವರಿ ದೇವಿಯು ನಮ್ಮ ನಾಡಿನ ಅಧಿದೇವತೆಯಾಗಿದ್ದಾಳೆ.

ಬಾವುಟದ ಇತಿಹಾಸ…
ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟವಿದೆ. ಕನ್ನಡಕ್ಕೊಂದು ಪ್ರತ್ಯೇಕ ಬಾವುಟದ ಅವಶ್ಯಕತೆಯನ್ನು ಮನಗಂಡ ಕನ್ನಡ ನಾಡು-ನುಡಿಯ ಸುಪ್ರಸಿದ್ಧ ಹೋರಾಟಗಾರರಾದ ಎಂ. ರಾಮಮೂರ್ತಿ, ಮೂಲತಃ ಹಳದಿ ಬಣ್ಣ ಶಾಂತಿ ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣದ ಕ್ರಾಂತಿಯ ಸಂದೇಶ ನೀಡುತ್ತದೆ. ಜೊತೆಗೆ ಇವೆರಡು ಬಣ್ಣಗಳು ಅರಿಶಿಣ ಮತ್ತು ಕುಂಕಮವನ್ನು ಸೂಚಿಸುತ್ತದೆ. ಆರಂಭದಲ್ಲಿ ಈ ಬಾವುಟವನ್ನು ಕೂಡಿಸಿದಾಗ ಬಾವುಟದ ನಡುವೆ ಕರ್ನಾಟಕದ ಭೂಪಟ ಮತ್ತು ಅದರ ನಡುವಿನಲ್ಲಿ ಏಳು ಕವಲುಗಳುಳ್ಳ, ತೆನೆಯ ಚಿತ್ರವಿತ್ತು. ಮುದ್ರಿಸಲು ಸ್ವಲ್ಪ ಕಷ್ಟವಾಗುತ್ತಿದ್ದುದರಿಂದ ಅದನ್ನು ತೆಗೆದು ಕೇವಲ ಕೆಂಪು ಮತ್ತು ಹಳದಿ ಬಣ್ಣವನ್ನು ಮಾತ್ರ ಉಳಿಸಿಕೊಳ್ಳಲಾಯಿತು.

ಆಚರಣೆಯ ಮಹತ್ವ …
ಕರ್ನಾಟಕದ ಉದಯಕ್ಕೆ ಕಾರಣರಾದ ಕನ್ನಡ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಟಕರಾವ್ ಅವರೂ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನವೇ ೧೯೦೫ ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಪ್ರಾರಂಭಿಸಿದರು. ಭಾರತ ೧೯೪೭ರಲ್ಲಿ ಸ್ವತಂತ್ರಗೊಂಡು, ೧೯೫೦ ರಲ್ಲಿ ಗಣರಾಜ್ಯವಾದ ನಂತರ ಭಾಷಾವಾರು ಪ್ರದೇಶಗಳು ವಿಂಗಡಣೆ ಸಮಿತಿಯ ಶಿಫಾರಸಿನ ಮೇರೆಗೆ ಆಗಿವೆ. ೧೯೭೩ ರಲ್ಲಿ ಜುಲೈನಲ್ಲಿ ಮತ್ತೊಮ್ಮೆ ಮೈಸೂರಿನ ಬದಲಾಗಿ ಕರ್ನಾಟಕವೆಂದು ನಾಮಕರಣದ ಮಾಡಬೇಕೆಂಬ ಚರ್ಚೆ ಜೋರಾಗಿ ಸಾಕಷ್ಟು ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಅಂದು ಮುಖ್ಯಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ ಅವರು ಕರ್ನಾಟಕದ ಏಕೀಕರಣಕ್ಕಾಗಿ ಅಪಾರವಾಗಿ ಶ್ರಮಿಸಿದ್ದಾರೆ.
ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ʼಕರ್ನಾಟಕʼ ಎಂದು ಪುನರ್ ನಾಮಕರಣ ಮಾಡಿದರು.
ಕನ್ನಡ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಇಂದಿನ ಯುವ ಪೀಳಿಗೆಗೆ ಅರಿವನ್ನುಂಟುಮಾಡುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಮಹತ್ವ ಪಡೆದಿದೆ. ಅಲ್ಲದೇ ನಾಡಿಗಾಗಿ, ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರಿಗೆ, ಗೌರವಿಸುವ ಮೂಲಕ ನಾಡಿನ ಸೇವೆಯನ್ನು ಮಾಡಲು ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಈ ಮಹತ್ವವನ್ನು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕವಾಗುತ್ತದೆ. ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕೂಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹಾಗೂ ನವಂಬರ್ ಮಾಸದಾದ್ಯಂತ ಕನ್ನಡ ಭಾಷೆ, ನಾಡು, ನುಡಿಯ ಕುರಿತಾದ ಕಾರ್ಯಕ್ರಮಗಳು ರಾಜ್ಯ ಸರ್ಕಾರ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ನಡೆಯುತ್ತವೆ. ಕನ್ನಡ ನಾಡು ನುಡಿಗೆ ಶ್ರಮಿಸಿದ ಗಣ್ಯರನ್ನು, ಸಂಘ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡುತ್ತಿದೆ.

ಪ್ರಮುಖ ಸುದ್ದಿ :-   ಐಸಿಸ್‌ ಬೆಂಬಲಿಗನ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ: ಯತ್ನಾಳ ಆರೋಪ

ಜ್ಞಾನಪೀಠ ಪುರಸ್ಕೃತರಾದ ಕುವೆಂಪು, ಡಾ. ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಶಿವರಾಮ ಕಾರಂತ, ಡಾ. ವಿ. ಕೆ. ಗೋಕಾಕ, ಡಾ. ಯು. ಅರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಸಾಹಿತಿಗಳು, ಕವಿಗಳು, ಲೇಖಕರು, ಪ್ರಕಾಶಕರು, ಕಲಾವಿದರು, ಚಲನಚಿತ್ರಗಳು, ಪತ್ರಿಕೆ ಮತ್ತು ನಿಯತಕಾಲಿಕೆಗಳು ಕನ್ನಡ ಸಾಹಿತ್ಯವನ್ನು ಇಂದು ಶ್ರೀಮಂತಗೊಳಿಸಿವೆ. ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದಾಗಿ, ಸಾಮಾಜಿಕ ಜಾಲತಾಣಗಳಾದ ಯ್ಯೂ-ಟ್ಯೂಬ್, ವಾಟ್ಸಪ್, ಫೇಸ್ ಬುಕ್, ಟ್ವಿಟರ್‌, ವೆಬ್‌ಸೈಟುಗಳಲ್ಲಿ ಕನ್ನಡ ಬೆಳೆಯುತ್ತಿದೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೈಗಾರಿಕೆ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ರಾಜ್ಯ ಅಪಾರ ಪ್ರಗತಿ ಸಾಧಿಸುತ್ತಿದೆ. ರಾಜ್ಯದ ರಾಜಧಾನಿ ಬೆಂಗಳೂರು ಆಗಿದ್ದರೆ, ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದು ಚಿರಪರಿಚಿತವಾಗಿದೆ. ಧಾರವಾಡವನ್ನು ವಿದ್ಯಾಕಾಶಿ ಎಂದು ಕರೆಯಲಾಗುತ್ತದೆ. ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಪ್ರದೇಶವನ್ನು ಇತ್ತಿಚೆಗೆ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ.

ಎರಡೂವರೆ ಸಾವಿರ ವರುಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆಯಾಗಿದೆ. ಇದು ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದು. ಇಂದಿನ ಪೋಷಕರು ಮತ್ತು ಮಕ್ಕಳು ನಾಡಿನ ಭಾಷೆ ಮತ್ತು ಸಂಸ್ಕೃತಿಯ ಬಗಗೆ ಕಾಳಜಿ ವಹಿಸಬೇಕು.. ಭವಿಷ್ಯಕ್ಕಾಗಿ ಇಂಗ್ಲೀಷ್ ಬಳಕೆ ಅನಿವಾರ‍್ಯವಾದರೂ ಕನ್ನಡವನ್ನು ಕಡೆಗಣಿಸುವುದು ಸಲ್ಲದು.
ಗಂಡಭೇರುಂಡ ಲಾಂಛನ ಹೊಂದಿರುವ ನಮ್ಮ ರಾಜ್ಯ ೧,೯೧,೭೯೧ ಚ. ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ೭ ಕೋಟಿ ಮೇಲ್ಪಟ್ಟು ಜನಸಂಖ್ಯೆಯನ್ನು ಹೊಂದಿದೆ. ೨೮ ಲೋಕಸಭೆ ಮತ್ತು ೧೨ ರಾಜ್ಯಸಭಾ ಸದಸ್ಯರನ್ನು ರಾಜ್ಯ ಹೊಂದಿದ್ದು, ೨೨೪ ವಿಧಾನ ಸಭೆ ಮತ್ತು ೭೫ ವಿಧಾನ ಪರಿಷತ್ತು ಸದಸ್ಯರನ್ನು ಹೊಂದಿದೆ.
ನಾವು ಮನೆಗಳಲ್ಲಿ ಮಕ್ಕಳಿಗೆ ಮಾತೃ ಭಾಷೆಯಲ್ಲಿನ ಅಧ್ಯಯನದ ಮಹತ್ವದ ಕುರಿತು ತಿಳಿಹೇಳದಿದ್ದರೆ ಕನ್ನಡ ಭಾಷೆಯ ಅಸ್ತಿತ್ವದ ಕುರಿತು ನಿಜಕ್ಕೂ ಚಿಂತಿಸಬೇಕಾಗುತ್ತದೆ. ಕನ್ನಡ ಪರ ಸಂಘಟನೆಗಳು ವರ್ಷದೂದ್ದಕ್ಕೂ ಕನ್ನಡ ಕುರಿತಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಯುವ ಪೀಳಿಗೆಗೆ ಕನ್ನಡದ ಮಹತ್ವದ ಕುರಿತು ತಿಳಿವಳಿಕೆ ನೀಡಿದಲ್ಲಿ ಕನ್ನಡ ರಾಜ್ಯೋತ್ಸವ ಅರ್ಥ ಪೂರ್ಣವೆನಿಸುತ್ತದೆ.
– ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement