ಮಹಾರಾಷ್ಟ್ರ ಶಾಸಕರ ಅನರ್ಹತೆ ಪ್ರಕರಣ: ತೀರ್ಪು ನೀಡಲು ವಿಧಾನಸಭಾ ಸ್ಪೀಕರ್‌ ಗೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಈ ಹಿಂದಿನ ಶಿವಸೇನೆ ಪಕ್ಷದ ಬಂಡಾಯ ಸದಸ್ಯರ ವಿರುದ್ಧದ ಅನರ್ಹತೆ ಪ್ರಕರಣದ ಕುರಿತಾದ ತೀರ್ಪನ್ನು ಈ ವರ್ಷದ ಡಿಸೆಂಬರ್ 31ರ ಒಳಗೆ ಮತ್ತು ಎನ್‌ಸಿಪಿ ಶಾಸಕರ ವಿರುದ್ಧ ಅನರ್ಹತೆಯನ್ನು 2024ರ ಜನವರಿ 24ರ ಒಳಗೆ ನೀಡುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಬಾಕಿ ಉಳಿದಿರುವ ಅನರ್ಹತೆ ಅರ್ಜಿಗಳನ್ನು ತ್ವರಿತವಾಗಿ ತೀರ್ಮಾನಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಮುಂಬರುವ ದೀಪಾವಳಿ ರಜೆಗಳು ಮತ್ತು ವಿಧಾನಸಭೆಯ ಚಳಿಗಾಲದ ಅಧಿವೇಶನದ ಕಾರಣ, ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿನ ಪ್ರಕ್ರಿಯೆಗಳನ್ನು 2024ರ ಫೆಬ್ರವರಿ 29 ನಿರ್ಧರಿಸಲಾಗುವುದು ಎಂದು ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಬಗ್ಗೆ ಪ್ರತಿಕ್ರಿಯಿಸಿ ಪ್ರಕ್ರಿಯಾತ್ಮಕ ಕಗ್ಗಂಟು ಇದೆ ಎಂಬುದು ಅರ್ಜಿ ನಿರ್ಧರಿಸುವ ಬಗೆಗಿನ ವಿಳಂಬಕ್ಕೆ ಕಾರಣವಾಗಬಾರದು ಎಂದು ಹೇಳಿದೆ ಹಾಗೂ ಸ್ಪೀಕರ್‌ ಕಚೇರಿಗೆ ಈ ಎಚ್ಚರಿಕೆ ನೀಡಿದೆ.
“10 ನೇ ಶೆಡ್ಯೂಲ್ ಅಡಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ಸ್ಪೀಕರ್‌ಗೆ ಪದೇ ಪದೇ ಸಮಯಾವಕಾಶ ನೀಡಿದ್ದೇವೆ, ಈಗ ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿ ಅಫಿಡವಿಟ್ ಸಲ್ಲಿಸಿದ್ದಾರೆ. ಅನರ್ಹತೆ ಅರ್ಜಿಗಳಲ್ಲಿ ಎರಡು ಗುಂಪುಗಳಿವೆ – ಶಿವಸೇನೆಯದ್ದು ಮತ್ತು ಎನ್‌ಸಿಪಿಯದ್ದು. ದೀಪಾವಳಿ ರಜೆಯಲ್ಲಿ ಸೆಕ್ರೆಟರಿಯೇಟ್ ಮುಚ್ಚಲಾಗುತ್ತದೆ ಮತ್ತು ಚಳಿಗಾಲದ ವಿಧಾನಸಭೆಯ ಅಧಿವೇಶನವು ನಾಗಪುರದಲ್ಲಿ ನಡೆಯಲಿದೆ ಎಂದು ಅಫಿಡವಿಟ್ ಹೇಳುತ್ತದೆ.. ಪ್ರಕ್ರಿಯಾತ್ಮಕ ಬಿಕ್ಕಟ್ಟು ಇದೆ ಎಂಬುದು ಅರ್ಜಿ ನಿರ್ಧರಿಸುವಲ್ಲಿನ ವಿಳಂಬಕ್ಕೆ ಕಾರಣವಾಗಬಾರದು ಎಂದು ಪೀಠ ಹೇಳಿತು.
ಪ್ರಕರಣ ಬಗ್ಗೆ ನಿರ್ಧರಿಸಲು ವಿಳಂಬ ಮಾಡಿದ್ದಕ್ಕಾಗಿ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ಅವರನ್ನು ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ತರಾಟೆಗೆ ತೆಗೆದುಕೊಂಡಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement