ಮಂಗಳೂರು : ಕಳೆದ ಬಿಗ್ ಬಾಸ್ ಸೀಸನ್‌ನಲ್ಲಿ ಹುಲಿ ಕುಣಿತ ಮಾಡಿ ಗಮನ ಸೆಳೆದಿದ್ದ ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ ಕಲ್ಲೇಗ (24) ಅವರನ್ನು ಬರ್ಬರ ಹತ್ಯೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ನೆಹರು ನಗರ ಜಂಕ್ಷನ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಅವರನ್ನು ನೆಹರೂ ನಗರದಲ್ಲಿ ಸೋಮವಾರ ತಡರಾತ್ರಿ ದುಷ್ಕರ್ಮಿಗಳ ತಂಡವೊಂದು ತಲವಾರಿನಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಅಕ್ಷಯ ಕಲ್ಲೇಗ ಅವರು ಕಳೆದ 6 ವರ್ಷಗಳಿಂ ಟೈಗರ್ಸ್ ಕಲ್ಲೇಗ ಎಂಬ ಹುಲಿ ವೇಷ ತಂಡದ ನೇತೃತ್ವ ವಹಿಸಿದ್ದರು. ಈ ತಂಡ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದುಕೊಂಡಿತ್ತು. ವಿವೇಕಾನಂದ ಕಾಲೇಜ್ ಬಳಿ ನಿವಾಸಿಯಾಗಿದ್ದ ಅಕ್ಷಯ್ ಕಲ್ಲೇಗ ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಎಂಬ ಹುಲಿವೇಷ ತಂಡವನ್ನು ಮುನ್ನಡೆಸುತ್ತಿದ್ದರು.
ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ ಅವರನ್ನು ಮಾಣಿ-ಮೈಸೂರು ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ.
ಆರೋಪಿಗಳಾದ ಬನ್ನೂರು ನಿವಾಸಿ ಮನೀಷ ಹಾಗೂ ಚೇತು ಘಟನೆಯ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ದ್ವಿಚಕ್ರ ವಾಹನಗಳ ಅಪಘಾತದ ವಿಚಾರದಲ್ಲಿ ಆರೋಪಿಗಳು ಹಾಗೂ ಅಕ್ಷಯ ನಡುವೆ ಗದ್ದಲವಾಗಿತ್ತು. ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗ ಹಾಗೂ ಅಕ್ಷಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಅದು ವಿಕೋಪಕ್ಕೆ ಹೋಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಅಕ್ಷಯನನ್ನು ದುಷ್ಕರ್ಮಿಗಳ ತಂಡ ನೆಹರೂ ನಗರಕ್ಕೆ ಬರಲು ಹೇಳಿ ಬಳಿಕ ಅಟ್ಟಾಡಿಸಿಕೊಂಡು ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ