ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ. ಚಂದ್ರೇಗೌಡ ನಿಧನ

ಬೆಂಗಳೂರು: ಮಾಜಿ ಸಚಿವ, ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ (DB Chandregowda) ಅವರು ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ.ಚಂದ್ರೇಗೌಡ ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ಇಂದು ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಾವಕಾಶ ಕಲ್ಪಿಸಲಾಗಿದ್ದು, ಬುಧವಾರ (ನವೆಂಬರ್ 08) ಮಧ್ಯಾಹ್ನ ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
1936ರಲ್ಲಿ ಜನಿಸಿದ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣವನ್ನು ಮತ್ತು ಬೆಳಗಾವಿಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿ ಪಡೆದಿದ್ದರು. ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್‌, ಮೂರು ಅವಧಿಗೆ ಶಾಸಕ, ಒಂದು ಅವಧಿಗೆ ವಿಧಾನಪರಿಷತ್‌ ಸದಸ್ಯರಾಗಿ ಮತ್ತು 3 ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಮಾಡಿ ಚಿಕ್ಕಮಗಳೂರು ಸಂದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ ಅವರು, ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಹಾಗೂ ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.

ಇಂದಿರಾಗಾಂಧಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಂದ್ರೇಗೌಡ
ಡಿ.ಬಿ. ಚಂದ್ರೇಗೌಡ ಅವರು 1967ರವರೆಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿದ್ದರು. 1971 ಮತ್ತು 1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಲೋಕಸಭೆಗೆ ಚಂದ್ರೇಗೌಡ ಸ್ಪರ್ಧಿಸಿದ್ದರು. ಆದಾಗ್ಯೂ, ತುರ್ತುಪರಿಸ್ಥಿತಿಯ ನಂತರ 1977 ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂಸತ್ ಸ್ಥಾನವನ್ನು ಕಳೆದುಕೊಂಡಾಗ, ಅವರು ಇಂದಿರಾ ಗಾಂಧಿ ಅವರು ಸ್ಪರ್ಧಿಸಲು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾಗಾಂಧಿ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದ್ದರು. ನಂತರ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಂದಿರಾಗಾಂಧಿ ಅವರು ಗೆಲುವು ಸಾಧಿಸಿದ್ದರು. ಬಳಿಕ ವಿಧಾನ ಪರಿಷತ್ತಿನ ಸದಸ್ಯರಾಗಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಂಪುಟದಲ್ಲಿ 1979-1980 ಅವಧಿಯಲ್ಲಿ ನೀರಾವರಿ ಸಚಿವರಾಗಿದ್ದರು. 1980-81ರ ಅವಧಿಯಲ್ಲಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

1983ರಲ್ಲಿ ಜನತಾ ಪಕ್ಷದಿಂದ ತೀರ್ಥಹಳ್ಳಿ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1983-85ರವರೆಗೆ ಚಂದ್ರೇಗೌಡರು ವಿಧಾನಸಭಾ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1986ರಲ್ಲಿ ಇವರು ಜನತಾ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. 1987ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ 2ನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದಿದ್ದರು.
1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೃಂಗೇರಿ ಕ್ಷೇತ್ರದಿಂದ ಆಯ್ಕೆಯಾಗಿ 1999ರಿಂದ 2004ರವರೆಗೆ ಎಸ್.ಎಂ. ಕೃಷ್ಣಾ ಅವರ ಸಂಪುಟದಲ್ಲಿ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2008ರಲ್ಲಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. 2009ರಲ್ಲಿ ಬಿಜೆಪಿಯಿಂದ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.

ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕಾನೂನು ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement