ಮಂಗಳೂರು: ಚಾಕುವಿನಿಂದ ಇರಿದುಕೊಂಡು ಕರ್ನಾಟಕ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಬೋಂದೆಲ್ ನಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಘಟನೆ ಮಂಗಳೂರಿನಲ್ಲಿ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ನಗರದ ಪಂಪ್‌ವೆಲ್‌ನಲ್ಲಿರುವ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಚೀಫ್ ಕಂಪ್ಲೇಂಟ್ ಆಫೀಸರ್(ಸಿಸಿಒ) ಆಗಿರುವ ವಾದಿರಾಜ ಕೆ.ಎ.(51) ಎಂಬವರು ಮೃತಪಟ್ಟ ವ್ಯಕ್ತಿ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಅವರು ಮನೆಯಲ್ಲಿ ಹೊಟ್ಟೆ ಮತ್ತು ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೆಳಗ್ಗೆ ಇವರ ಪತ್ನಿ ಮಗುವಿನೊಂದಿಗೆ ಶಾಲೆಗೆ ಪಾಲಕರ ಸಭೆಗೆ ತೆರಳಿದ್ದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅವರನ್ನು ಬ್ಯಾಂಕ್‌ಗೆ ಕರೆದೊಯ್ಯಲು ಎಂದಿನಂತೆ ಕಾರಿನ ಚಾಲಕ ಆಗಮಿಸಿ ಕೆಳಗೆ ಕಾಯುತ್ತಿದ್ದರು. ವಾದಿರಾಜ ಅವರು ಎಷ್ಟು ಹೊತ್ತಾದರೂ ಕೆಳಗೆ ಬಂದಿರಲಿಲ್ಲ. ಹೀಗಾಗಿ ಅವರು ಯಾಕೆ ಬಂದಿಲ್ಲ ಎಂದು ಚಾಲಕ ಮೇಲಿನ ಅಂತಸ್ತಿನಲ್ಲಿರುವ ಅವರ ಮನೆಗೆ ಹೋಗಿ ನೋಡಿದಾಗ ಅವರು ಕತ್ತು ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅಪಾರ್ಟ್ಮೆಂಟ್ ನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಒಂದು ವರ್ಷದಿಂದ ವಾದಿರಾಜ್ ಕುಟುಂಬ ಬೊಂದೇಲ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ