ಸಂಸದರು-ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚಿಸಬೇಕು: ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಚಾರಣೆಗೆ ವಿಶೇಷ ಪೀಠ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನಗಳನ್ನು ನೀಡಿದೆ.
ಶಾಸಕರು ಹಾಗೂ ಸಂಸದರ ವಿರುದ್ಧ ಐದು ಸಾವಿರಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂತಹ ಪ್ರಕರಣಗಳಲ್ಲಿ ‘ಅಪರೂಪದ ಹಾಗೂ ಬಲವಾದ ಕಾರಣಗಳು ಇಲ್ಲದಿದ್ದರೆ ವಿಶೇಷ ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡಬಾರದು’ ಎಂದು ಕೂಡ ಸುಪ್ರೀಂ ಕೋರ್ಟ್‌ ಸೂಚಿಸಿದೆ.
ಸಂಸದರು/ಶಾಸಕರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲ್ವಿಚಾರಣೆಗಾಗಿ ವಿಶೇಷ ಪೀಠ ಆಲಿಸಬೇಕಾದ ಸ್ವಯಂ ಪ್ರೇರಿತ ಪ್ರಕರಣಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ದಾಖಲಿಸಿಕೊಳ್ಳಬೇಕು. ವಿಶೇಷ ಪೀಠವೊಂದು ಈ ಸಂಬಂಧ ರಚನೆಯಾಗಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

ಅಂತಹ ವಿಶೇಷ ಪೀಠದ ನೇತೃತ್ವವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರೇ ವಹಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಸಂಸದರು ಹಾಗೂ ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಿಗೆ ಬೇರೆ ಪ್ರಕರಣಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು. ಸಂಬಂಧಪಟ್ಟ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಅಂತಹ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ಮೂಲಸೌಕರ್ಯ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಇದೇ ವೇಳೆ ಸೂಚನೆ ನೀಡಿದೆ.
ಹಾಲಿ ಶಾಸಕರು ಸೇರಿದಂತೆ ತಪ್ಪಿತಸ್ಥ ರಾಜಕಾರಣಿಗಳು ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಈಗಿನ ನಿಯಮದ ಬದಲಿಗೆ ಆಜೀವ ನಿಷೇಧ ಹೇರಬೇಕೆಂದು ಕೋರಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿಕುಮಾರ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿ

ಅಂತಹ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ನಿರ್ದೇಶನ ನೀಡಿತು. ಆಜೀವ ನಿಷೇಧ ಹೇರುವಂತೆ ಕೋರಿರುವ ಮನವಿಯನ್ನು ನಂತರ ನ್ಯಾಯಾಲಯ ಪರಿಗಣಿಸಲಿದೆ.
ಉಪಾಧ್ಯಾಯ ಅವರು ಜನಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಅಡಿಯಲ್ಲಿ ವಿಧಿಸಲಾಗಿರುವ ಆರು ವರ್ಷಗಳ ನಿಷೇಧ ತೆಗೆದು ಹಾಕಿ ಅದನ್ನು ಆಜೀವ ನಿಷೇಧ ಎಂದು ಬದಲಿಸುವಂತೆ ಕೋರಿದ್ದಾರೆ. ಈ ಅರ್ಜಿಗೆ ಭಾರತೀಯ ಚುನಾವಣಾ ಆಯೋಗ ಬೆಂಬಲ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement