ಬೆಂಗಳೂರು : ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಗೆ ಸಂಬಂಧಪಟ್ಟಂತೆ ಬಹಳ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ರಾಜ್ಯಾಧ್ಯಕ್ಷರ ಹುದ್ದೆಗೆ ವಿಜಯೇಂದ್ರ ನೇಮಕ ಆಗುತ್ತಾರೆ ಎಂದು ನಿರೀಕ್ಷೆಯಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಜಯೇಂದ್ರ ನೇಮಕದ ಬಗ್ಗೆ ನನಗೆ ಗೊತ್ತಿರಲಿಲ್ಲ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ನಾನು ಒಂದು ದಿನವೂ ದೆಹಲಿಗೆ ಹೋಗಿ ಕೇಳಿರಲಿಲ್ಲ, ಹೈಕಮಾಂಡ್ ಮುಂದೆ ಮನವಿ ಮಾಡಿರಲಿಲ್ಲ. ಹಲವು ವಿಚಾರಗಳನ್ನು ಅಳೆದು ತೂಗಿ ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಅವರಿಗೆ ಒಳ್ಳೆಯ ಉಡುಗೊರೆ ಕೊಡಬೇಕೆಂಬುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.
ದೊಡ್ಡ ಸ್ಥಾನ ಸಿಕ್ಕಿದಾಗ ಸವಾಲುಗಳು ಸಹಜ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸ್ಥಾನಗಳ ಗುರಿ ಮುಟ್ಟುವುದು ಕಷ್ಟವಿಲ್ಲ. ಆದರೆ ಹಾದಿ ಕಠಿಣ ಇದೆ. ನಾನೂ ಕೂಡ ರಾಜ್ಯ ಪ್ರವಾಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ ಎಂದರು.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರು ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಈ ಬಾರಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾನು ಕೂಡ ರಾಜ್ಯಾದ್ಯಂತ ಪ್ರವಾಸ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದರು.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ರಾಜ್ಯಾದ್ಯಂತ ಓಡಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲರೂ ಒಟ್ಟಾಗಿ ಹೋದಲ್ಲಿ ಯಶಸ್ಸು ಖಚಿತ ಎಂದರು.
ಅತ್ತು ಕರೆದು ಕೊನೆಗೂ ಅಧ್ಯಕ್ಷರ ನೇಮಕ ಮಾಡಿದ್ದಾರೆ : ಶೆಟ್ಟರ ಲೇವಡಿ
ಬೆಂಗಳೂರು : ಪಕ್ಷದ ರಾಜ್ಯಾಧ್ಯಕ್ಷರ ನೇಮಕದಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಲಿದೆ. ಆರು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಅತ್ತು ಕರೆದು ನೇಮಕ ಮಾಡಿಸಿಕೊಂಡಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಖಾಲಿ ಇತ್ತು. ಇಷ್ಟು ದಿನ ಯಾಕೆ ನೇಮಕ ಮಾಡಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಣೆ ಬರಹ ಗೊತ್ತಾಗಿದೆ. ಈಗ ಎಷ್ಟೇ ರಿಪೇರಿ ಮಾಡಿದರೂ ಅದು ಸರಿ ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿ ಬಲಾಢ್ಯವಾಗಿದೆ ಉತ್ತಮ ಆಡಳಿತ ನೀಡುತ್ತಿದೆ. ಪಂಚಖಾತ್ರಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 20ರಷ್ಟು ಸ್ಥಾನಗಳನ್ನೂ ಗೆಲ್ಲಬಹುದು ಎಂದರು. ಡಿಸೆಂಬರ್ 4ರಿಂದ ಬೆಳಗಾವಿ ಅವೇಶನ ಶುರುವಾಗಲಿದೆ. ಆ ವೇಳೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆಯಾಗಬೇಕು, ಇಲ್ಲವಾದರೆ ಮುಜುಗರ ಅನುಭವಿಸಬೇಕಾಗುತ್ತದೆ ಎಂದರು.


ನಿಮ್ಮ ಕಾಮೆಂಟ್ ಬರೆಯಿರಿ