ಕತ್ತಲೆಯೆಂಬ ನಕಾರಾತ್ಮಕ ಬಾಳಿಗೆ ಧನಾತ್ಮಕ ಚಿಂತನೆಯ ಬೆಳಕು ನೀಡುವ ಹಬ್ಬ ದೀಪಾವಳಿ…

(ದೀಪಾವಳಿ ಹಬ್ಬದ ನಿಮಿತ್ತ ಲೇಖನ)
ಪತ್ರಿಯೊಂದು ಸಮಾಜವು ಹಬ್ಬಗಳ ಮೂಲಕ ತನ್ನ ಸಂತೋಷವನ್ನು ವ್ಯಕ್ತಪಡಿಸುತ್ತದೆ. ಸಾಮಾನ್ಯವಾಗಿ ಹಬ್ಬಗಳೆಂದರೆ ಮೈ ಮನ ಸ್ವಚ್ಛಗೊಳಿಸುವುದು ಹಾಗೂ ನಿತ್ಯ ನೂತನ ಆಚರಣೆ. ಈ ಹಬ್ಬಗಳಿಂದ ನಮ್ಮ ದೈನಂದಿನ ಬದುಕಿಗೆ ಹೊಸ ಸ್ವರೂಪ ಸಿಗುತ್ತವೆ. ಹಾಗಾಗಿ ಹಬ್ಬ-ಹರಿದಿನಗಳಲ್ಲಿ ದೀಪಾವಳಿಗೆ ವಿಶೇಷ ಮನ್ನಣೆಯಿದೆ.
ದೀಪಾವಳಿಯನ್ನು ಸಮೃದ್ಧಿ ಮತ್ತು ಸಂತೋಷದ ಹಬ್ಬವನ್ನಾಗಿಯೂ ಆಚರಿಸಲಾಗುತ್ತದೆ. ನಮ್ಮ ಪುರಾತನ ಗ್ರಂಥಗಳಾದ ಸಂಸ್ಕೃತದಲ್ಲಿರುವ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ದೀಪಾವಳಿ ಹಬ್ಬದಾಚರಣೆಯ ಕುರಿತಾದ ಉಲ್ಲೇಖಗಳಿವೆ. ಈ ಹಬ್ಬವು ಕೇವಲ ಹಿಂದೂಗಳಿಗೆಲ್ಲದೇ ಜೈನರು, ಬೌದ್ಧರು ಮತ್ತು ಸಿಖ್ಖರು ಕೂಡ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಂಸ್ಕೃತ ನಾಟ್ಯ ಕೃತಿಯಾದ ನಾಗಾನಂದದಲ್ಲಿ ದೀಪಾವಳಿಯನ್ನು ದೀಪ ಪ್ರತಿಪಾದೋತ್ಸವ ಎಂದು ಹೆಸರಿಸಲಾಗಿದೆ. ರಾಜಶೇಖರನ ಕಾವ್ಯ ಮೀಮಾಂಸೆ ಗ್ರಂಥದಲ್ಲಿ ದೀಪಾವಳಿಯನ್ನು ದೀಪ ಮಾಲಿಕಾ ಎಂದು ಕರೆಯಲಾಗಿದೆ.
ದೀಪಾವಳಿ ಹಬ್ಬ ಎಂದ ತಕ್ಷಣ ನಮ್ಮ ಕಣ್ಮುಂದೆ ಬರುವದು ದೀಪ, ಹಣತೆ ಮತ್ತು ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ದೀಪ ಬೆಳಗಿಸುತ್ತೇವೆ. ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕ ಪ್ರತಿ ಕಾರ್ಯವನ್ನು ಆರಂಭಿಸುತ್ತೇವೆ. ದೀಪಾವಳಿಯಲ್ಲಿ ಲಕ್ಷ್ಮೀದೇವತೆಯನ್ನು ನಮ್ಮ ಜೀವನದ ವೃದ್ಧಿಯ, ಆಶಾಕಿರಣದ ಬೆಳಕಿನ ಸಂಕೇತವಾಗಿ ಕಾಣುತ್ತೇವೆ.
ದೀಪಗಳ ಹಬ್ಬವಾದ ದೀಪಾವಳಿಯು ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಈ ಹಬ್ಬವನ್ನು ಭಾರತೀಯರ ಜೊತೆಗೆ ಕಳೆದ ಕೆಲ ದಶಕಗಳಿಂದ ವಿದೇಶಿಗಳಲ್ಲಿಯೂ ಕೂಡ ಅತ್ಯಂತ ಸಡಗರ, ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಹಬ್ಬವು ಕತ್ತಲೆ ಎಂಬ ಅಜ್ಞಾನವನ್ನು ಕಳೆದು ಬೆಳಕೆಂಬ ಜ್ಞಾನವನ್ನು ಹೊತ್ತಿಸುವ ಹಬ್ಬವಾಗಿದೆ. ದೀಪಾವಳಿಯನ್ನು ಭಾರತದ ಕೆಲ ರಾಜ್ಯಗಳಲ್ಲಿ ೫ ದಿನಗಳವರೆಗೆ ಮತ್ತು ಕೆಲ ರಾಜ್ಯಗಳಲ್ಲಿ ೩ ದಿನಗಳವರೆಗೂ ಆಚರಿಸುವ ಸಂಪ್ರದಾಯವಿದೆ. ದೀಪಾವಳಿಯನ್ನು ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಅಂದರೆ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಗಾರಿನ ಪೈರು ಕೊಯ್ಲಿಗೆ ಬಂದಿರುತ್ತದೆ.

ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬವನ್ನು ೧) ಧನಥೇರಸ್ ೨) ನರಕಚತುರ್ದಶಿ ೩) ಅಮವಾಸ್ಯಾ ೪) ಅನ್ನಕೂಟ ೫) ಬಲಿಪಾಡ್ಯಮಿ ಎಂದು ೫ ದಿನಗಳ ಕಾಲ ಆಚರಿಸಿದರೆ ದಕ್ಷಿಣ ಭಾರತದಲ್ಲಿ ೧) ನರಕಚತುರ್ದಶಿ ೨) ಅಮವಾಸ್ಯೆ ಲಕ್ಷ್ಮೀ ಪೂಜೆ ೩) ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ. ದೀಪಾವಳಿಯ ಈ ಐದು ದಿನಗಳಲ್ಲಿ ಪ್ರತಿಯೊಂದು ದಿನವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ.
ಮೊದಲನೇ ದಿನವಾದ ಧಣಥೇರಸ್ ಇದೊಂದು ಸಂಪತ್ತು ಮತ್ತು ಸಮೃದ್ಧಿಯನ್ನು ಹೊಂದಲು ಆಚರಿಸಲ್ಪಡುವ ಹಬ್ಬವಾಗಿದೆ. ದಂತ ಕಥೆಯೊಂದರ ಪ್ರಕಾರ ಈ ಪಾರ್ವತಿ ದೇವಿಯು ತನ್ನ ಪತಿಯಾದ ಶಿವನೊಂದಿಗೆ ದಾಳಗಳನ್ನು ಆಡಿದಳು. ಅಂತೆಯೇ ಈ ದಿನದಂದು ಪ್ರಪಂಚದಾದ್ಯಂತ ಜನತೆ ದಾಳಗಳನ್ನು ಎಸೆಯುವ ಆಟವನ್ನು ಪಾರ್ವತಿದೇವಿಯ ಆಶೀರ್ವಾದದೊಂದಿಗೆ ಆಡುತ್ತಾರೆ. ಅವರು ಮುಂಬರುವ ವರ್ಷವಿಡೀ ಧನ-ಕನಕದ ಸಮೃದ್ಧಿಯೊಂದಿಗೆ ಆಚರಿಸುತ್ತಾರೆ.
ಎರಡನೇ ದಿನವಾದ ನರಕ ಚತುರ್ದಶಿಯೂ ಕೂಡ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ದಿನದಂದು ಶ್ರೀಕೃಷ್ಣ ಪರಮಾತ್ಮ ಹಾಗೂ ಆತನ ಪತ್ನಿಯಾದ ಸತ್ಯಭಾಮೆಯ ಕೈಯಿಂದ ನರಕಾಸುರನೆಂಬ ರಾಕ್ಷಸನ ಸಂಹಾರವಾಗಿ ಅಧರ್ಮದ ನಾಶವಾಗಿ, ಧರ್ಮದ ಉದ್ಧಾರವಾಯಿತು. ಈ ದಿನದಂದು ಬ್ರಾಹ್ಮೀಕಾಲದಲ್ಲಿ ಒಲೆಯ ಮೇಲೆ ದೊಡ್ಡ ಪಾತ್ರೆಯನ್ನಿಟ್ಟು ಆ ಪಾತ್ರೆಯ ಕಂಠಕ್ಕೆ ಮಹಾಲಿಂಗನ ಬಳ್ಳಿಯನ್ನು ಸುತ್ತಿ ಪಾತ್ರೆಯಲ್ಲಿ ನೀರನ್ನಿಟ್ಟು ಕಾಯಿಸಲಾಗುತ್ತದೆ.
ಮನೆಯಲ್ಲಿನ ಸದಸ್ಯರು ಬೆಳಿಗ್ಗೆ ಬೇಗನೆ ಎದ್ದು ಈ ಬಿಸಿ ನೀರಿನ ಮೂಲಕ ಅಭ್ಯಂಜನ ಸ್ಥಾನ ಮಾಡಿ ಹೊಸ ಬಟ್ಟೆಯನ್ನು ಧರಿಸಿಕೊಂಡು ಸಹೋದರಿ ಅಥವಾ ತಾಯಂದಿರ ಮೂಲಕ ಆರತಿಯನ್ನು ಮಾಡಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರ ತಲೆಯ ಮೇಲೆ ಕಬ್ಬಿನ ತುಂಡುಗಳನಿಟ್ಟಿರುತ್ತಾರೆ. ತದನಂತರದಲ್ಲಿ ಮಕ್ಕಿಕಾಯಿ ಎಂಬ ಗುಂಡಾಕಾರದ (ಕಹಿಸೌತೆ) ಕಾಯಿಗಳನ್ನು ಕಾಲಿನಿಂದ ಹೊಸಕಿ ಹಾಕಿ ಸಂಹಾರ ಮಾಡಿದ ತರುವಾಯ ಸಾವಿಗೆ ಪಾಯಸದ ಸೇವನೆ ಮಾಡಿ, ಪಟಾಕ್ಷಿಗಳನ್ನು ಹಚ್ಚುತ್ತಾರೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ಮೂರನೇ ದಿನ ಮಹಾಲಕ್ಷ್ಮೀ ಮತ್ತು ಕುಬೇರ ಪೂಜೆ ಮತ್ತು ಅಮವಾಸ್ಯೆ ದಿನದಂದು ಮನೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ, ವಿವಿಧ ಸಿಹಿ ಭಕ್ಷಗಳನ್ನು ತಯಾರಿಸಿ, ಪೂಜೆ ಮಾಡಿ ನೈವೇದ್ಯ ಹಿಡಿಯುತ್ತಾರೆ. ಏಕೆಂದರೆ ಅಮವಾಸ್ಯೆಯ ಈ ಅವಧಿಯಲ್ಲಿ ಲಕ್ಷ್ಮೀ ದೇವಿಯು ಅತ್ಯಂತ ಕರುಣಾಮಯಿ ಚಂದ್ರನಲ್ಲಿದ್ದು, ಆಗಾಗ್ಗೆ ತನ್ನ ಭಕ್ತರಿಗೆ ಆಶೀರ್ವದಿಸುತ್ತಾಳೆ. ಹಾಗೂ ಇದೆ ದಿನ ರಾತ್ರಿ ಭಗವಾನ್ ವಿಷ್ಣು ಬಲಿ ಎಂಬ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿ ಆತನನ್ನು ಪಾಪದಿಂದ ಮುಕ್ತ ಮಾಡಿದ ಎಂಬ ನಂಬಿಕೆ ಇದೆ. ಇದೇ ದಿನ ಮಾತ್ರ ಬಲಿಯು ಮತ್ತೆ ಪ್ರಪಂಚವನ್ನು ಸುತ್ತಾಡಲು ಅನುಮತಿಸಲಾಗಿದೆ ಎಂದು ಹೇಳಲಾಗುತ್ತದೆ.
ಮನೆ ಮನೆ ಮತ್ತು ದಾರಿಯೂದ್ದಕ್ಕೂ ಇರುವ ಕತ್ತಲೆಯನ್ನು ತೊಡೆದು ಹಾಕಲು ದೀಪವನ್ನು ಬೆಳಗಿಸಲು ಈ ಪೂಜೆಯನ್ನು ವಿಜೃಂಭಣೆಯಿಂದ ಹೊಸ ಹೊಸ ಬಟ್ಟೆಗಳನ್ನು ಧರಿಸಿ ಆಚರಿಸುತ್ತಾರೆ. ಹಾಗೂ ಪರಸ್ಪರ ಶುಭಾಶಯಗಳನ್ನು ಹಂಚಿಕೊಳ್ಳುತ್ತಾರೆ. ವಿಶೇಷವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ವಿಶೇಷವಾಗಿರುತ್ತದೆ.
ಇದರ ಮರುದಿನವೇ ಕಾರ್ತಿಕ ಶುದ್ಧ ಪಾಡ್ಯಮಿ ಬಲಿ ಚಕತ್ರವರ್ತಿಯು ಪಾತಾಳಲೋಕದಲ್ಲಿ ಹೊರಬಂದು ಭಗವಾನ್ ವಿಷ್ಣು ನೀಡಿದ ವರಗಳ ಪ್ರಕಾರ ಭೂಮಿಯನ್ನು ಆಳುತ್ತಾನೆ. ಈ ದಿನದಂದು ಸಗಣಿಯಿಂದ ಪಾಂಡವರನ್ನು ತಯಾರಿಸಿ ಅವರನ್ನು ವಿವಿಧ ಹೂ ಹಾಗೂ ಮೊಸರಿನಿಂದ ಅಲಂಕರಿಗೆ ಪೂಜೆ ಗೈಯಲಾಗುತ್ತದೆ.

ಈ ರೀತಿಯಾಗಿ ಈ ಕಾರ್ತಿಕ ಮಾಸ ಪೂರ್ತಿ ಪ್ರತಿದಿನ ಮನೆಯ ಮುಂದೆ ಸಂಜೆ ದೀಪಗಳನ್ನು ಹಚ್ಚಿ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತದೆ. ದೀಪವಳಿಯ ಕುರಿತಾಗಿ ಹಲವಾರು ಪೌರಾಣಿಕ ಕಥೆಗಳು ಇದ್ದು, ಅವುಗಳಿಂದ ದೀಪಾವಳಿಯ ಆಚರಣೆ ಪೌರಾಣಿಕ ಕಾಲದಲ್ಲಿಯೂ ಮನೆ ಮಾಡಿತ್ತು ಎಂದು ಹೇಳಬಹುದು.
ಸತ್ಯ ಯುಗದಲ್ಲಿ ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಿದಾಗ ಐರಾವತ, ಚಂದ್ರ, ಪಾರಿಜಾತ, ವಾರುಣಿ, ರಂಭ ಮುಂತಾದ ೧೪ ರತ್ನಗಳೊಂದಿಗೆ ಹಾಲಾ-ಹಲವೆಂಬ ಭಯಂಕರ ವಿಷ ಹೊರ ಹೊಮ್ಮಿತ್ತು. ಇದರೊಂದಿಗೆ ಆರೋಗ್ಯದ ಅಧಿದೈವವಾದ ಧನ್ವಂತರಿ ಪ್ರಕಟಗೊಂಡ ತದನಂತರ ಈ ಮಹಾಮಂಥನದಿಂದ ಮಹಾಲಕ್ಷ್ಮೀ ದೇವಿಯು ಜನಿಸಿದಳು. ಹಾಗೂ ಇವಳ ಸ್ವಾಗತಕ್ಕಾಗಿ ಎಲ್ಲ ದೇವರುಗಳು ದೀಪಾವಳಿಯನ್ನು ಆಚರಿಸಿದರು ಎಂಬುದು ಸತ್ಯಯುಗದ ಕಥೆಯಾಗಿದೆ.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

ತ್ರೇತಾಯುಗದಲ್ಲಿಯೂ ಕೂಡ ದೀಪಾವಳಿಯನ್ನು ಆಚರಿಸಲಾಗುತ್ತಿತ್ತೆಂಬ ಪೌರಾಣಿಕ ಕಥೆಗಳಿವೆ. ತ್ರೇತಾಯುಗದ ಶ್ರೀರಾಮಚಂದ್ರ ೧೪ ವರ್ಷ ವನವಾಸವನ್ನು ಕಳೆದು, ಲಂಕೆಯ ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಆತನ ವಿಜಯದ ಗುರುತಾಗಿ ಮತ್ತು ಆತನ ಸ್ವಾಗತಕ್ಕಾಗಿ ಇಡೀ ನಗವನ್ನು ದೀಪಗಳನ್ನು ಅಲಂಕರಿಸಿ ಅಧರ್ಮ ಎಂಬ ಕತ್ತಲೆಯನ್ನು ತೊಲಗಿಸಿ ಧರ್ಮ ಎಂಬ ಬೆಳಕನ್ನು ಚೆಲ್ಲುವ ವಿಜಯದ ಸಂಕೇತವಾಗಿ ದೀಪಾವಳಿಯನ್ನು ಆಚರಿಸಲಾಯಿತು.
ದ್ವಾಪರಯುಗ ಅಂದರೆ ಮಹಾಭಾರತದ ಅವಧಿ ಶ್ರೀ ಕೃಷ್ಣನ ಲೀಲಾಯುಗವಾಗಿತ್ತು. ಇಲ್ಲಿಯೂ ಕೂಡ ದೀಪಾವಳಿಯನ್ನು ಎರಡು ಪ್ರಮುಖ ಘಟನೆಗಳ ಸ್ಮರಣೆಗಾಗಿ ಆಚರಿಸಲ್ಪಡಲಾಗುತ್ತಿತ್ತು. ಇದು ಎರಡು ಮಗ್ಗಲುಗಳನ್ನು ಹೊಂದಿದ್ದು, ಮೊದಲನೆಯದು ಶ್ರೀಕೃಷ್ಣನ ಬಾಲ್ಯಕ್ಕೆ ಸಂಬಂಧಿಸಿದೆ. ಅಂದರೆ ಇಂದ್ರನ ಪೂಜೆಯನ್ನು ವಿರೋಧಿಸಿ ಗೋವರ್ಧನ ಪೂಜೆಯ ಕ್ರಾಂತಿಕಾರಿ ನಿರ್ಧಾರವನ್ನು ಅನುಷ್ಠಾನಗೊಳಿಸಿದ ಶ್ರೀಕೃಷ್ಣ ಸ್ಥಳೀಯ ಪ್ರಾಕೃತಿಕ ಸಂಪತ್ತಿನ ಕಡೆಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದನು ಮತ್ತು ಅನ್ನಕೂಟದ ಸಂಪ್ರದಾಯವು ಗೋರ್ವಧನ ಪೂಜೆಯ ರೂಪದಲ್ಲಿ ರೂಪಿತಗೊಂಡಿತು. ಸಾಮಾನ್ಯವಾಗಿ ಕೂಟ್ ಎಂದರೆ ಬೆಟ್ಟ, ಅನ್ನವೆಂದರೆ ಆಹಾರ, ಹೀಗಾಗಿ ಅನ್ನಕೂಟವೆಂದರೆ ಬೆಟ್ಟದಂತಹ ಆಹಾರ ಪದಾರ್ಥಗಳ ರಾಶಿ. ಹೀಗಾಗಿ ಬೆಳೆಗಳ ರಾಶಿ ಪೂಜೆ ಹಾಗೂ ರಂಟೆ-ಕುಂಟೆಗಳ ಪೂಜೆ ಮಾಡಲಾಗುತ್ತಿತ್ತು.

ಇನ್ನು ಇದೇ ಯುಗದ ಎರಡನೇ ಕಥೆಯು ಶ್ರೀ ಕೃಷ್ಣನ ಮದುವೆಗೆ ಸಂಬಂಧಿಸಿದೆ. ನರಕಾಸುರನೆಂಬ ರಾಕ್ಷಸನನ್ನು ಕೊಂದು ತನ್ನ ಪ್ರೀತಿಯ ಸತ್ಯಭಾಮೆಗಾಗಿ ಪಾರಿಜಾತ ವೃಕ್ಷವನ್ನು ತಂದ ಘಟನೆಯ ನೆನಪಿಗಾಗಿ ಈ ಹಬ್ಬವನ್ನು ನರಕ ಚತುರ್ದಶಿಯೆಂದು ಆಚರಿಸಲಾಗುತ್ತಿತ್ತು.
ಇನ್ನು ಈ ದೀಪಾವಳಿಯನ್ನು ಅಹಿಂಸೆ ಮತ್ತು ಸಂಯಮದ ಅದ್ಭುತ ಮಾದರಿಯಾಗಿ ಆಚರಿಸಲಾಗುತ್ತಿದೆ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಧರ್ಮದ ದೃಷ್ಟಿಯಿಂದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆಯಿದೆ.
ಅಸತೋಮಾ ಸದ್ಗಮಯ, ತಮಸೋಮ ಜೋತಿರ್ಗಮಯವಾಗಿರುವ ಈ ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕಷ್ಣಗಳನ್ನು ಹೊಡೆದೊಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ. ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ವಿಚಾರಗಳಿಗೆ ಅಂಟಿಕೊಂಡಿರುವ ಕತ್ತಲೆಯನ್ನು ಹೋಗಲಾಡಿಸುವ ಹಬ್ಬವಾಗಿದೆ.
ಮನೆಯ ಹಿರಿಯರನ್ನು ದೀಪಾವಳಿ ಹಬ್ಬದಲ್ಲಿ ಸ್ಮರಿಸಲಾಗುತ್ತದೆ. ಅಣ್ಣ-ತಮ್ಮನ್ನು (ಸಹೋದರರು), ಅಕ್ಕ-ತಂಗಿಯರು(ಸಹೋದರಿಯರು) ಅದಕ್ಕೆ ಭಾವನ ಬಿದಗಿ, ಅಕ್ಕನ ತದಗಿ ಎಂದು ಹೇಳಿ, ಸಿಹಿಯನ್ನು ಮತ್ತು ಉಡುಗೋರೆಗಳನ್ನು ಕೊಡುವ ಸಂಪ್ರದಾಯದ ಜೊತೆಗೆ ದೀಪಾವಳಿ ಹಬ್ಬವು ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ. ಹಿರಿಯರಿಗೆ ಗೌರವ ಸಲ್ಲಿಸುವ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
ಮನೆಯಲ್ಲಿ ಆಕಾಶ ಬುಟ್ಟಿ, ಮನೆ ತುಂಬ ಪಣತಿ ದೀಪಗಳು, ತಳಿರು-ತೋರಣಗಳಿಂದ ಮನೆ-ಮನೆಗಳಲ್ಲಿ, ಅಂಗಡಿಗಳಲ್ಲಿ, ಫ್ಯಾಕ್ಟರಿಗಳಲ್ಲಿ ಅಲಂಕಾರ ಮಾಡಲಾಗುತ್ತದೆಯಲ್ಲದೇ, ವಿದ್ಯುತ್ ಅಲಂಕಾರ ದೀಪಗಳನ್ನು ಹಚ್ಚಿ, ಸಂತಸವನ್ನು ಹಂಚಿಕೊಳ್ಳುವ ಸಂಪ್ರದಾಯ ಬೆಳೆದು ಬಂದಿದೆ.
ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement