ಉಡುಪಿ : ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ನೇಜಾರಿನಲ್ಲಿ ಸ್ಥಳ ಮಹಜರಿಗೆ ಗುರುವಾರ ಮಧ್ಯಾಹ್ನ ಕರೆ ತಂದಾಗ ಆರೋಪ ವಿರುದ್ಧ ಆಕ್ರೋಶ ಹೊರಹಾಕಿದ ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಡೆದ ವರದಿಯಾಗಿದೆ.
ಹತ್ಯೆ ನಡೆದ ಮನೆಗೆ ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಚೌಗಲೆ (39)ಯನ್ನು ಪೊಲೀಸರು ಸ್ಥಳ ಮಹಜರಿಗೆ ಬಿಗಿ ಭದ್ರತೆಯ ನಡುವೆ ಕರೆತರಲಾಗಿತ್ತು. ಈ ವೇಳೆ ಜಮಾಯಿಸಿದ್ದ ಸ್ಥಳೀಯರು ಆಕ್ರೋಶ ಹೊರ ಹಾಕಿ, ಆರೋಪಿಯನ್ನು ನಮಗೊಪ್ಪಿಸಿ ಎಂದು ಘೋಷಣೆ ಕೂಗಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ.
ನಂತರ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಬರಬೇಕು ಎಂದು ಆಗ್ರಹಿಸಿ ಆ ಭಾಗದಲ್ಲಿ ರಸ್ತೆ ತಡೆ ಮಾಡಲಾಯಿತು. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನೂ ಕೂಡಲೇ ಕರೆಸಿಕೊಳ್ಳಲಾಯಿತು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜನಾಕ್ರೋಶದ ನಡುವೆಯೇ ಸ್ಥಳ ಮಹಜರು ಮುಗಿಸಿ ಆರೋಪಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಬುಧವಾರ ಪ್ರವೀಣ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯವು ಆತನನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ