ಇಂಫಾಲ್ ವಿಮಾನ ನಿಲ್ದಾಣದ ಬಳಿ ‘ಯುಎಫ್‌ಒ’ ಕಂಡುಬಂದ ನಂತರ ನಂತರ ಎರಡು ರಫೇಲ್‌ ಯುದ್ಧ ವಿಮಾನ ಕಳುಹಿಸಿದ ವಾಯುಪಡೆ

ಇಂಫಾಲ್ (ಮಣಿಪುರ): ಭಾರತೀಯ ವಾಯು ಪಡೆಯ ಎರಡು ರಫೇಲ್ ಯುದ್ಧ ವಿಮಾನಗಳು ಮಣಿಪುರ ರಾಜಧಾನಿ ಇಂಫಾಲ್‌ಗೆ ರವಾನೆ ಆಗಿವೆ. ಇಂಫಾಲ್ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗದ ಹಾರುವ ವಸ್ತು (UFO) ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್ ಯುದ್ಧ ವಿಮಾನಗಳನ್ನ ಇಂಫಾಲ್‌ಗೆ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾನುವಾರ ಈ ಕುರಿತಾಗಿ ಭಾರತೀಯ ವಾಯು ಪಡೆಗೆ ಮಾಹಿತಿ ಲಭ್ಯವಾದ ಕೂಡಲೇ ರಫೇಲ್ ಯುದ್ಧ ವಿಮಾನಗಳನ್ನು ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ರಫೇಲ್ ಯುದ್ಧ ವಿಮಾನಗಳು ಭಾನುವಾರ ದಿನವಿಡೀ ಹುಡುಕಾಟ ನಡೆಸಿ ಯುಎಫ್‌ಒಗಳನ್ನು ಪತ್ತೆ ಮಾಡಲು ಶ್ರಮಿಸಿತು ಎಂಬ ಮಾಹಿತಿ ಸಿಕ್ಕಿದೆ.

ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಗುರುತಿಸಲಾಗದ ಹಾರುವ ವಸ್ತುಗಳು (UFO) ಕಂಡು ಬಂದಿತ್ತು. ಹೀಗಾಗಿ, ಇಂಫಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಹಾಗೂ ನಿಲ್ದಾಣದಿಂದ ನಿರ್ಗಮಿಸಬೇಕಿದ್ದ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರಯಾಣಿಕ ಹಾಗೂ ಸರಕು ಸಾಗಣೆ ವಿಮಾನಗಳ ಹಾರಾಟದಲ್ಲೂ ವ್ಯತ್ಯಯ ಆಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಭಾರತೀಯ ವಾಯು ಪಡೆಯು ಮೊದಲಿಗೆ ಒಂದು ರಫೇಲ್‌ ಯುದ್ಧ ವಿಮಾನ ರವಾನಿಸಿತ್ತು. ಈ ವಿಮಾನ ಹಿಂದಿರುಗುವ ವೇಳೆಗೆ ಮತ್ತೊಂದು ರಫೇಲ್ ಯುದ್ಧ ವಿಮಾನವನ್ನೂ ವಾಯು ಪಡೆ ರವಾನೆ ಮಾಡಿತು. ಎರಡೂ ಯುದ್ಧ ವಿಮಾನಗಳೂ ಯುಎಫ್‌ಒಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದವು. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ತಿಳಿದು ಬಂದಿದೆ.
ವಿಮಾನ ನಿಲ್ಧಾಣದಲ್ಲಿ ವಿಮಾನಗಳ ಹಾರಾಟ ಪುನಾರಂಭಗೊಳಿಸುವ ವೇಳೆಗೆ ಭಾರತೀಯ ವಾಯು ಪಡೆ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನೂ ಜಾಗೃತಗೊಳಿಸಿದೆ. ಈ ಸಂಬಂಧ ಶಿಲ್ಲಾಂಗ್ ಸೇನಾ ನೆಲೆ ಮಾಹಿತಿ ನೀಡಿದ್ದು, ಈ ಕುರಿತಾಗಿ ಯಾವುದೇ ಹೆಚ್ಚುವರಿ ವಿವರ ನೀಡಿಲ್ಲ. ಆದರೆ ಸಣ್ಣ ವಸ್ತುವೊಂದು ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸಿದೆ ಎಂದಷ್ಟೇ ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement