ಮೂಡಿಗೆರೆ : ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆ ಸಿಬ್ಬಂದಿ ಸಾವು

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಬುಧವಾರ ನಡೆದ ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆಯ ಸಿಬ್ಬಂದಿಯೇ ಮೃತಪಟ್ಟ ಘಟನೆ ನಡೆದ ವರದಿಯಾಗಿದೆ.
ಮೃತರನ್ನು ಕಾರ್ತಿಕ್ ಗೌಡ (26) ಎಂದು ಗುರುತಿಸಲಾಗಿದ್ದು, ಇದಲ್ಲದೆ ಆನೆ ನಿಗ್ರಹ ಪಡೆಯ ಇಬ್ಬರು ಸಿಬ್ಬಂದಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಗಳ ಹಾವಳಿ ನಿಯಂತ್ರಿಸಲು ರಚಿಸಲಾಗಿರುವ ಆನೆ ನಿಗ್ರಹ ಪಡೆಗೆ ಅರಣ್ಯ ಇಲಾಖೆ ಕಾರ್ತಿಕ್‌ ಅವರನ್ನು ನೇಮಿಸಿಕೊಂಡಿತ್ತು. ಬೈರಾಪುರ ಗ್ರಾಮದಲ್ಲಿ ಬುಧವಾರ ಬೆಳಗಿನಿಂದ ಆನೆಗಳು ಬಂದಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆನೆ ನಿಗ್ರಹ ಪಡೆಯು ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡಿತ್ತು.

ಮಧ್ಯಾಹ್ನದ ವೇಳೆಗೆ ಗುಂಪಿನಲ್ಲಿದ್ದ ಆನೆಯೊಂದು ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಕಾರ್ತಿಕ್ ಗೌಡ ಮೃತಪಟ್ಟಿದ್ದಾರೆ. ಕಾರ್ತಿಕ್ ಗೌಡ ಕಳೆದ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತ ಕಾರ್ತಿಕ್ ಅವರು ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದು, ಸರಕಾರ ರಚಿಸಿದ್ದ ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಆನೆ ಓಡಿಸುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳಿಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. 20 ದಿನದ ಹಿಂದೆ ಆಲ್ದೂರಿನಲ್ಲಿ ವೀಣಾ ಎಂಬ ಮಹಿಳೆ, ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬವರು ಕಾಡಾನೆ ದಾಳಿಗೆ ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement