ಪ್ರಧಾನಿ ಮೋದಿಗೆ ಭದ್ರತಾ ಲೋಪ : 7 ಪಂಜಾಬ್ ಪೊಲೀಸ್‌ ಅಧಿಕಾರಿಗಳು ಅಮಾನತು

ನವದೆಹಲಿ: ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಫಿರೋಜ್‌ಪುರ ಜಿಲ್ಲೆಯ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇಬ್ಬರು ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳು ಸೇರಿದ್ದಾರೆ.
ಕಳೆದ ವರ್ಷ ಜನವರಿ 5ರಂದು ಪ್ರಧಾನಿ ಮೋದಿ ಅವರು ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ ಪೂರ್ವಭಾವಿ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ಭದ್ರತಾ ಲೋಪ ಸಂಭವಿಸಿತ್ತು. ಪ್ರತಿಭಟನಾ ನಿರತ ರೈತರ ದಿಗ್ಬಂಧನದಿಂದಾಗಿ ಪ್ರಧಾನಿ ಬೆಂಗಾವಲು ಪಡೆ ಸುಮಾರು 20 ನಿಮಿಷಗಳ ಕಾಲ ಮೇಲ್ಸೇತುವೆಯಲ್ಲಿ ಸಿಲುಕಿತ್ತು. ಈ ಘಟನೆಯಿಂದಾಗಿ ಪಂಜಾಬ್‌ನಿಂದ ಯೋಜಿತ ರ್ಯಾಲಿಯಲ್ಲಿ ಪಾಲ್ಗೊಳ್ಳಲಾಗದೆ ಪ್ರಧಾನಿ ಮೋದುಯವರು ವಾಪಸ್‌ ಬರಬೇಕಾಯಿತು. ಬಿಜೆಪಿ ನಾಯಕರು ಆಗಿನ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಕೊನೆಯ ಕ್ಷಣದಲ್ಲಿ ಪ್ರಧಾನಿಯವರ ಪ್ರಯಾಣದ ಯೋಜನೆಗಳನ್ನು ಬದಲು ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಪಂಜಾಬ್‌ನ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸಲ್ಲಿಸಿದ ವಿವರವಾದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿಯು ಫಿರೋಜ್‌ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಫ್ಲೈಓವರ್‌ನಲ್ಲಿ ಪ್ರಧಾನಿ ಬೆಂಗಾವಲು ಪಡೆ ಸಿಲುಕಿಕೊಂಡ ಘಟನೆಯ ಬಗ್ಗೆ ಸಮಗ್ರ ತನಿಖೆಯ ನಂತರ ಅಮಾನತುಗಳಿಗೆ ಶಿಫಾರಸು ಮಾಡಿದೆ.
ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಭದ್ರತಾ ಉಲ್ಲಂಘನೆಗೆ ಹಲವಾರು ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

ಪ್ರಸ್ತುತ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಇದೀಗ ಏಳು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಆಗ ಫಿರೋಜ್‌ಪುರ ಪೊಲೀಸ್ ಮುಖ್ಯಸ್ಥ ಮತ್ತು ಈಗ ಬಟಿಂಡಾ ಎಸ್‌ಪಿ ಗುರ್ಬಿಂದರ್ ಸಿಂಗ್ ಅವರನ್ನು ಈ ಹಿಂದೆ ಅಮಾನತುಗೊಳಿಸಲಾಗಿತ್ತು. ನವೆಂಬರ್ 22 ರ ಆದೇಶವು ಕ್ರಮ ಎದುರಿಸಲು ಇನ್ನೂ ಆರು ಪೊಲೀಸರ ಹೆಸರನ್ನು ಪಟ್ಟಿ ಮಾಡಿದೆ. ರಾಜ್ಯ ಗೃಹ ಇಲಾಖೆ ಆದೇಶದ ಪ್ರಕಾರ ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳಾದ ಪರ್ಸನ್ ಸಿಂಗ್ ಮತ್ತು ಜಗದೀಶಕುಮಾರ, ಇನ್‌ಸ್ಪೆಕ್ಟರ್‌ಗಳಾದ ಜತೀಂದರ್ ಸಿಂಗ್ ಮತ್ತು ಬಲ್ವಿಂದರ್ ಸಿಂಗ್, ಸಬ್ ಇನ್‌ಸ್ಪೆಕ್ಟರ್ ಜಸ್ವಂತ್ ಸಿಂಗ್ ಮತ್ತು ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಮೇಶಕುಮಾರ ಅವರನ್ನು ಅಮಾನತುಗೊಳಿಸಲಾಗಿದೆ.
ಎಲ್ಲಾ ಏಳು ಪೊಲೀಸರು ಪಂಜಾಬ್ ನಾಗರಿಕ ಸೇವೆಗಳ (ಶಿಕ್ಷೆ ಮತ್ತು ಮೇಲ್ಮನವಿ) ನಿಯಮಗಳು, 1970 ರ ನಿಯಮ 8 ರ ಅಡಿಯಲ್ಲಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆದೇಶವು ಹೇಳುತ್ತದೆ. ಈ ನಿಯಮಗಳ ಅಡಿಯಲ್ಲಿ ಕ್ರಮವು ದಂಡಗಳು, ಬಡ್ತಿಯನ್ನು ತಡೆಹಿಡಿಯುವುದರಿಂದ ಹಿಡಿದು ಸೇವೆಯಿಂದ ವಜಾಗೊಳಿಸುವವರೆಗೆ ಇರುತ್ತದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement