ಸಿಎಂಗೆ ಪತ್ರ ಬರೆದ ಶಾಸಕ ಬಿಆರ್ ಪಾಟೀಲ ; ಶಾಸಕ ಸ್ಥಾನಕ್ಕೆ ರಾಜೀನಾಮೆ ಎಚ್ಚರಿಕೆ

ಬೆಂಗಳೂರು : ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ ಎಂದು ಹೇಳಲಾಗಿದ್ದು, ಇದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ. ಅದರಲ್ಲಿ ಅವರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಕಳೆದ ವಿಧಾನಸಭೆ ಅಧಿವೇಶನದ ವಿಷಯ ಪ್ರಸ್ತಾಪಿಸಿ ಬಿ.ಆರ್‌. ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕೆಆರ್ ಐಡಿಎಲ್ ಗೆ ನೀಡಿದ್ದ ಕಾಮಗಾರಿಗಳ ಸಂಬಂಧ ನನ್ನ ವಿರುದ್ಧ ಆರೋಪ ಬಂದಿದೆ. ಇಂಥ ಆರೋಪಗಳನ್ನ ಹೊತ್ತು ಆಧಿವೇಶನಕ್ಕೆ ಬರುವುದು ಸರಿಯಲ್ಲ. ಅಧಿವೇಶನಕ್ಕೆ ಬಂದರೆ ಆರೋಪ ಒಪ್ಪಿಕೊಂಡಂತಾಗುತ್ತದೆ. ಹೀಗಾಗಿ ನನ್ನ ವಿರುದ್ದದ ಆರೋಪಗಳ ಸಂಬಂಧ ತನಿಖೆಗೆ ಆದೇಶಿಸಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಿಆರ್ ಪಾಟೀಲ ಅವರು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ನನಗೆ ಗೊತ್ತಿಲ್ಲ, ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ಏನಿದೆ?
2013 ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್‌ಗೆ ನೀಡಿದ್ದೆ. ಆದರೆ ಕಾರಣಾಂತರಗಳಿಂದ 2013 ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಈ ಬಗ್ಗೆ ನಾನು ಕಳೆದ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದಾಗ ನನ್ನನ್ನೇ ಅನುಮಾನದಿಂದ ನೋಡಲಾಯಿತು ಎಂದು ಬಿ.ಆರ್. ಪಾಟೀಲ ಅವರು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
ಸಚಿವ ಪ್ರಿಯಾಂಕ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಸಚಿವ ಕೃಷ್ಣ ಭೈರೇಗೌಡ ನನ್ನ ಮೇಲೆ ಅನುಮಾನ ಬರುವಂತೆ ಮಾತನಾಡಿದರು ಎಂದು ಅವರು ಆರೋಪಿಸಿದ್ದಾರೆ. ಕೆಆರ್‌ಐಡಿಎಲ್ ಕಡೆಯಿಂದ ನಾನು ಹಣ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆ ಎಂದು ಅನುಮಾನ ಬರುವಂತೆ ಮಾತನಾಡಿದ್ದರು ಎಂದು ಬಿಆರ್ ಪಾಟೀಲ್ ಆರೋಪಿಸಿದ್ದಾರೆ.
ಅದಾದ ಮೇಲೂ ಕೂಡ ಸಚಿವ ಪ್ರಿಯಾಂಕ ಖರ್ಗೆ ಕಾಮಗಾರಿಗಳ ಕುರಿತು ಸಭೆಯನ್ನು ನಡೆಸಲಿಲ್ಲ. ಹೀಗಾಗಿ ಇಂತ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಆರೋಪಗಳನ್ನು ಹೊತ್ತು ಸದನಕ್ಕೆ ಬಂದರೆ ನಾನು ಆರೋಪ ಒಪ್ಪಿಕೊಂಡಂತಾಗುತ್ತದೆ ಅಂತ ಬಿಆರ್ ಪಾಟೀಲ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೇಜ್ರಿವಾಲ್ ವಿರುದ್ಧ ಎನ್‌ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು: ಇದು ಬಿಜೆಪಿಯ ಮತ್ತೊಂದು ಪಿತೂರಿ ಎಂದ ಎಎಪಿ

ನನ್ನ ಮೇಲೆ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ. ಸತ್ಯಾಸತ್ಯತೆ ಹೊರ ಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂದು ಈಗ ಪತ್ರ ಬರೆಯುತ್ತಿದ್ದೇನೆ. ಹೀಗಾಗಿ ತಕ್ಷಣವೇ ತನಿಖಾ ಆಯೋಗ ರಚನೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ನನಗೆ ಗೊತ್ತಿಲ್ಲ…
ಆಳಂದ ಶಾಸಕ ಬಿ.ಆರ್. ಪಾಟೀಲ ನನಗೆ ಪತ್ರ ಬರೆದಿರುವುದು ನನಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನನಗೆ ಪಾಟೀಲ್ ಬರೆದ ಪತ್ರ ಇನ್ನೂ ತಲುಪಿಲ್ಲ ಅಂತ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement