ಬೆಂಗಳೂರು: ಕನ್ನಡ ಚಿತ್ರರಂಗದ ಮುಂಗಾರ ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಅವರು ಬುಧವಾರ ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯಂತೆ ತಮ್ಮ ಬಹುದಿನದ ಗೆಳೆಯ ವಿಜಯ ಘೋರ್ಪಡೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಯಲಹಂಕ ಸಮೀಪ ಇರುವ ಆರಂಭ ರೆಸ್ಟೋರೆಂಟ್ನಲ್ಲಿ ಪೂಜಾ- ವಿಜಯ ಅವರ ಮದುವೆ ನೆರವೇರಿದೆ. ಕಳೆದ 10 ವರ್ಷಗಳಿಂದ ವಿಜಯ್ ಮತ್ತು ಪೂಜಾ ಗಾಂಧಿ ಸ್ನೇಹಿತರಾಗಿದ್ದರು. ವಿಜಯ ಅವರಿಂದಲೇ ಪೂಜಾ ಗಾಂಧಿ ಕನ್ನಡ ಕಲಿತಿದ್ದರು. ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲೇ ಕೆಲವು ಸಮಯದಿಂದ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಕನ್ನಡ ಮಾತನಾಡಲು ಅಷ್ಟೇ ಅಲ್ಲ ಓದಲು ಮತ್ತು ಬರೆಯಲು ಅವರು ಕಲಿತಿದ್ದಾರೆ. ಹಿಂದಿ, ಬಂಗಾಳಿ ಚಿತ್ರಗಳಲ್ಲಿ ನಟಿಸಿದ್ದ ಪೂಜಾ ಗಾಂಧಿ 2006ರಲ್ಲಿ ತೆರೆಕಂಡ ಯೋಗರಾಜ್ ಭಟ್ ನಿರ್ದೇಶನದ ʼಮುಂಗಾರು ಮಳೆʼ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಬಳಿಕ ಪೂಜಾ ಗಾಂಧಿ ಪುನೀತ್ ರಾಜ್ ಕುಮಾರ್, ಯಶ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ತಮಿಳು, ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಈಗ ಉದ್ಯಮಿ ವಿಜಯ ಘೋರ್ಪಡೆ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.
ಪೂಜಾ ಗಾಂಧಿ – ವಿಜಯ ಮದುವೆಗೆ ಕುಟುಂಬಸ್ಥರು, ನಿರ್ದೇಶಕ ಯೋಗರಾಜ ಭಟ್, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ, ಸಾಹಿತಿ ಜಯಂತ ಕಾಯ್ಕಿಣಿ, ನಟಿಯರಾದ ಸುಧಾರಣಿ, ಶುಭಾ ಪೂಂಜಾ, ನಿರ್ದೇಶಕಿ ಸುಮನಾ ಕಿತ್ತೂರು ಮತ್ತಿತರರು ಆಗಮಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ