ಬೆಂಗಳೂರಿನ 44 ಶಾಲೆಗಳಿಗೆ ಬಾಂಬ್ ಬೆದರಿಕೆ….!

ಬೆಂಗಳೂರು :ಬೆಂಗಳೂರಿನ 44 ಶಾಲೆಗಳಿಗೆ ಬಾಂಬ್‌ ಬೆದರಿಕೆ (Bomb Threat to Schools) ಹಾಕಲಾಗಿದೆ. ಈ ಮೇಲ್‌ ಮೂಲಕ ಈ ಬಾಂಬ್‌ ಬೆದರಿಕೆ ಬಂದಿದ್ದು, ಬೆಳಗ್ಗೆ ಮೇಲ್‌ ಚೆಕ್‌ ಮಾಡುವಾಗ ಇದು ಗೊತ್ತಾಗಿದೆ. ಪೊಲೀಸರು ಶಾಲೆಗಳಿಗೆ ದೌಡಾಯಿಸಿದ್ದು, ಬಾಂಬ್‌ ತಪಾಸಣೆ ದಳಗಳೂ ಆಗಮಿಸಿವೆ. ಶುಕ್ರವಾರ ಬೆಳಗ್ಗೆ ಬೆಂಗಳೂರಿನ 44 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಶಾಲೆಗಳಿಂದ ಮಕ್ಕಳನ್ನು ಕಳುಹಿಸಲಾಗಿದೆ.
ಇ-ಮೇಲ್ ಮೂಲಕ ಅಪರಿಚಿತರು ಬೆದರಿಕೆ ಹಾಕಿದ್ದು, ಬೆಂಗಳೂರಿನ ಬಸವೇಶ್ವರ ನಗರದ 7 ಶಾಲೆಗೆ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಸದಾಶಿವನಗರ, ಯಲಹಂಕ ಸೇರಿ ಹಲವು ಕಡೆಗಳಲ್ಲಿರುವ ಶಾಲೆಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ಶಾಲೆಯ ಆವರಣದಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಇಮೇಲ್ ಹೇಳಿಕೊಂಡಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳಿಗಾಗಿ ಶಾಲೆಗಳಲ್ಲಿ ಶೋಧ ನಡೆಸುತ್ತಿದ್ದಾರೆ. ವೈಟ್‌ಫೀಲ್ಡ್, ಕೋರಮಂಗಲ, ಬಸವೇಶ್ವರನಗರ, ಯಲಹಂಕ ಮತ್ತು ಸದಾಶಿವನಗರ ಸೇರಿದಂತೆ ಬಾಂಬ್ ಬೆದರಿಕೆ ಬಂದಿರುವ ಎಲ್ಲಾ ಶಾಲೆಗಳಿಗೆ ಬಾಂಬ್ ನಿಷ್ಕ್ರಿಯ ದಳವನ್ನು ರವಾನಿಸಲಾಗಿದೆ.

ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಬಂದ ಇ-ಮೇಲ್ ಬಂದಿದೆ. ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ. ತಾಜ್ ಮೇಲೆ ದಾಳಿ ಮಾಡಿದಂತೆ ದಾಳಿ ಮಾಡುತ್ತೇವೆ . ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ ಎಂದು ಕೆಂಗೇರಿಯ ಚಿತ್ರಕೂಟ ಶಾಲೆಗೆ ಬಂದ ಬೆದರಿಕೆ ಇ-ಮೇಲ್‌ನಲ್ಲಿ ತಿಳಿಸಲಾಗಿದೆ. ನೀವೆಲ್ಲ ಅಲ್ಲಾಹುವಿನ ವಿರೋಧಿಗಳು, ಸಾಯಲು ಸಿದ್ಧರಾಗಿರಿ ಎಂದು ಮೇಲ್ ನಲ್ಲಿ ಆಗಂತುಕರು ಬರೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕೂಡಲೇ ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಲಾಯಿತು. ಮಕ್ಕಳನ್ನು ಬಿಡಲು ಆಗಮಿಸಿದ್ದ ಪೋಷಕರು ಕೂಡ ಆತಂಕಕ್ಕೆ ಒಳಗಾದರು.

ಶಾಲೆಗಳನ್ನು ಪರಿಶೀಲಿಸಲಾಗುತ್ತಿದೆ. ಕಳೆದ ವರ್ಷವೂ ಈ ರೀತಿ ಬೆದರಿಕೆ ಮೈಲ್ ಬಂದಿತ್ತು. ಆದರೂ ಈ ಬಾರಿ ನಿರ್ಲಕ್ಷ್ಯ ವಹಿಸಲು ಸಾಧ್ಯವಿಲ್ಲ. ಎಲ್ಲಾ ರೀತಿಯಲ್ಲೂ ಪರಿಶೀಲಿಸುತ್ತಿದ್ದೇವೆ. ಸಮಾಜಘಾತುಕರ ಹೆಡೆಮುರಿ ಕಟ್ಟುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ

ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಅವರು ಈ ಬಗ್ಗೆ ಹೇಳಿಕೆ ನೀಡಿ, ಬೆಂಗಳೂರಿನ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ. ಎಲ್ಲ ಶಾಲೆಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ಪರಿಶೀಲನೆ ನಡೆಸುತ್ತಿದೆ. ಈ ಹಿಂದೆಯೂ ಸಹ ಈ ರೀತಿ ಬೆದರಿಕೆ ಕರೆ ಬಂದಿತ್ತು. ಬಹುಶಃ ಇದು ಸುಳ್ಳು ಬಾಂಬ್ ಬೆದರಿಕೆ ಎಂದು ಅನ್ನಿಸುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ‌ ನಡೆಸುತ್ತಿದ್ದಾರೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸದಾಶಿವ ನಗರದ ನೀವ್ ಅಕಾಡಮೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement