ಮಧ್ಯಪ್ರದೇಶ ಚುನಾವಣೆಯಲ್ಲಿ ವಿಧಾನಸಭೆಯ 230 ಸ್ಥಾನಗಳಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮೂರನೇ ಎರಡರಷ್ಟು ಸ್ಥಾನ ಪಡೆಯುವ ಮೂಲಕ ಅಭೂತಪೂರ್ವ ಜಯಭೇರಿ ಬಾರಿಸಿದೆ. ಆಡಳಿತ ವಿರೋಧಿ ಅಲೆಯಿಂದಾಗಿ ಈ ಚುನಾವಣೆಯಲ್ಲಿ ಭರ್ಜರಿ ಗೆಲುವು ಅಥವಾ ಅತಂತ್ರ ವಿಧಾನಸಭೆ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಈ ಫಲಿತಾಂಶ ಆಘಾತ ತಂದಿದೆ. ಬಿಜೆಪಿ ನಾಯಕರು ಈ ಗೆಲುವಿನ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರಿಗೆ ನೀಡಿದ್ದಾರೆ. ಆದರೆ ಈ ಗೆಲುವಿನ ಹಿಂದಿನ ಸೂತ್ರದಾರರಲ್ಲಿ ಒಬ್ಬರಾದ ವಿಷ್ಣುದತ್ತ ಶರ್ಮಾ ಅವರ ಕಾರ್ಯತಂತ್ರ ಕಾರಣ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಬಿಜೆಪಿಯು ಅವರನ್ನು 2020 ರಲ್ಲಿ ಮಧ್ಯಪ್ರದೇಶದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿತು. ಖಜುರಾಹೊ ಸಂಸದರಾದ ವಿಷ್ಣುದತ್ತ ಶರ್ಮಾ ಅವರು ರಾಜ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ʼವಿಡಿʼ ಎಂದೇ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಕರೆಯಲ್ಪಡುವ ಶರ್ಮಾ ಅವರು ಆರ್‌ಎಸ್‌ಎಸ್‌ನ ಸಮರ್ಪಿತ ಅನುಯಾಯಿಯಾಗಿದ್ದಾರೆ. ಮಧ್ಯಪ್ರದೇಶದಲ್ಲಿ 1990ರ ದಶಕದಲ್ಲಿ ಆರ್‌ಎಸ್‌ಎಸ್‌ನೊಂದಿಗೆ ಸಂಯೋಜಿತ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಅನ್ನು ಬಲಪಡಿಸಿದ್ದಕ್ಕಾಗಿ ಅವರು ಗುರುತಿಸಲ್ಪಟ್ಟಿದ್ದಾರೆ.
ಶರ್ಮಾ ಅವರು ಈ ಚುನಾವಣೆಯಲ್ಲಿ ಪಕ್ಷದ ತಳಮಟ್ಟದ ಬಲವರ್ಧನೆಯಿಂದ ಹಿಡಿದು ಅಭ್ಯರ್ಥಿ ಆಯ್ಕೆಯ ವರೆಗೆ ಮಹತ್ವದ ಪಾತ್ರವನ್ನು ವಹಿಸಿದ್ದಾರೆ ಮತ್ತು ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಅದನ್ನು ಜನಪ್ರಿಯಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ಸ್ವಲ್ಪ ಅಂತರದಲ್ಲಿ ವಿಫಲವಾದ ನಂತರ ಬಿಜೆಪಿ ಹೆಚ್ಚು ಜಾಗರೂಕವಾಗಿತ್ತು. ಸೋಲಿನ ನಂತರ, ಪಕ್ಷವು ಗಮನಾರ್ಹವಾದ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿತು ಮತ್ತು ಎಚ್ಚರಿಕೆಯ ನಿರ್ಧಾರ ತೆಗೆದುಕೊಂಡ ಬಿಜೆಪಿ ಸಂಘಟನಾ ಚತುರ ವಿಷ್ಣುದತ್ತ ಶರ್ಮಾ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಅವರಿಗೆ ರಾಜ್ಯದ ಜವಾಬ್ದಾರಿ ವಹಿಸಿತು. ಶರ್ಮಾ ಅವರು ಸುಮಾರು ನಾಲ್ಕು ವರ್ಷಗಳಿಂದ ಬಿಜೆಪಿಯ ಸಂಘಟನಾ ಮುಖ್ಯಸ್ಥರಾಗಿದ್ದಾರೆ ಮತ್ತು ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ. ಮಾತ್ರವಲ್ಲದೆ ಕೇವಲ ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲದೆ ಸಣ್ಣ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳನ್ನು ಸುತ್ತಿದ್ದಾರೆ. ಪಕ್ಷವನ್ನು ಸಂಘಟನಾತ್ಮಕವಾಗಿ ಬಲಪಡಿಸಿದ್ದಾರೆ.
ಶರ್ಮಾ ಅವರಿಗೆ ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ರಾಜ್ಯದ ಅಧಿಕಾರವನ್ನು ಹಸ್ತಾಂತರಿಸಿದಾಗ ವಿವಿಧ ಪ್ರಶ್ನೆಗಳು ಉದ್ಭವಿಸಿದ್ದವು. ಆದರೆ ಇವೆಲ್ಲವನ್ನೂ ಮೀರಿ ಶರ್ಮಾ ಅವರು ರಾಷ್ಟ್ರೀಯ ನಾಯಕತ್ವದ ವಿವೇಚನೆ ಮತ್ತು ರಾಜ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಚಾರ ತಂತ್ರಗಳನ್ನು ರೂಪಿಸಿದರು. ಹಾಗೂ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸಿದ್ದಷ್ಟೇ ಅಲ್ಲ, ಅದನ್ನು ವಿಸ್ತರಿಸಿದರು.
ಶರ್ಮಾ ಅವರ ಕಾರ್ಯಶೈಲಿಯಿಂದಾಗಿ ಪಕ್ಷದ ನೆಲೆಯನ್ನು ವಿಸ್ತರಿಸುವ ಮಧ್ಯಪ್ರದೇಶದ ಅಭಿಯಾನವು ಇತರ ರಾಜ್ಯಗಳಲ್ಲಿಯೂ ಮಹತ್ವ ಪಡೆಯಿತು, ಇದು ಕುಶಾಭಾವು ಠಾಕ್ರೆ ಅವರ ಕಾರ್ಯಶೈಲಿಯೊಂದಿಗೆ ಹೋಲಿಕೆ ಪಡೆಯಿತು. ಕುಶಾಭಾವು ಠಾಕ್ರೆಯವರ ಪ್ರಭಾವ ಮತ್ತು ಅವರ ಸಂವಹನದ ವಿಧಾನವು ಶರ್ಮಾ ಅವರ ಗಮನಾರ್ಹ ಶಕ್ತಿಯಾಯಿತು. ಆರಂಭದಲ್ಲಿ, ಶರ್ಮಾ ಅವರು ಹಿರಿಯ ನಾಯಕರಿಂದ ಅಂತಹ ಬೆಂಬಲ ಹಾಗೂ ಸ್ಪಂದನೆ ಪಡೆಯಲಿಲ್ಲ. ಇದರ ಹೊರತಾಗಿಯೂ, ಅವರು ರೂಪಿಸಿದ ಕಾರ್ಯಶೈಲಿಯಿಂದಾಗಿ ಪಕ್ಷದಲ್ಲಿ ಸಂಘಟನೆಯು ವೇಗ ಪಡೆದುಕೊಳ್ಳಲು ಪ್ರಾರಂಭಿಸಿತು. ಅಧ್ಯಕ್ಷರಾಗಿ ಅವರ ಅಧಿಕಾರಾವಧಿಯು ಪಕ್ಷಕ್ಕೆ ಮಹತ್ವದ ಸಾಧನೆಯನ್ನು ತಂದಿತು – 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಬಿಜೆಪಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಪದಚ್ಯುತಗೊಳಿಸಿ ತನ್ನದೇ ಸರ್ಕಾರ ರಚಿಸಿತು.
ಅಂದಿನಿಂದ, ಶರ್ಮಾ ಅಥವಾ ಬಿಜೆಪಿ ಹಿಂತಿರುಗಿ ನೋಡಲಿಲ್ಲ ಮತ್ತು ತಳಮಟ್ಟದಲ್ಲಿ ಅವರ ನಿರಂತರ ಕೆಲಸವು ಕೇಸರಿ ಪಕ್ಷಕ್ಕೆ ಈ ಅಪೇಕ್ಷಿತ ಫಲಿತಾಂಶವನ್ನು ನೀಡಿತು. ಅದು ಅಂತಹ ಆಡಳಿತ ವಿರೋಧಿ ಅಲೆಯ ನಡುವೆಯೂ ಅಭೂತಪೂರ್ವ ಗೆಲುವು ದಾಖಲಿಸಿತು. ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿತು.
ನಿಮ್ಮ ಕಾಮೆಂಟ್ ಬರೆಯಿರಿ