ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಟದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು

ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ (63 ವರ್ಷ) ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ವೇಳೆ ಸಾವಿಗೀಡಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆಯಲ್ಲಿ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ ಮಾಡಿದ್ದು ಈ ಘಟನೆಯಲ್ಲಿ ಅರ್ಜುನ ಆನೆ ಮೃತಪಟ್ಟಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳೆಕೆರೆ ಪ್ರದೇಶದಲ್ಲಿ ಕಾಡಿನಲ್ಲಿ ಕಾಡಾನೆಯನ್ನು ಸರೆಹಿಡಿಯುವ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿ ಹಾಗೂ ಮಾವುತನ ರಕ್ಷಣೆಗಾಗಿ ಒಬ್ಬಂಟಿಯಾಗಿ ಕಾದಾಟಕ್ಕಿಳಿದ ಅರ್ಜುನ ಆನೆ ಎಲ್ಲರ ಪ್ರಾಣವನ್ನು ರಕ್ಷಿಸಿ ತನ್ನ ಪ್ರಾಣವನ್ನು ಕಳೆದುಕೊಂಡಿದೆ.

ಆನೆಗಳ ಸೆರೆ ಕಾರ್ಯಾಚರಣೆ ಮಾಡುವ ವೇಳೆ ಅರ್ಜುನ ಆನೆಯ ನೇತೃತ್ವದಲ್ಲಿ ಕೆಲವು ಆನೆಗಳನ್ನು ಅರಣ್ಯದೊಳಗೆ ಕರೆದೊಯ್ಯಲಾಗಿತ್ತು. ಈ ವೇಳೆ ಒಂಟಿ ಸಲಗ ಹಠಾತ್ತನೆ ಎಲ್ಲರ ಮೇಲೆ ದಾಳಿ ಮಾಡಿದೆ. ಅದು ಸಾಕಾನೆಗಳ ಮೇಲೆ ದಾಳಿ ಮಾಡಿದಾಗ ಇತರ ಸಾಕಾನೆಗಳು ಹೆದರಿ ಪಲಾಯನ ಮಾಡಿವೆ.ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಯ ಮೇಲಿದ್ದ ಮಾವುತರ ಮೇಲೆಯೂ ಕಾಡಾನೆ ದಾಳಿಗೆ ಮುಂದಾಗಿದೆ. ಅರ್ಜುನನ ಮೇಲಿದ್ದ ಮಾವುತನೂ ಇಳಿದು ಅಲ್ಲಿಂದ ಪಾರಾಗಿದ್ದಾನೆ. ಆದರೆ ಅರ್ಜುನ ಮಾತ್ರ ಹೆದರದೆ ಕಾಡಾನೆಯೊಂದಿಗೆ ಒಬ್ಬಂಟಿಯಾಗಿಯೇ ಕಾದಾಟ ನಡೆಸಿ ಉಳಿದವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದೆ. ಆದರೆ ಕಾದಾಟದ ಕಾಡಾನೆಯ ದಂತ ಅರ್ಜುನ ಆನೆಯ ಹೊಟ್ಟೆ ಭಾಗಕ್ಕೆ ಹೊಕ್ಕಿ ಅದು ಘಾಸಿಗೊಂಡಿದೆ. ತುಂಬಾ ಸಮಯದವರೆಗೆ ಕಾದಾಡಿದ ಅರ್ಜುನ ನಂತರ ರಕ್ತಸ್ರಾವವಾಗಿ  ನಿತ್ರಾಣವಾಗಿ ಕುಸಿದು ಬಿದ್ದಿದೆ. ಅರಣ್ಯ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಕಾಡಾನೆ ಓಡಿಸಿದ್ದಾರೆ. ನಂತರ, ಅರ್ಜುನ ಆನೆಯ ಬಳಿ ಧಾವಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಮೃತಪಟ್ಟಿದೆ. ಮಾವುತರು ಕಣ್ಣೀರಿಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಕಾಕನಕೋಟೆ ಕಾಡಿನಲ್ಲಿ ಸೆರೆಯಾಗಿತ್ತು…
ಅರ್ಜುನ ಆನೆಯನ್ನು  ಕಾಕನಕೋಟೆಯ ಕಾಡಿನಲ್ಲಿ ಖೆಡ್ಡಾ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿತ್ತು. ಆನೆ ಪಳಗಿದ ನಂತರ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಸಮಯದಲ್ಲಿ ಮೆರವಣಿಗೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ದ್ರೋಣ, ಬಲರಾಮ ಆನೆಗಳ ನಂತರ ಅರ್ಜುನನಿಗೆ ಅಂಬಾರಿ ಹೊರಲು ಅವಕಾಶ ನೀಡಲಾಗಿತ್ತು. ಅರ್ಜುನನು 2012 ರಿಂದ 2019 ರವರೆಗೆ (8 ವರ್ಷಗಳು) ಅಂಬಾರಿ ಹೊತ್ತಿತ್ತು. ಈಗ 60 ವರ್ಷ ಮೇಲ್ಪಟ್ಟ ಆನೆಗಳನ್ನು ನಿವೃತ್ತಿಗೊಳಿಸುವ ಸರ್ಕಾರದ ಆದೇಶದ ನಂತರ ಅರ್ಜುನನನ್ನು ನಿವೃತ್ತಗೊಳಿಸಲಾಗಿತ್ತು. ಬಳಿಕ ಅಭಿಮನ್ಯು ಅರ್ಜುನನ ಉತ್ತರಾಧಿಕಾರಿಯಾಗಿ ಅಂಬಾರಿ ಹೊರುತ್ತಿದ್ದಾನೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಭಾರೀ ತೂಕ…
ಮೈಸೂರು ದಸರಾ 2023 ಜಂಬೂ ಸವಾರಿಯ ಆನೆಗಳ ತೂಕದಲ್ಲಿ ಅರ್ಜುನ ಆನೆ ನಂಬರ್ ಒನ್‌ ಸ್ಥಾನ ಕಾಯ್ದುಕೊಂಡಿತ್ತು. ಅದರ ತೂಕ 5600 ಕೆ.ಜಿ. ಇತ್ತು. ಸಾಕಷ್ಟು ಧೈರ್ಯ ಹಾಗೂ ಭಾರೀ ತೂಕದ ಅರ್ಜುನ ಆನೆಯನ್ನು ಅರಣ್ಯ ಇಲಾಖೆಯು ಕಾರ್ಯಾಚರಣೆಗಳಿಗೆ ಕರೆದೊಯ್ಯುತ್ತಿದ್ದರು. ಸಾಕಷ್ಟು ಪುಂಡಾನೆಗಳನ್ನು ಸೆರೆಹಿಡಿಯಲು ಅದು ನೆರವಾಗಿತ್ತು. ಆದರೆ ಈ ಕಾರ್ಯಾಚರಣೆ ವೇಳೆ ಅದು ಕಾಡಾನೆಯ ತಿವಿತದಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement