ಗೌರಿ ಹತ್ಯೆ ಪ್ರಕರಣ : ಆರೋಪಿಗೆ ಹೈಕೋರ್ಟ್‌ನಿಂದ ಜಾಮೀನು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ ಆರೋಪಕ್ಕೆ ಗುರಿಯಾಗಿರುವ ಎನ್‌. ಮೋಹನ ನಾಯಕ ಅಲಿಯಾಸ್‌ ಸಂಪಾಜೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಂಪಾಜೆಯ ಎನ್‌. ಮೋಹನ ನಾಯಕ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಈ ಒಟ್ಟು ಪ್ರಕರಣದಲ್ಲಿ 18 ಆರೋಪಿಗಳಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಲಿರುವ ಮೊದಲ ಆರೋಪಿ ಮೋಹನ ನಾಯಕ್ ಆಗಿದ್ದಾರೆ.
ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ಎನ್‌. ಮೋಹನ ನಾಯಕ ಒಂದು ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತರಿ ನೀಡಬೇಕು, ಪ್ರತೀ ವಿಚಾರಣೆಗೂ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಮತ್ತು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರಕೂಡದು ಎಂಬ ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.
ವಿಚಾರಣೆಯ ವಿಳಂಬದ ಆಧಾರದ ಮೇಲೆ ಜಾಮೀನು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಒಟ್ಟು 527 ಆರೋಪಪಟ್ಟಿ ಸಾಕ್ಷಿಗಳಿದ್ದು, ಇಲ್ಲಿಯವರೆಗೆ 90 ಮಂದಿಯನ್ನು ಮಾತ್ರ ವಿಚಾರಣೆ ಮಾಡಲಾಗಿದೆ ಎಂಬ ವಾದವನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್‌ ರೇವಣ್ಣ ಪ್ರಕರಣ : ದೇವೇಗೌಡ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಸಾರ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement