ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು: ಕೇಂದ್ರ ಸರ್ಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್ ಸಂವಿಧಾನ ಪೀಠ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ.
‘ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ.
ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಆಗಿ ಮರುಸಂಘಟಿತಗೊಳಿಸಿದ ನಾಲ್ಕು ವರ್ಷಗಳ ನಂತರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ರಾಷ್ಟ್ರಪತಿಗಳ 2019 ರ ಆದೇಶವು ಮಾನ್ಯವಾಗಿದೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 370 ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ಮೇಲೆ ಸರ್ವಾನುಮತದ ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೋಮವಾರದಂದು 370ನೇ ವಿಧಿಯ ರದ್ದತಿಯ ತೀರ್ಪನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 2024 ರೊಳಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಬೇಕು ಮತ್ತು ಸಾಧ್ಯವಾದಷ್ಟು ಬೇಗ ರಾಜ್ಯತ್ವವನ್ನು ಮರುಸ್ಥಾಪಿಸಬೇಕು ಎಂದು ಹೇಳಿದೆ.
ಕೇಂದ್ರದ ಪ್ರತಿಯೊಂದು ನಡೆಯನ್ನೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹೇಳಿದ್ದಾರೆ. ಸರ್ಕಾರದ ಆದೇಶದ ಸಿಂಧುತ್ವದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲು ಸಾಧ್ಯವಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು.
ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ ಮತ್ತು ಮಧ್ಯಂತರ ಪ್ರಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಯುದ್ಧದ ಪರಿಸ್ಥಿತಿಯಿಂದಾಗಿ 370 ನೇ ವಿಧಿಯು ಮಧ್ಯಂತರ ವ್ಯವಸ್ಥೆಯಾಗಿತ್ತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. “ಪಠ್ಯ ಓದುವಿಕೆ ಕೂಡ ಆರ್ಟಿಕಲ್ 370 ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಸೂಚಿಸುತ್ತದೆ” ಎಂದು ತೀರ್ಪು ಓದಿದ ಸಿಜೆಐ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

ಜಮ್ಮು ಮತ್ತು ಕಾಶ್ಮೀರವು ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ಮಹಾರಾಜ ಹರಿ ಸಿಂಗ್ ಅವರ ಒಪ್ಪಂದವು ಭಾರತೀಯ ಸಂವಿಧಾನವು ಅಂತಿಮವಾಗಿದೆ ಎಂದು ಹೇಳಿದೆ. ಜಮ್ಮು ಮತ್ತು ಕಾಶ್ಮೀರವು ಭಾರತಕ್ಕೆ ಸೇರಿದಾಗ ಅದು ಸಾರ್ವಭೌಮತ್ವವನ್ನು ಹೊಂದಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರ ಏಕೀಕರಣವನ್ನು ಸ್ಥಗಿತಗೊಳಿಸುವುದಿಲ್ಲ. 370 ನೇ ವಿಧಿ ಏಕೀಕರಣಕ್ಕಾಗಿಯೇ ಹೊರತು ವಿಘಟನೆಗಾಗಿ ಅಲ್ಲ ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿಯ ಸಾಂವಿಧಾನಿಕ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿಗಳಾದ ಸಂಜಯ ಕಿಶನ್ ಕೌಲ್, ಸಂಜೀವ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪು ನೀಡಿದೆ.

ಆಗಸ್ಟ್ 2ರಿಂದ ಆರ್ಟಿಕಲ್ 370 ರ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪ್ರಾರಂಭಿಸಿತು ಮತ್ತು ನ್ಯಾಯಾಲಯವು ಈ ವಿಷಯದಲ್ಲಿ ತನ್ನ ತೀರ್ಪನ್ನು ಸೆಪ್ಟೆಂಬರ್ 5 ರಂದು ಕಾಯ್ದಿರಿಸಿತ್ತು.
1957 ರಲ್ಲಿ ಸಂವಿಧಾನ ಸಭೆಯ ವಿಸರ್ಜನೆಯ ನಂತರ 370 ನೇ ವಿಧಿಯು ಶಾಶ್ವತವಾಯಿತು ಎಂದು ಅರ್ಜಿದಾರರು ವಾದಿಸಿದ್ದರು. 370 ನೇ ವಿಧಿಯನ್ನು ರದ್ದುಗೊಳಿಸಲು ಸಂವಿಧಾನ ರಚನಾ ಸಭೆಯ ಪಾತ್ರವನ್ನು ಕೇಂದ್ರವು ವಹಿಸಬಾರದಿತ್ತು ಎಂದು ಅರ್ಜಿದಾರರು ವಾದಿಸಿದರು.
ಆದಾಗ್ಯೂ, ಎಲ್ಲಾ ಸಾಂವಿಧಾನಿಕ ಕಾರ್ಯವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆ ಎಂದು ಕೇಂದ್ರವು ವಾದಿಸಿತು ಮತ್ತು ರದ್ದತಿ ಪ್ರಕ್ರಿಯೆಯಲ್ಲಿ ಯಾವುದೇ “ಸಾಂವಿಧಾನಿಕ ವಂಚನೆ” ಯ ಆರೋಪಗಳನ್ನು ಅದು ನಿರಾಕರಿಸಿತು.
ಕಪಿಲ್ ಸಿಬಲ್, ಗೋಪಾಲ ಸುಬ್ರಮಣಿಯಂ, ರಾಜೀವ ಧವನ್, ದುಶ್ಯಂತ್ ದವೆ, ಗೋಪಾಲ್ ಶಂಕರನಾರಾಯಣನ್ ಮತ್ತು ಜಾಫರ್ ಶಾ ಅರ್ಜಿದಾರರನ್ನು ಪ್ರತಿನಿಧಿಸಿದ್ದರು.ಮತ್ತೊಂದೆಡೆ, ಕೇಂದ್ರ ಸರ್ಕಾರವನ್ನು ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹರೀಶ್ ಸಾಳ್ವೆ, ರಾಕೇಶದ್ವಿವೇದಿ ಮತ್ತು ವಿ ಗಿರಿ ಪ್ರತಿನಿಧಿಸಿದ್ದರು.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement