ಬೆಳಗಾವಿ ವಿವಸ್ತ್ರ ಪ್ರಕರಣ : ಸಂತ್ರಸ್ತೆ ಭೇಟಿಗೆ ನಿರ್ಬಂಧ ವಿಧಿಸಿದ ಹೈಕೋರ್ಟ್‌

ಬೆಂಗಳೂರು : ಬೆಳಗಾವಿಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣದ ಸಂತ್ರಸ್ತೆಯು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದರಿಂದ ಯಾವುದೇ ವ್ಯಕ್ತಿ, ಗುಂಪು, ಸಮೂಹ ಅಥವಾ ರಾಜಕೀಯ ಪಕ್ಷಗಳು ಆಕೆಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯವರ ಲಿಖಿತ ಅನುಮತಿ ಪಡೆಯದೇ ಭೇಟಿಯಾಗುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಶನಿವಾರ ಆದೇಶ ಮಾಡಿದೆ.
ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಅಕೆಯೊಂದಿಗೆ ಪರಾರಿಯಾದ ಎಂದು ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ವಿದ್ಯುನ್ಮಾನ ಮಾಧ್ಯಮವೊಂದರಲ್ಲಿ ಬೆಳಗಾವಿ ವಿವಸ್ತ್ರ ಪ್ರಕರಣದ ಸಂತ್ರಸ್ತೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷದ ನಿಯೋಗ ಭೇಟಿ ಮಾಡಲಿದೆ ಎಂಬ ಸುದ್ದಿಯನ್ನು ಮುಖ್ಯ ನ್ಯಾಯಮೂರ್ತಿ ಅವರು ವೀಕ್ಷಿಸಿದ್ದು, ಪ್ರಕರಣದ ಗಂಭೀರತೆ ಅರಿತು ಪೀಠವು ಶನಿವಾರ ವಿಶೇಷ ವಿಚಾರಣೆ ನಡೆಸಿದೆ.
“ಇಂಥ ಸಂದರ್ಭದಲ್ಲಿ ಸಂತ್ರಸ್ತೆಯನ್ನು ನೋಡಲು ಜನರು ಭೇಟಿ ನೀಡುವುದು ಅಸಾಮಾನ್ಯವೇನಲ್ಲ. ಜನರು ಸ್ವತಂತ್ರವಾಗಿ ಓಡಾಡುವುದನ್ನು ನ್ಯಾಯಾಲಯವು ಸಾಮಾನ್ಯವಾಗಿ ನಿರ್ಬಂಧಿಸುವುದಿಲ್ಲ; ಆದರೆ ಈ ಘಟನೆಯಲ್ಲಿ ಸಂತ್ರಸ್ತೆಯು ತಾಳಲಾರದ ಯಾತನೆಗೆ ಒಳಗಾಗಿದ್ದು, ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ನಿರಂತರವಾಗಿ ಸಂತ್ರಸ್ತೆಯನ್ನು ನೋಡಲು ಹೋಗುವುದರಿಂದ ಅವರ ಆರೋಗ್ಯ ಹಾಗೂ ಅವರಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಯ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಸಂತ್ರಸ್ತೆಯ ಹಿತಾಸಕ್ತಿ ಮತ್ತು ವೈದ್ಯಕೀಯ ಚಿಕಿತ್ಸೆಗೆ ಅಡ್ಡಿ ಉಂಟಾಗದಿರಲಿ ಎಂದು ಸಂದರ್ಶಕರ ಭೇಟಿಯನ್ನು ನಿರ್ಬಂಧಿಸಲಾಗುತ್ತಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

“ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಅಥವಾ ವೈದ್ಯರಿಂದ ಲಿಖಿತ ಅನುಮತಿ ಪಡೆಯದೇ ಯಾವುದೇ ವ್ಯಕ್ತಿ, ಸಮೂಹ, ಗುಂಪು, ರಾಜಕೀಯ ಪಕ್ಷಗಳು ಸಂತ್ರಸ್ತೆಯನ್ನು ಭೇಟಿ ಮಾಡುವಂತಿಲ್ಲ. ಈ ಆದೇಶವು ಕುಟುಂಬ ಸದಸ್ಯರು, ಶಾಸನಬದ್ಧ ಸಂಸ್ಥೆಗಳು/ಆಯೋಗದ ಅಧಿಕೃತ ಪ್ರತಿನಿಧಿಗಳ ಭೇಟಿ ಅಥವಾ ತನಿಖಾಧಿಕಾರಿಗೆ ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು ಹಾಜರಾಗಿ ಪ್ರಕರಣದ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement