ಮಹಿಳೆ ವಿವಸ್ತ್ರ ಪ್ರಕರಣ : ಸರ್ಕಾರವೇ ಬೆಳಗಾವಿಯಲ್ಲಿದ್ರೂ ಸಿಎಂ, ಡಿಜಿಪಿ ಸಂತ್ರಸ್ತೆಯನ್ನು ಯಾಕೆ ಭೇಟಿಯಾಗಿಲ್ಲ-ಬಿಜೆಪಿ ಸತ್ಯಶೋಧನಾ ಸಮಿತಿ ಆಕ್ಷೇಪ

ಬೆಳಗಾವಿ: ಸಂಪೂರ್ಣ ಆಡಳಿತವೇ ಬೆಳಗಾವಿಯಲ್ಲಿದ್ದರೂ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ, ಡಿಜಿಪಿ, ಮುಖ್ಯ ಕಾರ್ಯದರ್ಶಿಗಳು ಯಾಕೆ ಭೇಟಿ ನೀಡಿಲ್ಲ? ಸಂತ್ರಸ್ತೆಯನ್ನು ಯಾಕೆ ಭೇಟಿಯಾಗಿಲ್ಲ ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಂಸದರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರನ್ನೊಳಗೊಂಡ ನಿಯೋಗವು ಇಂದು, ಶನಿವಾರ (ಡಿಸೆಂಬರ್‌ 16) ಬೆಳಗಾವಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿತು ಹಾಗೂ ಸಂತ್ರಸ್ತೆಯನ್ನು ಸಹ ಭೇಟಿ ಮಾಡಿತು.

ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅಪರಾಜಿತಾ ಸಾರಂಗಿ ಅವರು, “ರಾಷ್ಟ್ರವೇ ತಲೆತಗ್ಗಿಸುವ ಘಟನೆ ಇದಾಗಿದೆ. ಆದರೆ ಸರ್ಕಾರದ ಪ್ರಮುಖರು ಸಂತ್ರಸ್ತೆಯನ್ನು ಯಾಕೆ ಭೇಟಿ ಮಾಡಿಲ್ಲ ಎಂದು ಪ್ರಶ್ನಿಸಿದರು.
“ಘಟನೆ ನಡೆದು 2 ಗಂಟೆವರೆಗೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ. ಠಾಣಾಧಿಕಾರಿಗೆ ಇದು ಸ್ಥಳಕ್ಕೆ ಹೋಗಬೇಕಾದ ಪ್ರಕರಣ ಎಂದು ಅನಿಸಲಿಲ್ಲವೇ? ಮಹಿಳೆ ಮೇಲಿನ ದೌರ್ಜನ್ಯ ಇದಾಗಿದ್ದರೂ ಠಾಣಾಧಿಕಾರಿ ತಕ್ಷಣವೇ ಸ್ಥಳಕ್ಕೆ ಯಾಕೆ ತೆರಳಲಿಲ್ಲ ಎಂದು ಅವರು ಪ್ರಶ್ನಿಸಿದರು.
“ ಮಹಿಳೆಯರ ಸುರಕ್ಷತೆ ರಾಜ್ಯ ಸರ್ಕಾರದ ಪ್ರಥಮ ಆದ್ಯತೆ ಆಗಬೇಕು. ಇದು ಮಹಿಳೆಯರ ಘನತೆಯ ಪ್ರಶ್ನೆ. ಆದರೆ ಘಟನೆ ನಡೆದ ಮೇಲೆ ಕೂಡ ರಾಜ್ಯ ಸರ್ಕಾರ ವಿಳಂಬವಾಗಿ ಸ್ಪಂದಿಸುತ್ತಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೀತಿಯೇ ಸಿದ್ದು, ಪರಮೇಶ್ವರ ವೀಡಿಯೊ ಹೊರಬರಬಹುದು : ರಮೇಶ ಜಾರಕಿಹೊಳಿ

ಆಶಾ ಲಾಕ್ರಾ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ವಸ್ತುಸ್ಥಿತಿ ತಿಳಿಯಲು ಬಂದಿದ್ದೇವೆ. ಮಧ್ಯರಾತ್ರಿ ಅಸಹಾಯಕ ಮಹಿಳೆಯ ಮೇಲೆ ಆಕ್ರಮಣ ನಡೆಸಲಾಗಿದೆ. ಮಹಿಳೆಯನ್ನು ಪರೇಡ್ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಪೊಲೀಸರು ತಡವಾಗಿ ಆಗಮಿಸಿದ್ದಾರೆ. ಠಾಣೆ ಘಟನೆ ನಡೆದ ಸ್ಥಳದಿಂದ ಬಹಳ ದೂರದಲ್ಲಿ ಇಲ್ಲ; ಆದರೂ ಪೊಲೀಸರು ಸ್ಥಳಕ್ಕೆ ಬರಲು ವಿಳಂಬ ಮಾಡಿದ್ದು ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ನಮಗೆ ಅನಿಸುತ್ತಿದೆ. ಠಾಣಾಧಿಕಾರಿಯ ನಿರ್ಲಕ್ಷ್ಯವು ಕಾಂಗ್ರೆಸ್ ಸರ್ಕಾರದ ಆಡಳಿತದ ಕೈಗನ್ನಡಿ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 43 ಸಾವಿರ ಕ್ರಿಮಿನಲ್ ಕೇಸುಗಳು ದಾಖಲಾಗಿವೆ” ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement