ಕಲಾಪಕ್ಕೆ ಅಡ್ಡಿ: ಡಿ.ಕೆ ಸುರೇಶ ಸೇರಿದಂತೆ ಮೂವರು ಕಾಂಗ್ರೆಸ್ ಸಂಸದರ ಅಮಾನತು

ನವದೆಹಲಿ : ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಮೂವರು ಕಾಂಗ್ರೆಸ್ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಗುರುವಾರ( ಡಿಸೆಂಬರ್‌ 21) ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಅಮಾನತಿಗೆ ಪ್ರಸ್ತಾವನೆ ಮಂಡಿಸಿದರು. ನಂತರ ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶ, ದೀಪಕ ಬೈಜ್ ಮತ್ತು ನಕುಲ ನಾಥ ಅವರನ್ನು ಅಮಾನತುಗೊಳಿಸಲಾಗಿದೆ. ಹೀಗಾಗಿ ಲೋಕಸಭೆಯಿಂದ ಅಮಾನತುಗೊಂಡ ಸಂಸದರ ಒಟ್ಟು ಸಂಖ್ಯೆ 146ಕ್ಕೆ ಏರಿಕೆಯಾಗಿದೆ.
‘ಈ ಮೂವರು ಸದಸ್ಯರು ಸದನ ಮತ್ತು ಪೀಠದ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಫಲಕಗಳನ್ನು ಪ್ರದರ್ಶಿಸಿಸುವ ಮೂಲಕ ಸದನದ ಬಾವಿಗೆ ಇಳಿದು ದುರ್ವರ್ತನೆ ತೋರಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಮಾನತುಗೊಳಿಸಲಾಗಿದೆ’ ಎಂದು ಜೋಶಿ ಹೇಳಿದರು.

ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಆಗ್ರಹಿಸಿ ಗದ್ದಲ ಸೃಷ್ಟಿಸಿ ಉಭಯ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಈವರೆಗೆ ಒಟ್ಟು 143 ಸಂಸದರು ಅಮಾನತುಗೊಂಡಿದ್ದರು. ಗುರುವಾರ ಮೂವರನ್ನು ಅಮಾನತುಗೊಳಿಸಲಾಗಿದೆ. ಈಗ ಅಮಾನತಾದವರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಅವರಲ್ಲಿ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರು ಸೇರಿದ್ದಾರೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

ಸಂಸತ್ತಿನ ಪ್ರಜಾಪ್ರಭುತ್ವವನ್ನು ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿ ಅಮಾನತುಗೊಂಡ ಸಂಸದರು ಗುರುವಾರ ಸಂಸತ್ ಭವನದಿಂದ ದೆಹಲಿಯ ಹೃದಯಭಾಗದಲ್ಲಿರುವ ವಿಜಯ್ ಚೌಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
“ಒಂದು ದೊಡ್ಡ ಭದ್ರತಾ ಲೋಪ ಸಂಭವಿಸಿದೆ. ಸಚಿವರಾಗಿ ತಮ್ಮ ಕರ್ತವ್ಯವನ್ನು ಪೂರೈಸುವ ಬದಲು (ಕೇಂದ್ರ ಗೃಹ ಸಚಿವ ಅಮಿತ್ ಶಾ), ಸದನಕ್ಕೆ ಹಾಜರಾಗಲು ನಿರಾಕರಿಸುವುದು ಮಾತ್ರವಲ್ಲದೆ ಹೊರಗೆ ಹೋಗಿ ಪತ್ರಿಕಾ ಹೇಳಿಕೆಗಳನ್ನು ನೀಡುವ ಮೂಲಕ ಸಂಸದೀಯ ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ. ಸದನದಲ್ಲಿ ಹೇಳಬಹುದಾಗಿದ್ದ ಎಲ್ಲಾ ವಿಷಯಗಳನ್ನು ಅಲ್ಲಿ ಹೇಳುತ್ತಿದ್ದಾರೆ ಎಂದು ಅಮಾನತುಗೊಂಡಿರುವ ಶಶಿ ತರೂರ್ ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement