ವೀಡಿಯೊ | ಪ್ರಧಾನಿ ನಿವಾಸದ ಬಳಿ ಪಾದಚಾರಿ ಮಾರ್ಗದಲ್ಲಿ ʼಪದ್ಮಶ್ರೀʼ ಪ್ರಶಸ್ತಿ ಇಟ್ಟು ಹೋದ ಒಲಿಂಪಿಕ್‌ ಪದಕ ವಿಜೇತ ಕುಸ್ತಿಪಟು ಬಜರಂಗ ಪುನಿಯಾ

ನವದೆಹಲಿ: ಬ್ರಿಜ್ ಭೂಷಣ ಶರಣ್ ಸಿಂಗ್ ಅವರ ಆಪ್ತ ಸಂಜಯ ಸಿಂಗ್ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಕರ್ತವ್ಯ ಪಥದ ಪ್ರಧಾನಿ ನಿವಾಸದ ಸಮೀಪದ ಪಾದಚಾರಿ ಮಾರ್ಗದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಇಟ್ಟು ಹೋಗಿದ್ದಾರೆ.
ಪದ್ಮಶ್ರೀಯನ್ನು ಕರ್ತವ್ಯ ಪಥದಲ್ಲಿ ತೊರೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುನಿಯಾ, ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ, ಆದರೆ ಪದಕವನ್ನು ಮನೆಗೆ ಮನೆಗೆ ಕೊಂಡಿಯ್ಯುವುದಿಲ್ಲ ಎಂದು ಹೇಳಿದ್ದಾರೆ.
“ನಾನು ಮೊದಲೇ ಹೇಳಿದಂತೆ ನಾವು ನಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗಾಗಿ ಹೋರಾಡುತ್ತಿದ್ದೆವು. ನನಗೆ ಅವರಿಗೆ ನ್ಯಾಯ ಸಿಗಲಿಲ್ಲ. ಈ ಕಾರಣದಿಂದಾಗಿ, ನಾನು ಈ ಗೌರವಕ್ಕೆ ಅರ್ಹನಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಇಲ್ಲಿಗೆ ಬಂದಿದ್ದೇನೆ, ಆದರೆ ನನಗೆ ಅಪಾಯಿಂಟ್‌ಮೆಂಟ್ ಇಲ್ಲದ ಕಾರಣ ಪ್ರಧಾನಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪ್ರಧಾನಿಗೆ ಬಿಡುವಿಲ್ಲದ ವೇಳಾಪಟ್ಟಿ ಇದೆ. ಹಾಗಾಗಿ ಪ್ರಧಾನಿಗೆ ಬರೆದ ಪತ್ರಕ್ಕೆ ಅನುಗುಣವಾಗಿ ನನ್ನ ಪ್ರಶಸ್ತಿಯನ್ನು ನೀಡುತ್ತಿದ್ದೇನೆ. ನಾನು ಈ ಪದಕವನ್ನು ನನ್ನ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಪುನಿಯಾ ಸುದ್ದಿಗಾರರಿಗೆ ತಿಳಿಸಿದರು.

ಡಿಸೆಂಬರ್ 21, ಗುರುವಾರ ನವದೆಹಲಿಯಲ್ಲಿ ನಡೆದ ಬಹುನಿರೀಕ್ಷಿತ ಡಬ್ಲ್ಯುಎಫ್‌ ಐ (WFI) ಚುನಾವಣೆಯಲ್ಲಿ ಬಿಜೆಪಿ ಸಂಸದ ಹಾಗೂ ಮಾಜಿ ಅಧ್ಯಕ್ಷ ಬ್ರಿಜ್‌ ಬೂಷಣ ಶರಣ ಸಿಂಗ್‌ ಅವರ ಆಪ್ತ ಸಂಜಯ ಸಿಂಗ್ ಅವರು ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆಯೋರಾನ್ ಅವರನ್ನು 40- 7 ಮತಗಳಿಂದ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಮಾಜಿ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೇಶದ ಅಗ್ರ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ 5 ತಿಂಗಳ ಸುದೀರ್ಘ ಪ್ರತಿಭಟನೆಯನ್ನು ನಡೆಸಿದ್ದರು.
“ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಮತ್ತು ಹೇಗೆ ಬದುಕಬೇಕು ಎಂದು ನನಗೆ ಅರ್ಥವಾಗಲಿಲ್ಲ. ಸರ್ಕಾರ ಮತ್ತು ಜನರು ನನಗೆ ತುಂಬಾ ಗೌರವ ನೀಡಿದರು. ಈ ಗೌರವದ ಭಾರದಲ್ಲಿ ನಾನು ಉಸಿರುಗಟ್ಟಿಸುವುದನ್ನು ಮುಂದುವರಿಸಬೇಕೇ? 2019 ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ನನಗೆ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳು ದೊರೆತಿವೆ. ಈ ಗೌರವಗಳು ನನಗೆ ಸಿಕ್ಕಾಗ ತುಂಬಾ ಸಂತೋಷವಾಯಿತು.ಜೀವನ ಯಶಸ್ವಿಯಾಗಿದೆ ಎಂದು ಅನಿಸಿತು.ಆದರೆ ಇಂದು ನಾನು ಆ ಕಾಲದ ಸಂತೋಷಕ್ಕಿಂತ ಹೆಚ್ಚು ದುಃಖಿತನಾಗಿದ್ದೇನೆ. ಈ ಗೌರವಗಳು ನನ್ನನ್ನು ಉಸಿರುಗಟ್ಟಿಸುತ್ತಿವೆ ಎಂದು ಪುನಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಬ್ರಿಜ್‌ ಭೂಷಣ ಆಪ್ತ ಸಂಜಯ ಸಿಂಗ್ ಗುರುವಾರ ಆಯ್ಕೆಯಾದ ನಂತರ ಸಾಕ್ಷಿ ಮಲಿಕ್, ಪುನಿಯಾ ಮತ್ತು ವಿನೇಶ್ ಫೋಗಟ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಮಯದಲ್ಲಿ ಮಲಿಕ್ ಅವರು ಪ್ರತಿಭಟಿಸುತ್ತ ಕ್ರೀಡೆಯನ್ನು ತೊರೆಯುವುದಾಗಿ ಘೋಷಿಸಿದರು. “ನಾವು ನಮ್ಮ ಹೃದಯದಿಂದ ಹೋರಾಡಿದ್ದೇವೆ ಆದರೆ ಬ್ರಿಜ್ ಭೂಷಣ್ ಅವರಂತಹ ವ್ಯಕ್ತಿ, ಅವರ ವ್ಯಾಪಾರ ಪಾಲುದಾರ ಮತ್ತು ನಿಕಟ ಸಹಾಯಕ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾದರೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ. ಇಂದಿನಿಂದ ನೀವು ನನ್ನನ್ನು ಅಂಕಣದಲ್ಲಿ ನೋಡುವುದಿಲ್ಲ” ಎಂದು ಸಾಕ್ಷಿ ಮಲಿಕ್ ಹೇಳಿದರು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಮಲಿಕ್ ಅವರು ತೀವ್ರ ದುಃಖ ಮತ್ತು ಭಾವನೆಯನ್ನು ವ್ಯಕ್ತಪಡಿಸಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದಿಂದಾಗಿ ಆಗಸ್ಟ್ 12 ರಂದು ಮೂಲತಃ ನಿಗದಿಯಾಗಿದ್ದ ಡಬ್ಲ್ಯುಎಫ್‌ಐ ಚುನಾವಣೆಯನ್ನು ಮುಂದೂಡಲಾಯಿತು, ಅದು ತಡೆಯಾಜ್ಞೆಯನ್ನು ಸೆಪ್ಟೆಂಬರ್ 25 ರವರೆಗೆ ವಿಸ್ತರಿಸಿತು.
ಮೂಲತಃ ಜೂನ್‌ನಲ್ಲಿ ನಿಗದಿಯಾಗಿದ್ದ ಈ ಚುನಾವಣೆಗಳು ದೇಶದಾದ್ಯಂತ ಕುಸ್ತಿಯನ್ನು ನಿಯಂತ್ರಿಸುತ್ತವೆ. WFI ಚುನಾವಣೆಗಳ ಕುರಿತು ಚರ್ಚಿಸಲು ಪುನಿಯಾ ಮತ್ತು ಮಲಿಕ್ ಈ ತಿಂಗಳ ಆರಂಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿಯಾದರು.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

 

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement