ಕೋವಿಡ್ ಬಂದರೆ 7 ದಿನ ಹೋಂ ಐಸೊಲೇಷನ್ ಕಡ್ಡಾಯ : ದಿನೇಶ ಗುಂಡೂರಾವ್

ಬೆಂಗಳೂರು: ಕೋವಿಡ್ ಸೋಂಕಿಗೆ ಒಳಗಾದರೆ ರೋಗಿಗಳು 7 ದಿನ ಕಡ್ಡಾಯವಾಗಿ ಹೋಂ ಐಸೊಲೇಷನ್ (ಮನೆ ಪ್ರತ್ಯೇಕತೆ)ನಲ್ಲಿರಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ನಿಟ್ಟಿನಲ್ಲಿ ಸಚಿವ ದಿನೇಶ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿ ಮಂಗಳವಾರ ಸಂಪುಟ ಉಪಸಮಿತಿ ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೋವಿಡ್ ಸೋಂಕಿತರ ಮನೆಗಳಿಗೆ ಸರ್ಕಾರಿ ವೈದ್ಯರು ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಜೆ.ಎನ್.1 ಉಪತಳಿ, ಹಾಗೂ ಕೋವಿಡ್ ಸೋಂಕಿನ ಕುರಿತು ವಿಸ್ತೃತವಾಗಿ ಸಭೆಯಲ್ಲಿ ಚರ್ಚೆ ನಡೆಸಿದ ಸಂಪುಟ ಉಪಸಮಿತಿ, ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೆಲವು ನಿರ್ಧಾರಗಳನ್ನ ತೆಗೆದುಕೊಂಡಿತು ಎಂದು ತಿಳಿಸಿದ್ದಾರೆ.

ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ…
ಹೊಸ ವರ್ಷಾಚರಣೆಗೆ ಸದ್ಯಕ್ಕೆ ನಿರ್ಬಂಧ ಬೇಡ ಎಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ನೀಡಲು ನಿರ್ಧರಿಸಲಾಯಿತು.‌ ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಬೇಕು. ಅಂತಹವರು ಜನರ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿಕೊಳ್ಳಬೇಕು. ಇದು ಖಾಸಗಿ ವಲಯಕ್ಕೂ ಅನ್ವಯವಾಗುತ್ತದೆ, ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು.
ಇತರೆ ಕಾಯಿಲೆ ಹೊಂದಿದವರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ನಿರ್ಧಾರ. ಕೇಂದ್ರ ಸರ್ಕಾರದಿಂದ 30 ಸಾವಿರ ಲಸಿಕೆ ಪಡೆಯಲು ಸಂಪುಟ ಉಪ ಸಮಿತಿ ನಿರ್ಧಾರ. ಆರೋಗ್ಯ ಸಿಬ್ಬಂದಿಗಳಿಗೆ ಸುರಕ್ಷತೆಯ ದೃಷ್ಟಿಯಿಂದ ಫ್ಲೂ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ಶಾಲೆಗೆ ಕಳುಹಿಸುವುದು ಬೇಡ…
ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಕಂಡುಬಂದರೆ ಶಾಲೆಗೆ ಕಳುಹಿಸದಿರುವುದು ಉತ್ತಮ. ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು.
ರಾಜ್ಯದಲ್ಲಿ ಜೆಎನ್.1 ಉಪತಳಿ ಹೆಚ್ಚಾಗುವ ಸಾಧ್ಯತೆಗಳಿವೆ. ನಿನ್ನೆಯ 60 ಸ್ಯಾಂಪಲ್ಸ್ ನಲ್ಲಿ 34 JN.1 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ನಿತ್ಯ 5 ಸಾವಿರ ಟೆಸ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 436 ಸಕ್ರಿಯ ಪ್ರಕರಣಗಳ ಪೈಕಿ 400 ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. 7 ಜನ ಐಸಿಯುನಲ್ಲಿದ್ದಾರೆ. ಖುದ್ದು ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಕಿಂಗ್ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್ ರಚನೆಗೆ ನಿರ್ಧಾರ. ಬೆಂಗಳೂರಿನ ವಿಕ್ಟೋರಿಯಾ, ಮತ್ತು ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ್.‌ ಐಸಿಯು ಬೆಡ್, ಹಾಗೂ ಐಸೊಲೇಷನ್ ಬೆಡ್ ವ್ಯವಸ್ಥೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
4 ಆಕ್ಸಿಜನ್ ಕಂಟೈನರ್ ಖರೀದಿ ಮಾಡಲಿದ್ದೇವೆ. ಕೇಂದ್ರ ಸರ್ಕಾರದಿಂದ 30 ಸಾವಿರ ಮುನ್ನೆಚ್ಚರಿಕೆ ವ್ಯಾಕ್ಸಿನ್ ಕೇಳಿದ್ದು, ಉಪ ಸಮಿತಿಯಲ್ಲಿ ಖರೀದಿಗೆ ನಿರ್ಧಾರ ಮಾಡಲಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್, ಉನ್ನತ ಶಿಕ್ಷಣ ಸಚಿವ ಸುಧಾಕರ್ ಸೇರಿದಂತೆ, ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಸಮಿತಿ ಅಧ್ಯಕ್ಷ ಡಾ. ರವಿ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement