“ಭಾರತದ ಹಸ್ತಾಂತರದ ವಿನಂತಿ ಸ್ವೀಕರಿಸಲಾಗಿದೆ, ಆದರೆ…”: ಮುಂಬೈ ದಾಳಿ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ಹಸ್ತಾಂತರದ ಬಗ್ಗೆ ಪಾಕಿಸ್ತಾನ

ಇಸ್ಲಾಮಾಬಾದ್ : 26/11 ಮುಂಬೈ  ದಾಳಿಯ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ನನ್ನು ಹಸ್ತಾಂತರಿಸುವಂತೆ ಭಾರತದ ವಿನಂತಿಯನ್ನು ಪಾಕಿಸ್ತಾನವು ಸ್ವೀಕರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ.
ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದರು.
ಮುಮ್ತಾಜ್ ಜಹ್ರಾ ಬಲೂಚ್ ಹೇಳಿಕೆಯಲ್ಲಿ, “ಹಫೀಜ್ ಸಯೀದ್ ನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹಸ್ತಾಂತರಿಸುವಂತೆ ಭಾರತೀಯ ಅಧಿಕಾರಿಗಳಿಂದ ಪಾಕಿಸ್ತಾನವು ಮನವಿಯನ್ನು ಸ್ವೀಕರಿಸಿದೆ” ಎಂದು ಹೇಳಿದ್ದಾರೆ. “ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ” ಎಂದು ಅವರು ಹೇಳಿದರು.
ಹಿಂದಿನ ದಿನ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆ ಎದುರಿಸಲು ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಭಾರತವು ಪಾಕಿಸ್ತಾನ ಸರ್ಕಾರಕ್ಕೆ ವಿನಂತಿಯನ್ನು ರವಾನಿಸಿದೆ ಎಂದು ಹೇಳಿದ್ದರು.

ಸಾಪ್ತಾಹಿಕ ಬ್ರೀಫಿಂಗ್ ಅನ್ನು ಉದ್ದೇಶಿಸಿ ಮಾತನಾಡಿದ ಅರಿಂದಮ್‌ ಬಾಗ್ಚಿ ಅವರು, ” ಹಫೀಜ್ ಸಯೀದ್ ಭಾರತದಲ್ಲಿ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಆತ ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕನೂ ಆಗಿದ್ದಾನೆ. ಈ ನಿಟ್ಟಿನಲ್ಲಿ, ನಾವು ಸಂಬಂಧಿತ ದಾಖಲೆಗಳೊಂದಿಗೆ ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಲು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ನಾವು ವಿನಂತಿ ಕಳುಹಿಸಿದ್ದೇವೆ ಎಂದು ಹೇಳಿದ್ದರು.
ಗಮನಾರ್ಹವೆಂದರೆ, ವಿಶ್ವಸಂಸ್ಥೆ ನಿಷೇಧಿತ ಭಯೋತ್ಪಾದಕನಾಗಿರುವ ಸಯೀದ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್ಇಟಿ) ಸ್ಥಾಪಕ. ಮುಂಬೈನಲ್ಲಿ ನಡೆದ ಮಾರಣಾಂತಿಕ 26/11 ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.
ಇತರ ಆರೋಪಗಳಿಗಾಗಿ ಜುಲೈ 17, 2019 ರಿಂದ ಜೈಲಿನಲ್ಲಿರುವ ಮುಹಮ್ಮದ್ ಹಫೀಜ್ ಸಯೀದ್‌ಗೆ ಏಪ್ರಿಲ್ 2022 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿರುವ ವಿಶೇಷ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು “ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕಾಗಿ” 33 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

2000 ರ ದಶಕದಲ್ಲಿ ವಿಶ್ವಸಂಸ್ಥೆ ಮತ್ತು ಯುರೋಪಿಯನ್‌ ಒಕ್ಕೂಟದಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದರೂ, ಸುಮಾರು ಎರಡು ದಶಕಗಳಿಂದ ಸಯೀದ್ ಮೇಲೆ ಆರೋಪ ಹೊರಿಸಲಾಗಿಲ್ಲ ಅಥವಾ ಹಸ್ತಾಂತರಿಸಲಾಗಿಲ್ಲ. ಡಿಸೆಂಬರ್ 2008 ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಯೀದ್‌ನನ್ನು ಭಯೋತ್ಪಾದಕ ಎಂದು ಹೆಸರಿಸಿತ್ತು.
ಏತನ್ಮಧ್ಯೆ, ಹಫೀಜ್ ಸಯೀದ್ ನ ರಾಜಕೀಯ ಘಟಕವಾದ ಪಾಕಿಸ್ತಾನ್ ಮಾರ್ಕಾಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಫೆಬ್ರವರಿ 8ರಂದು ನಡೆಯಲಿರುವ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪಾಕಿಸ್ತಾನದಾದ್ಯಂತ ಪ್ರತಿಯೊಂದು ರಾಷ್ಟ್ರೀಯ ಮತ್ತು ಪ್ರಾಂತೀಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಕೂಡ ರಾಷ್ಟ್ರೀಯ ಅಸೆಂಬ್ಲಿಯ ಕ್ಷೇತ್ರ ಎನ್‌ಎ-127 ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾನೆ ಎಂದು ಲಾಹೋರ್ ಡಾನ್ ವರದಿ ಮಾಡಿದೆ. ಪಿಎಂಎಂಎಲ್‌ನ ಕೇಂದ್ರ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಮುಖ್ಯಸ್ಥ ನವಾಜ್ ಷರೀಫ್ ವಿರುದ್ಧ ಎನ್‌ಎ-130 ರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement